ಪೊಲೀಸರೊಂದಿಗೆ ಜನರ ಸಹಕಾರ ಅಗತ್ಯ : ಪೃಥ್ವಿಕ್‌ ಶಂಕರ್‌

| Published : Aug 04 2025, 11:45 PM IST

ಪೊಲೀಸರೊಂದಿಗೆ ಜನರ ಸಹಕಾರ ಅಗತ್ಯ : ಪೃಥ್ವಿಕ್‌ ಶಂಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಸೂಕ್ತ ಕಾನೂನು ವ್ಯವಸ್ಥೆ ಕಾಪಾಡಿಕೊಳ್ಳಲು ಹಾಗೂ ಶಾಂತಿ ಸುವ್ಯವಸ್ಥೆಯಿಂದಿರಲು, ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು, ಪೊಲೀಸರು ಜನಸ್ನೇಹಿ ಆಗಿರಲು ಜನರ ಸಹಕಾರ ಅಗತ್ಯವಾಗಿದೆ ಎಂದು ಯಾದಗಿರಿ ಎಸ್‌ಪಿ ಪೃಥ್ವಿಕ್‌ ಶಂಕರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಸಮಾಜದಲ್ಲಿ ಸೂಕ್ತ ಕಾನೂನು ವ್ಯವಸ್ಥೆ ಕಾಪಾಡಿಕೊಳ್ಳಲು ಹಾಗೂ ಶಾಂತಿ ಸುವ್ಯವಸ್ಥೆಯಿಂದಿರಲು, ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು, ಪೊಲೀಸರು ಜನಸ್ನೇಹಿ ಆಗಿರಲು ಜನರ ಸಹಕಾರ ಅಗತ್ಯವಾಗಿದೆ ಎಂದು ಯಾದಗಿರಿ ಎಸ್‌ಪಿ ಪೃಥ್ವಿಕ್‌ ಶಂಕರ್‌ ತಿಳಿಸಿದರು.

ಪಟ್ಟಣದ ಹರಿಜನವಾಡದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ, ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರಸ್ತೆ ಸುರಕ್ಷತೆ ಕಾಪಾಡಿಕೊಳ್ಳಲು ದ್ವಿಚಕ್ರ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಮನಗಳ್ಳತನ ಆಗದಂತೆ ಮನೆಯ ಮಾಲೀಕರು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಹಾಗೂ ಸೈಬರ್ ಅಪರಾಧದ ಬಗ್ಗೆ ಅರಿವು ಇರಬೇಕು ಎಂದರು.

ಸಮಾಜದಲ್ಲಿ ಯಾವುದೇ ಅಪರಾಧಗಳು ನಡೆಯದಂತೆ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕಾಗಿದೆ. ದಲಿತರಿಗೆ ಯಾವುದೇ ತೊಂದರೆಯಾದರೆ ನಮ್ಮ ಪೊಲೀಸ್‌ ಇಲಾಖೆ ನಿಮ್ಮ ಜತೆಗೆ ಇದೆ. ಕಾನೂನು ನಿಮಗೆ ಸುರಕ್ಷತೆ ನೀಡುತ್ತದೆ ಎಂದು ತಿಳಿಸಿದರು.

ಸಮಾಜದ ಕೆಲವು ಮುಖಂಡರಾದ ರಂಗಸ್ವಾಮಿ ಮಾತನಾಡಿ, ಚಿಂತನಹಳ್ಳಿ, ಚಂಡರಕಿ ಮುಂತಾದ ಗ್ರಾಮಗಳಲ್ಲಿ ದಲಿತರಿಗೆ ದೇವಾಲಯಕ್ಕೆ ಪ್ರವೇಶ ನಿಷೇಧವಿದೆ ಮತ್ತು ಕೆಲವು ಅಂಗಡಿಗಳಲ್ಲಿ ಕ್ಷೌರ ಮಾಡುವುದಿಲ್ಲ ಎಂದು ತಿಳಿಸಿದರು.

ಲಾಲಪ್ಪ ತಲಾರಿ ಮಾತನಾಡಿ, ಹರಿಜನವಾಡಿಯಲ್ಲಿ ಸೋಲಾರ್ ದೀಪ ಹಾಳಾಗಿದ್ದು, ಸರಿಪಡಿಸಬೇಕು, ಮಹಿಳೆಯರಿಗೆ ತೊಂದರೆಯಾಗಿದೆ ಎಂದು ಗಮನಕ್ಕೆ ತಂದರು.

ಜಿಲ್ಲಾ ಡಿಎಸ್‌ಎಸ್ ಸಂಚಾಲಕ ಮರ‍್ರೆಪ್ಪ ಮಾತನಾಡಿ, ಚಿನ್ನಕಾರ ಗ್ರಾಮದಲ್ಲಿ ಅಂಬೇಡ್ಕರ್‌ ಭವನಕ್ಕೆ ನೀಡಿದ 6 ಗುಂಟೆ ಜಮೀನು ಗುರುತಿಸಿ ಕೊಡಬೇಕು, ಅಲ್ಲಿನ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ನಮ್ಮ ತಕರಾರು ಇಲ್ಲ. ಅದಕ್ಕಿಂತ ಮುಂಚೆ ನಮ್ಮ ಜಾಗ ಸರಕಾರ ನೀಡಬೇಕು ಎಂದರು.

ಡಿವೈಎಸ್ಪಿ ಸುರೇಶ, ಗುರುಮಠಕಲ್ ಪಿ.ಐ ವೀರಣ್ಣ ದೊಡ್ಡಮನಿ, ತಾಲೂಕು ಪಂಚಾಯತ್ ಇ.ಓ ಅಮರೇಶ್ ಪಾಟೀಲ್, ಉಪ ತಹಸೀಲ್ದಾರ್ ನರಸಿಂಹಸ್ವಾಮಿ, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಮರೆಪ್ಪ, ಪುರಸಭೆ ಸದಸ್ಯ ಬಾಬು ತಲಾರಿ, ಹಿರಿಯ ಮುಖಂಡರಾದ ಭೀಮಶಪ್ಪ ಗೂಡಿಸೆ, ಹಣಮಂತ ಶನಿವಾರಂ, ಅಶೋಕ ಶನಿವಾರಂ ಮುಂತಾದವರು ಉಪಸ್ಥಿತರಿದ್ದರು.