ಸಾರಾಂಶ
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಬರುತ್ತೇವೆ ಎಂದು ಹೇಳಿಕೊಂಡಿದ್ದರು, ಆದರೆ, ಜನ ಎನ್‌ಡಿಎಗೆ ಬೆಂಬಲಿಸಿದ್ದಾರೆ. ಕಾಂಗ್ರೆಸ್‌ಗೆ ನಿರಾಶೆ ಮೂಡಿಸಿದ್ದಾರೆ ಎಂದು ಸಂಸದ ರಾಘವೇಂದ್ರ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ 20 ಸ್ಥಾನಗಳಲ್ಲಿ ಬರುವುದಾಗಿ ಹೇಳಿಕೊಂಡಿತು. ಆದರೆ 9 ಸ್ಥಾನಕ್ಕೆ ಸೀಮಿತವಾಗಿದೆ. ಕಾಂಗ್ರೆಸ್‍ಗೆ ಮುಖಭಂಗವಾಗಿದೆ. ಮತದಾರರು ನರೇಂದ್ರ ಮೋದಿಗೆ ಬೆಂಬಲ ನೀಡಿದ್ದಾರೆ. ಜೊತೆಗೆ ಜೆಡಿಎಸ್ ಬೆಂಬಲ ಕೂಡ ನಮಗೆ ಇದಿದ್ದರಿಂದ ರಾಜ್ಯದಲ್ಲಿ ನಾವು ಅತಿ ಹೆಚ್ಚು ಸ್ಥಾನ ಗಳಿಸಿದ್ದೇವೆ. ಎಚ್.ಡಿ.ಕುಮಾರಸ್ವಾಮಿಯವರು ನನ್ನ ಕ್ಷೇತ್ರದಲ್ಲಿ 2 ಬಾರಿ ಬಂದು ಪ್ರಚಾರ ಮಾಡಿದರು ಎಂದು ಹೇಳಿದರು.ಈ ಬಾರಿ ನಿರೀಕ್ಷೆ ಮಟ್ಟದ ಫಲಿತಾಂಶ ದೇಶ ಮಟ್ಟದಲ್ಲಿ ಬಂದಿಲ್ಲ. ಸ್ವಂತ ಬಲದ ಮೇಲೆ ಬಂದು ಭಾರತವನ್ನು ವಿಶ್ವಗುರಿಯಾಗಿಸುವ ಕನಸು ನನಸಾಗಿಸಲಿದ್ದೇವೆ. ಕುಳಿತು ಚರ್ಚೆ ಮಾಡಲಿದ್ದೇವೆ. ಜಿಲ್ಲೆಯ ಜನ ನನ್ನನ್ನು ಸಂಸದರನ್ನಾಗಿ ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ಸಚಿವ ಸ್ಥಾನ ಕೊಡುವುದು, ಬಿಡುವುದು ಸಂಘಟನೆಗೆ ಬಿಟ್ಟ ವಿಷಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಲೆನಾಡಿನಂತೆ ಶಿವಮೊಗ್ಗದಲ್ಲಿ ಪರಿಸರ ಉಳಿಸಿಕೊಂಡು ಅಭಿವೃದ್ಧಿ ಕೆಲಸವಾಗಬೇಕು. ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ. ಗಾಂಜಾ ಸೇವನೆ ಮಾಡುವ ಯುವಕರು ರಾಕ್ಷಸೀಯ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದನ್ನು ತಡೆಹಿಡಿಯುವ ಕೆಲಸವನ್ನ ಎಲ್ಲಾ ಜನಪ್ರತಿನಿಧಿಗಳು ಮಾಡುವಂತೆ ನಮ್ಮವರು ಅಪೇಕ್ಷಿಸಿದ್ದಾರೆ. ಅದರಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು.2.43 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಜವಾಬ್ದಾರಿ ಹೆಚ್ಚಾಗಿದೆ. ದ್ವೇಷದ ಅಪಪ್ರಚಾರ ಚುನಾವಣೆ ವೇಳೆ ನಡೆದಿದೆ. ಈಗ ಜನ ತೀರ್ಪು ನೀಡಿದ್ದಾರೆ. ದ್ವೇಷವನ್ನ ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದ ರಾಘವೇಂದ್ರ ಈ ಬಾರಿ ಮುಂಗಾರು ಕೈಗೊಡುವ ನಿರೀಕ್ಷೆ ಹೆಚ್ಚಾಗಿದೆ ಎಂದು ತಿಳಿಸಿದರು.
ವಿಐಎಸ್ ಎಲ್ ಕಾರ್ಖಾನೆ, ಕಸ್ತೂರಿ ರಂಗನ ವರದಿ, ಬಗುರ್ ಹುಕುಂ, ಶರಾವತಿ ಮುಳುಗಡೆ ಸಂತ್ರಸ್ಥರ ವಿಚಾರ ಬಗೆಹರಿಸಲಾಗುತ್ತಿಲ್ಲ. ಈ ಅವಧಿಯನ್ನ ಸಂಪೂರ್ಣವಾಗಿ ಉಪಯೋಗಿಸುವೆ. ವಿಮಾನನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಮಸ್ಯೆ ಹೆಚ್ಚಾಗಿದೆ. ಅಭಿವೃದ್ಧಿ ಮೂಲಕವೇ ಜನರ ಋಣ ತೀರಿಸಬೇಕು. ಆ ನಿಟ್ಟಿನಂತ ಮತ್ತಷ್ಟು ಪ್ರಾಮಾಣಿಕವಾಗಿ ಸೇವೆ ಮಾಡುವೆ ಎಂದರು.ಬೈಂದೂರು ಸೇರಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನನಗೆ ಅತ್ಯಧಿಕ ಮತ ನೀಡಿದ್ದಾರೆ. ಹಾಗೆ ನೋಡಿದರೆ ಶಿಕಾರಿಪುರದಲ್ಲಿ ಸ್ವಲ್ಪ ಅಂತರ ಕಡಿಮೆ ಯಾಗಿರಬಹುದು. ಆದರೆ ಉಳಿದೆಲ್ಲ ಕಡೆ ಹೆಚ್ಚಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮುಖಂಡರಾದ ಎಸ್.ರುದ್ರೇಗೌಡ, ಗಿರೀಶ್ ಪಟೇಲ್, ಆರ್.ಕೆ.ಸಿದ್ರಾಮಣ್ಣ, ಟಿ.ಡಿ.ಮೇಘರಾಜ್, ದತ್ತಾತ್ರಿ, ಕೆ.ಜಿ.ಕುಮಾರಸ್ವಾಮಿ, ಅಶೋಕ್‍ನಾಯಕ್, ಎಂ.ಜೆ.ರಾಜಶೇಖರ್, ಡಾ.ಧನಂಜಯಸರ್ಜಿ, ಹರಿಕೃಷ್ಣ, ನಾಗರಾಜ್, ಮಧುಸೂದನ್, ಮಾಲತೇಶ್, ಅಣ್ಣಪ್ಪ, ಮೋಹನ್‍ರೆಡ್ಡಿ, ಶಿವಣ್ಣ, ಉಮೇಶ್ ಇದ್ದರು.