ಕಳೆದ ಒಂದು ವಾರದಿಂದ ವಿದ್ಯಾರಣ್ಯಪುರಂ, ಕನಕಗಿರಿ, ಚಾಮುಂಡಿಪುರಂ, ಜೆ.ಪಿ. ನಗರ, ನಾಚನಹಳ್ಳಿಪಾಳ್ಯ, ಕುವೆಂಪುನಗರ, ಅಶೋಕಪುರಂ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಹಿಸಲಾಗದ ದುರ್ವಾಸನೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿದ್ಯಾರಣ್ಯಪುರಂನ ಸೂಯೇಜ್ ಫಾರಂ ಕಸ ಸಂಗ್ರಹಣೆ ಮತ್ತು ಸಂಸ್ಕರಣಾ ಘಟಕದಿಂದ ಕಳೆದ ಒಂದು ವಾರದಿಂದ ಅತಿಯಾದ ದುರ್ವಾಸನೆ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು, ಶನಿವಾರ ಘಟಕಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.ಕಳೆದ ಒಂದು ವಾರದಿಂದ ವಿದ್ಯಾರಣ್ಯಪುರಂ, ಕನಕಗಿರಿ, ಚಾಮುಂಡಿಪುರಂ, ಜೆ.ಪಿ. ನಗರ, ನಾಚನಹಳ್ಳಿಪಾಳ್ಯ, ಕುವೆಂಪುನಗರ, ಅಶೋಕಪುರಂ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಹಿಸಲಾಗದ ದುರ್ವಾಸನೆ ಹರಡುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ನಿರಂತರವಾಗಿ ದೂರವಾಣಿ ಕರೆಗಳ ಮೂಲಕ ತಮ್ಮ ಸಮಸ್ಯೆಗಳನ್ನು ತಿಳಿಸಿ, ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಅವರು ಸ್ಥಳ ಪರಿಶೀಲನೆ ನಡೆಸಿದರು.ಕಳೆದ 3 ವರ್ಷಗಳಿಂದ ಇಲ್ಲದಿದ್ದ ಇಂತಹ ತೀವ್ರ ದುರ್ವಾಸನೆ ಈಗ ಏಕಾಏಕಿ ಕಾಣಿಸಿಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿದ ಎಂ.ಕೆ. ಸೋಮಶೇಖರ್, ತ್ಯಾಜ್ಯ ನಿರ್ವಹಣೆಯಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ದುರ್ವಾಸನೆಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಶೇಷವಾಗಿ ವಯೋವೃದ್ಧರು ಮತ್ತು ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.ಕಸದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಿ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಲಾಗಿದೆ. ಆದರೆ, ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದು ಸರಿಯಲ್ಲ. ತ್ಯಾಜ್ಯ ಸಂಸ್ಕರಣಾ ಪ್ರಕ್ರಿಯೆಯಲ್ಲಿ ಬಯೋಕಲ್ಚರ್ ವಿಧಾನವನ್ನು ಸಮರ್ಪಕವಾಗಿ ಅನುಸರಿಸದಿರುವುದೂ ದುರ್ವಾಸನೆಗೆ ಕಾರಣವಾಗಿರಬಹುದು. ಈ ಬಗ್ಗೆ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ, ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಬೇಕು ಎಂದು ಅವರು ಆಗ್ರಹಿಸಿದರು.ಮಾರುಕಟ್ಟೆ ತ್ಯಾಜ್ಯ ಹಾಗೂ ಮಾಂಸದ ತ್ಯಾಜ್ಯವನ್ನು ಸೂಕ್ತ ನಿಯಮಗಳನ್ನು ಪಾಲಿಸದೆ ಈ ಘಟಕಕ್ಕೆ ತಂದು ವಿಲೇವಾರಿ ಮಾಡುವುದರಿಂದ ದುರ್ವಾಸನೆ ಹೆಚ್ಚಾಗುತ್ತಿರುವ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಬೇಕು. ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಸೂಕ್ತ ರೀತಿಯಲ್ಲಿ ಸಂಸ್ಕರಿಸುವ ಮೂಲಕ ದುರ್ವಾಸನೆ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ಸಾರ್ವಜನಿಕರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ರೀತಿಯಲ್ಲಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಜನರ ಆರೋಗ್ಯ ಮತ್ತು ಪರಿಸರದ ರಕ್ಷಣೆಗೆ ಆದ್ಯತೆ ನೀಡುವುದು ಅಧಿಕಾರಿಗಳ ಕರ್ತವ್ಯ ಎಂದು ಅವರು ಹೇಳಿದರು.ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಅವರಿಗೆ ಕರೆ ಮಾಡಿ, ಕೂಡಲೇ ಈ ಸಮಸ್ಯೆಯನ್ನು ಇತ್ಯರ್ಥಪಡಿಸಿ ಜನತೆ ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಿ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೋಮಶೇಖರ್ ಕೋರಿದರು.ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ಎಂ. ಸುನೀಲ್, ಕೃಷ್ಣರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸೋಮಶೇಖರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ರವಿಶಂಕರ್, ರಮೇಶ್, ನಾಗರತ್ನ ಮಂಜುನಾಥ್, ಪಳನಿಸ್ವಾಮಿ, ಮಹದೇವು, ಗುಣಶೇಖರ್, ಗಣೇಶ್ ರಾವ್, ಶಂಕರ್, ಧರ್ಮೆಂದ್ರ, ರಾಕೇಶ್, ನವೀನ್ ಬೋವಿ, ಮಹೇಂದ್ರ ಗೌಡ, ಮನೋಹರ್, ಸ್ಥಳೀಯ ನಿವಾಸಿಗಳಾದ ಶ್ರೀಕಂಠಶರ್ಮ, ಆನಂದ್, ಪಾಪಣ್ಣ, ಎಇ ಕೃಷ್ಣಮೂರ್ತಿ, ಎಇಇ ಮೀನಾಕ್ಷಿ, ಪಾಲಿಕೆ ಅಧಿಕಾರಿ ಮಂಜುನಾಥ್ ರೆಡ್ಡಿ, ದೈವಿಕ್ ಕಂಪನಿಯ ಸತೀಶ್ ಮೊದಲಾದವರು ಇದ್ದರು.