ಡ್ರಗ್ಸ್‌ ಮುಕ್ತ ಸಮಾಜಕ್ಕೆ ಜನರ ಸಹಕಾರ ಅಗತ್ಯ: ಎಸ್‌ಪಿ ಪ್ರದೀಪ ಗುಂಟಿ

| Published : Mar 10 2025, 12:17 AM IST

ಸಾರಾಂಶ

ಪ್ರತಿಯೊಬ್ಬರೂ ಕಾನೂನು ಪಾಲನೆಗೆ ಮುಂದಾಗಬೇಕು ಪೊಲೀಸರಿಗೆ ಕಾನೂನು ರಕ್ಷಣೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹೇಳಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ನಶೆಯ ಚಟ ಹೊಂದಿದವರು ಅವರಿಗಷ್ಟೇ ಮಾರಕವಲ್ಲ ಇಡೀ ಸಮಾಜಕ್ಕೇ ಮಾರಕ ಹೀಗಾಗಿ ಡ್ರಗ್ಸ್‌ ಮುಕ್ತ ಸಮಾಜ ಇಂದಿನ ಅನಿವಾರ್ಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದರು.ಅವರು ಬೀದರ್‌ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಹಯೋಗದಲ್ಲಿ ನಗರದ ಸಿದ್ಧಾರೂಡ ಮಠದ ಆವರಣದಿಂದ ಆರಂಭಗೊಂಡು ಶಿವನಗರ ವಾಕಿಂಗ್‌ ಪಾಥ್‌ ವರೆಗೆ ನಡೆದ 5 ಕಿ.ಮೀ. ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರೂ ಕಾನೂನು ಪಾಲನೆಗೆ ಮುಂದಾಗಬೇಕು ಪೊಲೀಸರಿಗೆ ಕಾನೂನು ರಕ್ಷಣೆಗೆ ಸಹಕಾರ ನೀಡಬೇಕು ಎಂದರು.ಡ್ರಗ್ಸ್‌ ತೆಗೆದುಕೊಳ್ಳಲು ಬೇಕಾದ ಹಣಕ್ಕಾಗಿ ಕಳ್ಳತನ, ಸಮಾಜಘಾತುಕ ಕಾರ್ಯಗಳಲ್ಲಿ ತೊಡಗುತ್ತಾನೆ ಹೀಗಾಗಿ ಡ್ರಗ್ಸ್‌ ಸೇವನೆ ಮಾಡುವವರು ಹಾಗೂ ಮಾರಾಟ ಮಾಡುವವರ ಬಗ್ಗೆ ಪೊಲೀಸ್‌ಗೆ ಮಾಹಿತಿ ನೀಡಿದ್ದೆಯಾದಲ್ಲಿ ಡ್ರಗ್ಸ್‌ ಮುಕ್ತ ಸಮಾಜ ಮಾಡಲು ಪೊಲೀಸರಿಗೆ ಸಹಕಾರಿಯಾದಂತಾಗುತ್ತದೆ ಎಂದರು. ಇಲಾಖೆಗಳು ಹೆಚ್ಚು ಜನಪರ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾರ್ವಜನಿಕರ ಸಹಕಾರ ಮತ್ತು ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಡ್ರಗ್ಸ್‌ ನಿಯಂಯ್ರಣಕ್ಕೆ ಹಾಗೂ ರಸ್ತೆ ಅಪಘಾತಗಳನ್ನು ತಪ್ಪಿಸಿ ಸಂಚಾರ ನಿಯಮಗಳನ್ನು ಉತ್ತಮವಾಗಿ ನಿರ್ವಹಿಸಲು ಯುವಕ, ಯುವತಿಯರ ಸಹಕಾರ ಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಕರೆ ನೀಡಿ ಪೊಲೀಸ್‌ ರನ್‌-2025ಗೆ ಯುವ ಸಮೂಹದಿಂದ ಉತ್ತಮ ಸ್ಪಂದನೆ ಮೂಡಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾಹಿನಿ ಪ್ರದೀಪ ಗುಂಟಿ ಅವರು ಮಾತನಾಡಿ, ಯುವ ಜನಾಂಗ ಡ್ರಗ್ಸ್‌ ಹಾ‍ವಳಿಯಿಂದ ಜೀವನ ಹಾಳು ಮಾಡಿಕೊಳ್ಳದೇ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗ ಬೇಕು ಅದಕ್ಕಾಗಿ ಕಾಲೇಜು ದಿನಗಳಲ್ಲಿ ಎಚ್ಚರಿಕೆಯ ನಡೆ ಹೊಂದಿರಬೇಕು ಎಂದರು.ಸೈಬರ್‌ ಅಪರಾಧಗಳ ಬಗ್ಗೆಯೂ ಎಚ್ಚರವಹಿಸಬೇಕು. ನಾವಷ್ಟೇ ಅದರ ಬಗ್ಗೆ ಇನ್ನಿತರ ಕುಟುಂಬದ ಸದಸ್ಯರಿಗೆ ಹಾಗೂ ಮನೆಯ ವಾಚಮನ್‌ಗಳು ಹಾಗೂ ಮನೆಗೆಲಸದವರಿಗೆ ತಿಳುವಳಿಕೆ ನೀಡುವುದು ಇಂದಿನ ಯುವ ಜನಾಂಗದ ಕರ್ತವ್ಯ ಕೂಡ ಆಗಿದೆ ಎಂದರು.ಫಿಟ್ನೆಸ್‌ ಫಾರ್‌ ಆಲ್‌, ಡ್ರಗ್ಸ್‌ ಮುಕ್ತ ಕರ್ನಾಟಕ, ಕಡ್ಡಾಯ ಹೆಲ್ಮೆಟ್‌ ಧರಿಸಿ ಮತ್ತು ಸೈಬರ್‌ ಅಪರಾಧ ಮುಕ್ತ ಬೀದರ್‌, ನಮ್ಮ ಪೊಲೀಸ್‌ ನಮ್ಮ ಹೆಮ್ಮೆ ಘೋಷ ವಾಕ್ಯದೊಂದಿಗೆ ನಡೆದು ಸಾವಿರಾರು ಜನ ಯುವಕರು ಪಾಲ್ಗೊಂಡಿದ್ದರು. ಮ್ಯಾರಥಾನ್‌ ಬಿವಿಬಿ ಕಾಲೇಜು ಮೈಲೂರ್ ಕ್ರಾಸ್, ಹಾರೂರಗೇರಿ ಕಮಾನ್, ಬೊಮ್ಮಗೊಂಡೇಶ್ವರ್ ವೃತ್ತ, ಭಗತ್ ಸಿಂಗ್ ವೃತ್ತ, ಶಿವಾಜಿ ವೃತ್ತ, ಮಡಿವಾಳ ವೃತ್ತದ ಮಾರ್ಗವಾಗಿ ಶಿವನಗರ ವಾಕಿಂಗ್ ಪಾಥ್ ಬಳಿ ಮುಕ್ತಾಯಗೊಂಡಿತು.ಎಎಸ್ಪಿ ಚಂದ್ರಕಾಂತ ಪೂಜಾರಿ, ಡಿಆರ್‌ ಡಿಎಸ್‌ಪಿ ಸುನೀಲ ಕೂಡ್ಲಿ, ಡಿಎಸ್‌ಬಿ ಇನ್ಸಪೆಕ್ಟರ್‌ ಅಡಿವೆಪ್ಪ ಬನ್ನಿ, ಎಸ್ಬಿಐ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು, ವಿದ್ಯಾರ್ಥಿಗಳು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.