ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಜನರ ಬದುಕನ್ನು ಅತಂತ್ರಗೊಳಿಸಿದ್ದೇ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ್ ಟೀಕಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷದ ನಂತರ ಜನವಿರೋಧಿ ಅಲೆಯನ್ನು ಕಾಣುತ್ತೇವೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರೇ ದಿನಗಳಲ್ಲಿ ಅವರ ಪಕ್ಷದ ಶಾಸಕರಿಂದಲೇ ವಿರೋಧಿ ಅಲೆ ಎದುರಾಗಿತ್ತು ಎಂದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಕಾಂಗ್ರೆಸ್ ಪಕ್ಷದ 20 ಜನ ಶಾಸಕರ ಸಹಿಯುಳ್ಳ ಪತ್ರವನ್ನು ಸರ್ಕಾರ ವಿರುದ್ಧ ಬರೆದು ಮುಖ್ಯಮಂತ್ರಿಗಳಿಗೆ ತಲುಪಿಸಿದ್ದು ಜನ ಇನ್ನೂ ಮರೆತಿಲ್ಲ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರಿಗೆ ಸಂಪುಟ ಸ್ಥಾನಮಾನ ನೀಡಿ ಶಮನ ಮಾಡಿದ್ದರು ಎಂದರು.60 ಪರ್ಸೆಂಟ್ ಸರ್ಕಾರ:
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ. ಶೇ.60 ಪರ್ಸೆಂಟ್ ಅನ್ನು ಪ್ರತಿಯೊಂದರಲ್ಲೂ ಕಮಿಷನ್ ದಂಧೆ ಮಾಡುತ್ತಿದೆ. ಕೇಂದ್ರದ ನಾಯಕರು ರಾಜ್ಯ ಸರ್ಕಾರವನ್ನು ಎಟಿಎಂ ಆಗಿ ಮಾಡಿಕೊಂಡಿದೆ. ಲೂಟಿ ಮಾಡಿ ಹಣವನ್ನು ಹೈಕಮಾಂಡ್‌ಗೆ, ಇತರೆ ರಾಜ್ಯಗಳ ಚುನಾವಣೆಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು.ಲೂಟಿ ಮಾಡಿದ್ದಾರೆ. ಇದಕ್ಕೆ ಅಮಾಯಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಹೋರಾಟ ನಡೆಸಿದ ನಂತರ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದು ಸದನದಲ್ಲಿ 187 ಕೋಟಿ ಅಲ್ಲ. 97 ಕೋಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ವಾಲ್ಮೀಕಿ ನಿಗಮದ ಹಣ ತೆಲಂಗಾಣದ ಕೂಲಿ ಕಾರ್ಮಿಕರಿಗೆ, ಚಿನ್ನದ ಅಂಗಡಿಗೆ ಬೇರೆ ಬೇರೆ ವ್ಯಕ್ತಿಗಳಿಗೆ ವರ್ಗಾವಣೆಯಾಗಿದೆ. ಈ ಹಣವನ್ನು ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಕುಮಾರ ನಾಯಕ್ ಅವರ ಲೋಕಸಭಾ ಚುನಾವಣೆಗೂ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.ಇಂಧನ ಇಲಾಖೆಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು 15,568 ಕೋಟಿ ಹಗರಣ ನಡೆದಿರುವ ಶಂಕೆ ಇದೆ. ಹಿಂದೆ 450 ರಿಂದ 750 ರು.ಗಳಿಗೆ ಮೀಟರ್‌ಗಳು ದೊರೆಯುತ್ತಿದ್ದವು. ಆದರೆ, ಇಂದು 15 ರಿಂದ 16 ಸಾವಿರ ರು. ನೀಡಬೇಕಾಗಿದೆ. ಈ ಪ್ರಮಾಣದಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹದಗೆಟ್ಟ ಕಾನೂನು ವ್ಯವಸ್ಥೆ:ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಸರಣಿ ಕೊಲೆಗಳು, ಸುಲಿಗೆಗಳು ಹೆಚ್ಚುತ್ತಲೇ ಇವೆ. ರಾಜ್ಯ ಸರ್ಕಾರದ ಧೋರಣೆಯಿಂದ ರೋಸಿ ಹೋಗಿರುವ ಅಧಿಕಾರಿ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್, ಬೆಳಗಾವಿಯಲ್ಲಿ ಪ್ರಥಮ ದರ್ಜೆ ಗುಮಾಸ್ತ ರುದ್ರಣ್ಣ ಯಡವಣ್ಣನವರ್, ಪೊಲೀಸ್ ಅಧಿಕಾರಿ ಪರಶುರಾಮ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಅವರ ಕಿರುಕುಳದಿಂದ ಬೇಸತ್ತು ವಿನಯ್, ಪ್ರಿಯಾಂಕ ಖರ್ಗೆ ಅವರ ಆಪ್ತ ಸಚಿನ್ ಸೇರಿದಂತೆ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಮಹಿಳಾ ಮತ್ತು ಮಕ್ಕಳ ಖಾತೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸ್ವಂತ ಜಿಲ್ಲೆ ಬೆಳಗಾವಿಯಲ್ಲೇ 144 ಮಕ್ಕಳು ಸಾವನ್ನಪ್ಪಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾಣಂತಿಯರು ಸಾವಿಗೀಡಾಗಿದ್ದಾರೆ. ಇಂತಹ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಟೀಕಿಸಿದರು.ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಕೊಡುವುದಾಗಿ ಹೇಳುವ ಸಿದ್ದರಾಮಯ್ಯ ಸರ್ಕಾರ ಇದುವರೆಗೂ ನೀಡಿಲ್ಲ. ರೈತರಿಗೆ 860 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಗ್ರಾಹಕರಿಗೆ 9 ರು. ಬರೆ ಎಳೆದಿದೆ. ಈ ಹಿಂದೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನೀಡುತ್ತಿದ್ದ 4 ಸಾವಿರ ನಿಲ್ಲಿಸಲಾಗಿದೆ ಎಂದು ಕಿಡಿಕಾರಿದರು.
ಈ ಜಿಲ್ಲೆಯವರೇ ಕೃಷಿ ಸಚಿವರಾಗಿದ್ದರೂ ಇದಕ್ಕೆ ಯಾವುದೇ ವಿರೋಧ ಮಾಡಲಿಲ್ಲ. ಜಿಲ್ಲೆಗಾಗಿ 500 ರಿಂದ 1 ಸಾವಿರ ಕೋಟಿ ಯೋಜನೆ ತರಲಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹಲವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಇಷ್ಟೆಲ್ಲಾ ಭ್ರಷ್ಟಾಚಾರ, ಬೆಲೆ ಹೆಚ್ಚಳ, ಲೂಟಿ, ಅಧಿಕಾರಿಗಳ ಸಾವು ಸಂಭವಿಸಿದ್ದರೂ ಇದನ್ನೆ ಅಭಿವೃದ್ಧಿ ಎಂದು ಹೇಳುತ್ತಾ ಎರಡು ವರ್ಷದ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಜರಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರಾಜ್ಯ ಕಾರ್‍ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ವಿವೇಕ್, ಸಿ.ಟಿ.ಮಂಜುನಾಥ್, ನಾಗಾನಂದ, ರಮೇಶಾಚಾರ್, ವೆಂಕಟೇಶ್ ಇದ್ದರು.