ಸಾರಾಂಶ
ರಾಮನಗರ: ಅಭಿಮಾನಿಗಳು, ಸ್ನೇಹಿತರು ಪಕ್ಷಾತೀತವಾಗಿ ನನ್ನ ಮೇಲೆ ವಿಶ್ವಾಸವಿಟ್ಟು ತೋರುತ್ತಿರುವ ಪ್ರೀತಿಗೆ ಆಭಾರಿಯಾಗಿದ್ದೇನೆ. ಇದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ಹೇಳಿದರು.
ನಗರದ ದ್ಯಾವರಸೇಗೌಡನದೊಡ್ಡಿ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ನಗರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಯಾರ ಮೇಲೂ ಒತ್ತಡ ಹಾಕಿರಲಿಲ್ಲ. ಆದರೆ, ನಗರದ ಜನತೆ ಮತ್ತು ಸದಸ್ಯರು ಸ್ವಯಂ ಪ್ರೇರಿತವಾಗಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ದರಿಂದ ಅಧ್ಯಕ್ಷ ಸ್ಥಾನ ಪಡೆದಿದ್ದೇನೆ. ಈ ಎಲ್ಲ ಪ್ರೀತಿ, ವಿಶ್ವಾಸ ನೋಡಿದರೆ ನನಗೆ ಜವಾಬ್ದಾರಿ ಹೆಚ್ಚಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರೇರಣೆ ಸಿಕ್ಕಿದೆ ಎಂದು ಹೇಳಿದರು.ನನ್ನ ನಿರೀಕ್ಷೆಗೂ ಮೀರಿ ಜನರು ನನ್ನನ್ನು ಗೌರವಿಸುತ್ತಿರುವುದನ್ನು ನೋಡಿದರೆ ನನ್ನ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಲ್ಲರಿಗೂ ಒಳ್ಳೆಯ ಕೆಲಸ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಜೊತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಿಮ್ಮ ಹಾರೈಕೆ ಇದೇ ರೀತಿ ಇರಲಿ, ನಾನು ಹೆಚ್ಚಿನ ಕೆಲಸ ಮಾಡಲು ಶಕ್ತಿ ತುಂಬಿದಂತಾಗಲಿದೆ. ನಾನು ನನ್ನ ಜವಾಬ್ದಾರಿಯನ್ನು ಅರಿತು ಸಮರ್ಥವಾಗಿ ಕೆಲಸ ಮಾಡುತ್ತೇನೆ. ಕೆಲವರು ಕಾಂಗ್ರೆಸ್ ಪಕ್ಷದ ಲಾಭ ಪಡೆದುಕೊಂಡು ಪಕ್ಷ ಸಂಘಟನೆಗೆ ಹಿಂದೇಟು ಹಾಕುವುದು ಸರಿಯಲ್ಲ. ಇದೇ ಒಗ್ಗಟ್ಟು ನಿಮ್ಮೆಲ್ಲರಲ್ಲಿ ಎಂದಿಗೂ ಇರಬೇಕು ಎಂದು ಶೇಷಾದ್ರಿ ತಿಳಿಸಿದರು.ರಣಧೀರ ಪಡೆ ರಾಜ್ಯ ಉಪಾಧ್ಯಕ್ಷ ಜಿ.ಆರ್.ಗೋವಿಂದರಾಜು ಮಾತನಾಡಿ, ಕೆ.ಶೇಷಾದ್ರಿ ಅವರು ಪಕ್ಷಾತೀತವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ನಗರದ ಎಲ್ಲಾ ವಾರ್ಡುಗಳ ಸಮಸ್ಯೆಗಳ ಬಗ್ಗೆ ಅರಿತುಕೊಂಡಿದ್ದಾರೆ. ಅವರಿಗೆ ಸಿಕ್ಕಿರುವ ಅವಧಿಯಲ್ಲಿ ಪಟ್ಟಣದ ಅಭಿವೃದ್ದಿಗೆ ಶ್ರಮಿಸುತ್ತಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ವ್ಯಕ್ತಿತ್ವದ ಜೊತೆಗೆ ಅಭಿವೃದ್ಧಿ ಮಾಡುವ ಕಾಳಜಿಯಿರುವ ವ್ಯಕ್ತಿಯನ್ನು ವಿಭೂತಿಕೆರೆ ಗ್ರಾಪಂ ಮುಖಂಡರೆಲ್ಲರು ಸೇರಿ ಅಭಿನಂದಿಸಿರುವುದಾಗಿ ತಿಳಿಸಿದರು.
ಈ ವೇಳೆ ನಗರಸಭಾ ಮಾಜಿ ಸದಸ್ಯ ಸುರೇಶ್ (ದೊಡ್ಡಿಸುರೇಶ್), ನಗರಾಭಿವೃದ್ದಿ ಪ್ರಾಧಿಕಾರದ ನಿರ್ದೇಶಕ ಪ್ರವೀಣ್, ಮುಖಂಡರಾದ ಕಬ್ಬಡಿವಿಜಿ, ದೇವರಾಜು, ರಮೇಶ್, ವಸೀಂ, ಶ್ರೀನಿವಾಸ್, ಇನಾಯತ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.ಕೋಟ್ ..................
ರಾಜ್ಯದಲ್ಲಿ ನಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಆದರೂ ರಾಮನಗರ ಪಟ್ಟಣದಲ್ಲಿ ಸಮಸ್ಯೆಗಳೂ ಸಾಕಷ್ಟಿವೆ. ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಲು ನನಗೆ ಒಂದು ಅವಕಾಶ ಸಿಕ್ಕಿದೆ. ಎಲ್ಲಾ ವಾರ್ಡುಗಳ ಸದಸ್ಯರ ಸಹಕಾರ ಪಡೆದು ಹಂತಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ.-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ
ಬಾಕ್ಸ್ ................ನಗರಸಭೆಗೆ ಅಧ್ಯಕ್ಷರ ಭೇಟಿ ಪರಿಶೀಲನೆ
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರು, ಶನಿವಾರ ಬೆಳ್ಳಂಬೆಳಗ್ಗೆ ನಗರಸಭೆ ಕಾರ್ಯಾಲಯಕ್ಕೆ ಭೇಟಿ ಕೊಟ್ಟು ಪೌರ ಕಾರ್ಮಿಕರಿಗೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ ಪೌರ ಕಾರ್ಮಿಕರು ಸಕಾಲದಲ್ಲಿ ಹಾಜರಾಗುವ ಬಗ್ಗೆ ದೃಢೀಕರಿಸಿಕೊಳ್ಳಲು ಹಾಜರಾತಿ ಪುಸ್ತಕ ಪರಿಶೀಲನೆ ಮಾಡಿದರು. ನಗರಸಭೆ ಆಡಳಿತ ಮತ್ತು ಅಭಿವೃದ್ಧಿ ಕೆಲಸಗಳ ವಿಷಯದಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿರುವ ಅವರು, ಸರಿಯಾದ ಸಮಯಕ್ಕೆ ಹಾಜರಾಗದ ಪೌರ ಕಾರ್ಮಿಕರಿಗೆ ಎಚ್ಚರಿಕೆ ನೀಡಿದ್ದಾರೆ.28ಕೆಆರ್ ಎಂಎನ್ 2.ಜೆಪಿಜಿ
ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರನ್ನು ವಿಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಅಭಿನಂದಿಸಿದರು.