ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಪಟ್ಟಣ ಸೇರಿ ತಾಲೂಕಿನಲ್ಲಿ ಜನರು ಭರದ ಸಿದ್ದತೆ ನಡೆಸಿದ್ದಾರೆ. ಬರದ ಮಧ್ಯೆಯೂ ಜನರು ಹಬ್ಬವನ್ನು ಸಂಭ್ರಮ, ಶ್ರದ್ಧಾ-ಭಕ್ತಿಯಿಂದ ಆಚರಿಸಲು ಮುಂದಾಗಿದ್ದಾರೆ.
ಬಸವರಾಜ ನಂದಿಹಾಳಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಪಟ್ಟಣ ಸೇರಿ ತಾಲೂಕಿನಲ್ಲಿ ಜನರು ಭರದ ಸಿದ್ದತೆ ನಡೆಸಿದ್ದಾರೆ. ಬರದ ಮಧ್ಯೆಯೂ ಜನರು ಹಬ್ಬವನ್ನು ಸಂಭ್ರಮ, ಶ್ರದ್ಧಾ-ಭಕ್ತಿಯಿಂದ ಆಚರಿಸಲು ಮುಂದಾಗಿದ್ದಾರೆ.ಪಟ್ಟಣದಲ್ಲಿ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಸೀರೆ ಖರೀದಿ ಜೋರಾಗಿದೆ. ಜನರು ಬಟ್ಟೆ ಖರೀದಿಯಲ್ಲಿ ತೊಡಗಿದ್ದಾರೆ. ಶನಿವಾರ ಬಟ್ಟೆ ಅಂಗಡಿ ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ವಿವಿಧೆಡೆಗಳಿಂದ ಜನರು ಆಗಮಿಸಿದ್ದು ಕಂಡು ಬಂತು. ದೀಪಾವಳಿ ಹಬ್ಬಕ್ಕೆ ಅಗತ್ಯ ಪೂಜಾ ಸಾಮಗ್ರಿಗಳು, ಆಕಾಶ ಬುಟ್ಟಿ, ಹೊಸ ಬಟ್ಟೆ ಸೇರಿದಂತೆ ಅಲಂಕಾರಿಕ ಸಾಮಗ್ರಿಗಳು, ಎಲೆಕ್ಟ್ರಾನಿಕ್ ಅಲಂಕಾರಿಕ ಉಪಕರಣಗಳನ್ನು ಖರೀದಿಸುವಲ್ಲಿ ಜನರು ಬ್ಯುಸಿಯಾಗಿದ್ದಾರೆ. ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಕಳೆದ ಹಲವು ದಿನಗಳಿಂದಲೇ ಮನೆ, ಅಂಗಡಿ-ಮುಂಗಟ್ಟುಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.ಶನಿವಾರ ನೀರು ತುಂಬುವ ಹಬ್ಬದಿಂದ ಆರಂಭವಾಗುವ ದೀಪಾವಳಿ ಹಬ್ಬ ಐದು ದಿನಗಳ ಕಾಲ ನಡೆಯಲಿದೆ. ಭಾನುವಾರ ಬೆಳಗ್ಗೆ ನರಕ ಚತುದರ್ಶಿ ಮೂಹರ್ತ ಇರುವುದರಿಂದ ಬೆಳಗ್ಗೆ ಬೇಗನೆ ಎದ್ದು ಮಕ್ಕಳು, ಪುರುಷರು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಹೆಣ್ಣು ಮಕ್ಕಳಿಂದ ಆರತಿ ಮಾಡಿಸಿಕೊಳ್ಳುತ್ತಾರೆ. ಈ ಸಲ ದೀಪಾವಳಿ ಅಮವಾಸ್ಯೆ ಭಾನುವಾರ ಬೆಳಗ್ಗೆ 11.28 ಕ್ಕೆ ಆರಂಭವಾಗಿ ಸೋಮವಾರ ಮಧ್ಯಾಹ್ನ 12.31 ಮುಕ್ತಾಯವಾಗುತ್ತದೆ. ಇದರಿಂದಾಗಿ ಎರಡು ದಿನ ಕಾಲ ದೀಪಾವಳಿ ಅಮವಾಸ್ಯೆ ಆಚರಿಸುವ ಸಾಧ್ಯತೆಯಿದೆ. ಪಟ್ಟಣದಲ್ಲಿ ಗುರು-ಹಿರಿಯರು ಭಾನುವಾರ ನರಕ ಚತುದರ್ಶಿ, ಸೋಮವಾರ ಅಮವಾಸ್ಯೆ ಆಚರಣೆ, ಮಂಗಳವಾರ ಬಲಿಪಾಡ್ಯಮಿ ಎಂದು ನಿರ್ಣಯಿಸಿದ್ದಾರೆ. ಇದರಂತೆ ಪಟ್ಟಣದಲ್ಲಿ ಸೋಮವಾರ ದೀಪಾವಳಿ ಅಮವಾಸ್ಯೆ ಆಚರಿಸಲಾಗುತ್ತದೆ. ಮನೆಯಲ್ಲಿ ಸಂಜೆ ಲಕ್ಷ್ಮೀ ಪೂಜೆ ಮಾಡುವವರು ಭಾನುವಾರ ಸಂಜೆಯೇ ಲಕ್ಷ್ಮೀ ಪೂಜೆ ಮಾಡುವ ಸಾಧ್ಯತೆಯೂ ಇದೆ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಅಮವಾಸ್ಯೆಯಂದು ಪ್ರತಿ ಮನೆ, ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆಯನ್ನು ಸಂಭ್ರಮದಿಂದ ಪೂಜಿಸಲಾಗುತ್ತದೆ.ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆ ವಿಶೇಷವಾಗಿ ಚೆಂಡು ಹೂ ಸೇರಿದಂತೆ ವಿವಿಧ ತರಹದ ಹೂಗಳು, ಹಣ್ಣುಗಳು ಮಾರುಕಟ್ಟೆ ಬರುತ್ತವೆ. ಮಳೆ ಬಾರದೇ ಇರುವುದರಿಂದಾಗಿ ಚೆಂಡು ಹೂ ಸೇರಿದಂತೆ ಹೂಗಳ ದರ ದುಬಾರಿಯಾಗುವ ಸಾಧ್ಯತೆಯಿದೆ. ಬಹುತೇಕ ವಸ್ತುಗಳ ದುಬಾರಿಯಾಗಿವೆ. ಅಂಗಡಿಗಳಲ್ಲಿ ತಹರೇವಾರಿ ಆಕಾಶ ಬುಟ್ಟಿಗಳು ಮಾರಾಟಕ್ಕೆ ಬಂದಿವೆ. ಆಕಾಶ ಬುಟ್ಟಿಗಳನ್ನು ಕೊಳ್ಳುವುದು ಕಂಡು ಬಂದಿತು. ಪಟ್ಟಣದಲ್ಲಿ ಒತ್ತುಗಾಡಿಯಲ್ಲಿ ವಿವಿಧ ಆಕಾರದ ದೀಪದ ಹಣತೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳು ಸೇರಿದಂತೆ ಹಬ್ಬಕ್ಕೆ ಅಗತ್ಯ ಸಾಮಾನುಗಳ ಮಾರಾಟ ಭರಾಟೆ ಜೋರಾಗಿ ನಡೆಯುತ್ತಿದೆ.ದೀಪಾವಳಿ ಹಬ್ಬವು ಎಲ್ಲರ ಜೀವನದಲ್ಲಿ ಅಂಧಕಾರವನ್ನು ತೊಳೆದು ಹಾಕಿ ಜೀವನದಲ್ಲಿ ಹೊಸ ಬೆಳಕು ಮೂಡಿಸಿಕೊಳ್ಳಬೇಕೆಂಬ ಸಂದೇಶ ನೀಡುತ್ತದೆ.ಕೋಟ್ನಮ್ಮಲ್ಲಿ ಲಕ್ಷ್ಮೀ ಪೂಜೆಗೆ ಬೇಕಾದ ಅಗತ್ಯ ವಸ್ತುಗಳು ಸಿಗುತ್ತವೆ. ತಹರೇವಾರಿ ಮಣ್ಣಿನ ಹಣತೆಗಳು ಸಹ ಇವೆ. ವಿವಿಧ ಲಕ್ಷ್ಮೀ ಪೋಟೋ, ಲಕ್ಷ್ಮೀಗಟ್ಟು ಸಹ ಮಾರಾಟ ಮಾಡಲಾಗುತ್ತಿದೆ. ಶನಿವಾರ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ.ಲಕ್ಷ್ಮೀಬಾಯಿ ಕರಗದಾರ, ರಸ್ತೆ ಬದಿಯ ವ್ಯಾಪಾರಿ
-----