ಕನ್ನಡಪ್ರಭ ವಾರ್ತೆ ಬೈಲಹೊಂಗಲಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ಸಚಿವ, ವೀರಶೈವ-ಲಿಂಗಾಯತ ಸಮಾಜದ ಹಿರಿಯ ಮುಖಂಡ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಎಚ್. ಕೌಜಲಗಿ (87) ಅವರು ಶುಕ್ರವಾರ ಬೆಳಗಿನ ಜಾವ ನಿಧನರಾದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ಸಚಿವ, ವೀರಶೈವ-ಲಿಂಗಾಯತ ಸಮಾಜದ ಹಿರಿಯ ಮುಖಂಡ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಎಚ್. ಕೌಜಲಗಿ (87) ಅವರು ಶುಕ್ರವಾರ ಬೆಳಗಿನ ಜಾವ ನಿಧನರಾದರು.ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಮೃತರಿಗೆ ಪತ್ನಿ ಸುಶೀಲಾ, ಪುತ್ರಿ ಶೈಲಜಾ, ಪುತ್ರರಾದ ಶಾಸಕ ಮಹಾಂತೇಶ ಕೌಜಲಗಿ, ಬಸವರಾಜ ಕೌಜಲಗಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 11 ಗಂಟೆಗೆ ಬೈಲಹೊಂಗಲದ ಆನಿಗೋಳ ರಸ್ತೆಯ ರುದ್ರಭೂಮಿಯಲ್ಲಿ ಸರ್ಕಾರಿ ಗೌರವ ಹಾಗೂ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಶಿವಾನಂದ ಕೌಜಲಗಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಿವಾಸಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಮಾನವೀಯ ಮೌಲ್ಯಗಳಿಗೆ ಸದಾ ಬದ್ಧರಾಗಿದ್ದ ಶಿವಾನಂದ ಕೌಜಲಗಿ ಅವರು ತಮ್ಮ ಕೊನೆಯ ಆಸೆಯಂತೆ ಮರಣಾನಂತರ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮೂಲಕ ಬೆಳಗಾವಿಯ ಕೆಎಲ್ಇ ಸಂಸ್ಥೆಯ ನೇತ್ರಭಂಡಾರಕ್ಕೆ ನೇತ್ರಗಳನ್ನು ದಾನ ಮಾಡಲಾಗಿದ್ದು, ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ.ರಾಜಕೀಯ ಜೀವನ:
ಶಾಸಕನಿಂದ ಕೇಂದ್ರದವರೆಗೆ ಮಹತ್ವದ ಜವಾಬ್ದಾರಿ ನಿರ್ವಹಿಸಿದ ವ್ಯಕ್ತಿತ್ವ ಶಿವಾನಂದ ಕೌಜಲಗಿ ಅವರದ್ದು. 1985ರಲ್ಲಿ ಜನತಾ ಪಕ್ಷದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. 1989ರಲ್ಲಿ ಪುನರಾಯ್ಕೆಯಾದರು. 1994ರಲ್ಲಿ ಜನತಾದಳದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಬಳಿಕ 1996ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಐತಿಹಾಸಿಕ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದರು. ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಚಿವ ಸಂಪುಟದಲ್ಲಿ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದರು. ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಲ್.ಶಂಕರ ಅವರ ಅವಧಿಯಲ್ಲಿ ಪಕ್ಷದ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.ಬೈಲಹೊಂಗಲ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ವಕೀಲರ ಸಂಘಟನೆಯಲ್ಲಿಯೂ ಸೇವೆ ಸಲ್ಲಿಸಿದ್ದರು. ಬೆಳಗಾವಿಯ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ನಿರ್ದೇಶಕ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಶೈಕ್ಷಣಿಕ ವಸತಿ ಶಾಲೆ ಹಾಗೂ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಶಿವಯೋಗ ಮಂದಿರ ಹಾಗೂ ಹುಬ್ಬಳ್ಳಿಯ ಮೂರುಸಾವಿರಮಠದ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಿದ್ದರು.
ನಾನಾ ಸಾಮಾಜಿಕ ಕಾರ್ಯಗಳು:ತಮ್ಮ ರಾಜಕೀಯ ಪ್ರಭಾವ ಮತ್ತು ಜನಸೇವೆಯ ಮೂಲಕ ಕ್ಷೇತ್ರದಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳು, ವಿದ್ಯಾರ್ಥಿ ವಸತಿ ನಿಲಯಗಳು, ಸುಸಜ್ಜಿತ ಆಸ್ಪತ್ರೆಗಳು, ಕುಡಿಯುವ ನೀರಿನ ವ್ಯವಸ್ಥೆ, ನೀರಾವರಿ ಸೌಲಭ್ಯ, ರಸ್ತೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣರಾಗಿದ್ದರು.
ಗೊಡಚಿ ವೀರಭದ್ರೇಶ್ವರ ಸ್ವಾಮಿಯನ್ನು ಕುಲದೇವರಾಗಿ ಆರಾಧಿಸುತ್ತಿದ್ದ ಕೌಜಲಗಿ ಅವರು ನಾಡಿನ ಅನೇಕ ಮಠಮಾನ್ಯಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ನಾಗನೂರು ರುದ್ರಾಕ್ಷಿಮಠ, ನಿಡಸೋಸಿ, ಮುಂಡರಗಿ, ಹುಬ್ಬಳ್ಳಿ, ಮುಗಳಖೋಡ, ಇಂಚಲ, ಮುರಗೋಡ, ಮಲ್ಲಾಪೂರ, ಹುಣಸ್ಯಾಳ, ಹೊಸೂರು, ಬೈಲಹೊಂಗಲ, ಮುನವಳ್ಳಿ, ಹಾನಗಲ್ಲ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳ ಮಠಾಧೀಶರೊಂದಿಗೆ ನಿಕಟ ಒಡನಾಟ ಹೊಂದಿದ್ದರು. ಗುರು ಕುಮಾರ ಶಿವಯೋಗಿಗಳು, ಸದಾಶಿವ ಸ್ವಾಮೀಜಿ ಹಾಗೂ ರಂಭಾಪುರಿ ಜಗದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯ ಮೂಲಕ ಶರಣ ಪರಂಪರೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು.ಬೈಲಹೊಂಗಲ ನ್ಯಾಯಾಲಯದ ಆವರಣದಲ್ಲಿರುವ ಶಕ್ತಿದೇವತೆ ಕರೆಮ್ಮಾ ದೇವಿ ಜಾತ್ರಾ ಮಹೋತ್ಸವದ ಪ್ರಸಾದ ಸೇವೆಗೆ ಶಿವಾನಂದ ಕೌಜಲಗಿ ಅವರು ಕಳೆದ ವರ್ಷ ಸ್ವಯಂಪ್ರೇರಣೆಯಿಂದ ಮುಂದಿನ ವರ್ಷದ ಜಾತ್ರೆಯ ಸಂಪೂರ್ಣ ಪ್ರಸಾದ ವ್ಯವಸ್ಥೆಯನ್ನು ತಮ್ಮ ಕುಟುಂಬವೇ ವಹಿಸಿಕೊಳ್ಳುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಈ ವರ್ಷದ ಜಾತ್ರಾ ಮಹೋತ್ಸವ ಗುರುವಾರ ಸಂಜೆ ಧರ್ಮಧ್ವಜಾರೋಹಣದೊಂದಿಗೆ ಆರಂಭಗೊಂಡಿದ್ದು, ಶುಕ್ರವಾರದ ಮಹಾಪ್ರಸಾದದ ಸಿದ್ಧತೆಯಲ್ಲಿ ಅವರ ಪುತ್ರ ಬಸವರಾಜ ಕೌಜಲಗಿ ಹಾಗೂ ನ್ಯಾಯವಾದಿ ಬಂಧುಗಳು ರಾತ್ರಿ ಇಡೀ ತೊಡಗಿಸಿಕೊಂಡಿದ್ದರು. ವಿಧಿಯ ವಿಪರ್ಯಾಸವೆಂಬಂತೆ ಶುಕ್ರವಾರವೇ ಶಿವಾನಂದ ಕೌಜಲಗಿ ಅವರು ಲಿಂಗೈಕ್ಯರಾದರು. ತಾವು ನೀಡಿದ್ದ ವಾಗ್ದಾನದಂತೆ ಜಾತ್ರೆಯ ಮಹಾಪ್ರಸಾದ ಸೇವೆ ಕುಟುಂಬದ ವತಿಯಿಂದ ನೆರವೇರಿರುವುದು ಅವರ ಧಾರ್ಮಿಕ ಶ್ರದ್ಧೆ ಹಾಗೂ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.
ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಶಿವಾನಂದ ಕೌಜಲಗಿ ಅವರ ಅಗಲಿಕೆಯಿಂದ ಬೈಲಹೊಂಗಲ ಮಾತ್ರವಲ್ಲದೆ ಇಡೀ ನಾಡು ಹಿರಿಯ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ.ನಿಂದೂ 87ರ ವಯಸ್ಸಪ್ಪವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮೀಜಿಗಳು ಬೈಲಹೊಂಗಲಕ್ಕೆ ಪ್ರವಚನಕ್ಕಾಗಿ ಆಗಮಿಸಿದ್ದ ಸಂದರ್ಭದಲ್ಲಿ ಶಿವಾನಂದ ಕೌಜಲಗಿ ಅವರು ಶ್ರೀಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಪಾದಪೂಜೆ ನೆರವೇರಿಸಿದ್ದರು. ಆಗ, ನಾನು ಈ ಭವಬಂಧನದಿಂದ ದಾಟಬೇಕು, ಆಶೀರ್ವಾದ ಮಾಡಿರಿ ಎಪ್ಪಾ ಎಂದು ಕೇಳಿಕೊಂಡಿದ್ದರು.ಅದಕ್ಕೆ ಶ್ರೀಗಳು, "ನಿಂದೂ 87ರ ವಯಸ್ಸಪ್ಪ " ಎಂದು ಬೆನ್ನು ತಟ್ಟಿ ಆಶೀರ್ವದಿಸಿದ್ದರು. ಇದೀಗ ಶ್ರೀಗಳ ಅಂದಿನ ಆಶೀರ್ವಚನ ನಿಜವಾಗಿದೆ ಎಂದು ಶಿವಾನಂದ ಕೌಜಲಗಿ ಅವರ ಆಪ್ತ ಸಹಾಯಕ ಶಿವಲಿಂಗಪ್ಪ ಪರಂಡಿ ಭಾವುಕರಾಗಿ ಸ್ಮರಿಸಿದ್ದಾರೆ.1940ರ ಅಕ್ಟೋಬರ್ 10ರಂದು ಹೇಮಪ್ಪ ಹಾಗೂ ಗೌರಮ್ಮ ದಂಪತಿಯ ಪುತ್ರನಾಗಿ ಜನಿಸಿದ ಶಿವಾನಂದ ಕೌಜಲಗಿ ಅವರು ಬೈಲಹೊಂಗಲದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿ, ಹುಬ್ಬಳ್ಳಿಯ ಜೆಜೆ ಕಾಮರ್ಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. 1964ರಲ್ಲಿ ಕಾನೂನು ಪದವಿ ಪೂರ್ಣಗೊಳಿಸಿ ಸವದತ್ತಿ ಹಾಗೂ ಬೈಲಹೊಂಗಲ ನ್ಯಾಯಾಲಯಗಳಲ್ಲಿ ವಕೀಲ ವೃತ್ತಿ ಆರಂಭಿಸಿದರು.ನಂದಗಡದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಬಸಪ್ಪಣ್ಣ ಅರಗಾಂವಿ ಅವರ ಪುತ್ರಿ ಸುಶೀಲಾ ಅವರೊಂದಿಗೆ ವಿವಾಹವಾದರು.
ಶಿವಾನಂದ ಕೌಜಲಗಿ ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿ ಜನಮಾನಸದಲ್ಲಿ ಸ್ಥಾನ ಪಡೆದಿದ್ದರು. ವಿಶೇಷವಾಗಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ.
-ಜಗದೀಶ ಶೆಟ್ಟರ್, ಸಂಸದರು, ಬೆಳಗಾವಿಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ಶರಣ ಜೀವಿಯಾಗಿದ್ದರು. ಮಠಮಾನ್ಯಗಳ ಬಗ್ಗೆ ಅಪಾರ ಶ್ರದ್ಧೆ ಹೊಂದಿದ್ದ ಅವರು ಪ್ರಾಮಾಣಿಕ ಸೇವೆಯ ಮೂಲಕ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಅವರ ನಿಧನದಿಂದ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಪರಮಾತ್ಮನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ.
-ಅಭಿನವ ಸಿದ್ಧಲಿಂಗ ಸ್ವಾಮೀಜಿ, ಸುಖದೇವಾನಂದ ಪುಣ್ಯಾಶ್ರಮ, ನಯಾನಗರ