ಸಾರಾಂಶ
ಚಿಕ್ಕಮಗಳೂರು : ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಹಗರಣಗಳ ಸರ್ಕಾರ, ದಲಿತ ವಿರೋಧಿ, ಶೂನ್ಯ ಅಭಿವೃದ್ಧಿ ಸರ್ಕಾರ. ಇದರ ವಿರುದ್ಧ ಜನಾಂದೋಲನ ಮಾಡಬೇಕು ಎಂದು ಕಾರ್ಕಳ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್‌ಕುಮಾರ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ನಡೆದ ಪಕ್ಷದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ, ಸಿದ್ದರಾಮಯ್ಯ ಸರ್ಕಾರ ಒಂದು ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ವಿರೋಧಿ ಆಡಳಿತ ನೀಡುತ್ತದೆ ಎಂದು ಯಾರೂ ಕೂಡ ಭಾವಿಸಿರಲಿಲ್ಲ ಎಂದು ಹೇಳಿದರು.
ಒಂದಲ್ಲಾ ಒಂದು ಇಲಾಖೆಯಲ್ಲಿ ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಹಲವು ವರ್ಷಗಳಿಂದ ಜನರಿಗೆ ಮಂಕುಬೂದಿ ಎರಚಿ ಸಿದ್ದರಾಮಯ್ಯ ಅಧಿಕಾರ ನಡೆಸಿದ್ದಾರೆ. ಕಳೆದ ಒಂದು ವರ್ಷಗಳಲ್ಲಿ ಒಂದೇ ಒಂದು ಗುದ್ದಲಿ ಪೂಜೆ ಮಾಡದೇ ಇರುವಂತಹ ಸರ್ಕಾರ, ಶೂನ್ಯ ಅಭಿವೃದ್ಧಿಯ ಸರ್ಕಾರ. ಮೈಸೂರಿನ ಮುಡಾದಲ್ಲಿ 187 ಕೋಟಿ ಹಗರಣ ನಡೆದಿದೆ. ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಬಳಸಬೇಕಾದಂತಹ ಹಣ ಇನ್ನೊಂದು ಯಾವುದು ಅಕೌಂಟಿಗೆ ಹಾಕಿ ಅಲ್ಲಿಂದ ಚುನಾವಣೆಗೆ ಬಳಸಿರುವ ಸರ್ಕಾರ ಇದಾಗಿದೆ. ಈ ಹಿಂದೆ ಯಾವತ್ತೂ ಕೂಡ ಈ ರೀತಿ ಸರ್ಕಾರ ನಾವು ನೋಡಿರಲಿಲ್ಲ ಎಂದರು.
ಓರ್ವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ನಂತರದಲ್ಲಿ ಒಂದು ಹಗರಣ ಬಯಲಿಗೆ ಬಂದಿತು. ದುರಂತವೆಂದರೆ ಡೆತ್ ನೋಟ್‌ನಲ್ಲಿ ಸಚಿವರ ಹೆಸರನ್ನು ಬರೆದಿಡಲಾಗಿತ್ತು. ಆದರೆ, ಆ ಸಚಿವರ ವಿರುದ್ಧ ಈವರೆಗೆ ಯಾವುದೇ ಎಫ್ಐಆರ್ ಹಾಕಲಿಲ್ಲ. ವಿಧಾನಸಭೆಯಲ್ಲಿ ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರವನ್ನು ಕೊಡಲು ಮುಖ್ಯಮಂತ್ರಿ ತಡವರಿಸಿದರು. ಸಚಿವರನ್ನ ಸಮರ್ಥನೆ ಮಾಡಲು ಪ್ರಯತ್ನಿಸಿದರು ಎಂದ ಅವರು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬದಲು ಬಿಜೆಪಿ ಆಡಳಿತದಲ್ಲಿ ಹಗರಣ ನಡೆದಿದೆ. ಅದನ್ನು ಪಟ್ಟಿ ಮಾಡುತ್ತೇವೆಂದು ಹೇಳಿ ಪಟ್ಟಿ ಮಾಡಲು ಹೊರಟಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಗರಣಗಳು ನಡೆದಿದ್ದರೆ ಈ ಕಳೆದ ಒಂದು ವರ್ಷ ಏಕೆ ತನಿಖೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ದಲಿತರ ಭೂಮಿಯನ್ನ ತನ್ನ ಬಾಮೈದನ ಹೆಸರಿನಲ್ಲಿ ಖರೀದಿ ಮಾಡಿ ಹೆಂಡತಿಗೆ ದಾನವಾಗಿ ಕೊಡಿಸಿದ್ದಾರೆ. ಬಿಜೆಪಿ ಕಾಲದಲ್ಲಿ ಮುಡಾದಿಂದ ಸೈಟ್ ಗಳನ್ನ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಕಾಲದ ಅನುದಾನವನ್ನು ರದ್ದು ಮಾಡಲು ನಿಮಗೆ ಆಗುತ್ತದೆ. ಬಿಜೆಪಿ ಕಾಲದ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ನಿಮಗೆ ಆಗೋದಿಲ್ಲ. ಬಿಜೆಪಿ ಕಟ್ಟಿರುವಂತ ರಾಮ ಮಂದಿರವನ್ನು ನೋಡಲು ನಿಮ್ಮಿಂದ ಆಗುವುದಿಲ್ಲ. ಬಿಜೆಪಿ ಕೊಟ್ಟ ಸೈಟ್ ಮಾತ್ರ ಬೇಕು. ನಿಮಗೆ ನೈತಿಕತೆ ಇದ್ದಿದ್ದರೆ ಬಿಜೆಪಿ ಕಾಲದಲ್ಲಿ ಕೊಟ್ಟಿರುವಂತಹ ಸೈಟನ್ನು ವಾಪಸ್ ಕೊಡಬೇಕಾಗಿತ್ತು ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಸ್ಥಳೀಯ ವಿಷಯಗಳನ್ನು ಕುರಿತು ತೀವ್ರವಾಗಿ ಹೋರಾಟ ನಡೆಸಬೇಕು. ಆ ಮೂಲಕ ಜನರಿಗೆ ನ್ಯಾಯ ಕೊಡಿಸಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮಲ್ಲಿರುವ ಭಿನ್ನಾಭಿಪ್ರಾಯದಿಂದ ಹೊರಗೆ ಬರಬೇಕು. ನಾವು ವ್ಯಕ್ತಿಗತವಾಗಿ ಕೆಲಸ ಮಾಡುತ್ತಿಲ್ಲ, ಪಕ್ಷದ ಕೆಲಸ ಮಾಡುತ್ತಿದ್ದೇವೆ. ಪಕ್ಷದ ನಿರ್ಣಯಕ್ಕೆ ಬದ್ಧರಾಗಬೇಕು. ವಿರುದ್ಧವಾಗಿ ನಡೆದುಕೊಂಡರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಸಚಿವ ಡಿ.ಎನ್. ಜೀವರಾಜ್, ಮುಖಂಡರಾದ ಎಚ್.ಸಿ. ಕಲ್ಮರಡಪ್ಪ, ದೀಪಕ್ ದೊಡ್ಡಯ್ಯ, ದಿನೇಶ್ ದೇವವೃಂದ, ರವೀಂದ್ರ ಬೆಳವಾಡಿ, ಪುಣ್ಣಪಾಲ್, ಡಾ. ನರೇಂದ್ರ ಉಪಸ್ಥಿತರಿದ್ದರು. ಸೀತಾರಾಮಭರಣ್ಯ ಪ್ರಾರ್ಥಿಸಿದರು. ಚೈತ್ರಶ್ರೀ ಮಾಲತೇಶ್ ಸ್ವಾಗತಿಸಿದರು.----
ಬ್ಲಾಕ್ ಮೇಲ್ ತಂತ್ರಕ್ಕೆ ಮುಂದಾದ ಸಿಎಂ: ಸುನೀಲ್‌ಕುಮಾರ್
ಚಿಕ್ಕಮಗಳೂರು : ತಮ್ಮ ಹಗರಣ ಮುಚ್ಚಿಕೊಳ್ಳಲು ಸಿಎಂ ಸಿದ್ದರಾಮಯ್ಯ ಬ್ಲಾಕ್ ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ನಡೆ ನಾನು ಹಗರಣ ಮಾಡಿದ್ದೇನೆ. ನಿಮ್ಮ ಹಗರಣ ಹೊರ ತೆಗಿಯುತ್ತೇನೆ ಎನ್ನುವಂತಿದೆ. ಇದು ಆಶ್ಚರ್ಯ ಹಾಗೂ ಹಾಸ್ಯಾಸ್ಪದ ಎಂದು ಹೇಳಿದರು.ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣ ಹೊರಬರುವವರೆಗೂ ಬಿಜೆಪಿ ಹಗರಣಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದ್ದ ಅವರು, ನಿಮ್ಮದೇ ಸರ್ಕಾರ ಇರುವಾಗ ಬಿಜೆಪಿ ಹಗರಣಗಳ ಬಗ್ಗೆ ಇದುವರೆಗೆ ಏಕೆ ತನಿಖೆ ನಡೆಸಲಿಲ್ಲ. ನಿಮ್ಮ ಕಾಲ ಬುಡಕ್ಕೆ ಬಂದಾಗ ಬಿಜೆಪಿ ಬಗ್ಗೆ ದೂರುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ 11 ಕೋಟಿ ಅವ್ಯವಹಾರ ಆಗಿದೆ ಎಂದು ಸಿಎಂ ಹೇಳಿದ್ದಾರೆ. ಆದರೆ ಇದುವರೆಗೆ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿಯೇ ಇಲ್ಲ. ಹೀಗಿರುವಾಗ ಅವ್ಯವಹಾರ ನಡೆಯಲು ಹೇಗೆ ಸಾಧ್ಯ. ಸದನದ ಒಳಗೆ ಹೀಗೆ ಇಷ್ಟೊಂದು ಸುಳ್ಳನ್ನು ಹೇಳುವ ಮುಖ್ಯಮಂತ್ರಿಯನ್ನು ಎಂದು ಕಂಡಿಲ್ಲ ಎಂದು ದೂರಿದರು.ಒಂದು ವೇಳೆ ಬಿಜೆಪಿ ಅವ್ಯವಹಾರ ಮಾಡಿದ್ದರೆ ಯಾವುದೇ ತನಿಖೆಯನ್ನಾದರೂ ಮಾಡಲಿ. ಸಿಬಿಐ, ಸಿಐಡಿ, ಇಂಟರ್ ಪೋಲ್ ಯಾವುದಾದರೂ ತನಿಖೆ ನಡೆಸಿ ಎಂದು ಸವಾಲು ಹಾಕಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರೂರಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲನೆ ನಡೆಸಿದ್ದನ್ನು ಕಾಂಗ್ರೆಸ್ ಟೀಕೆ ಮಾಡುತ್ತದೆ. ಇದರಿಂದ ಕಾಂಗ್ರೆಸ್ ಪ್ರಾಕೃತಿಕ ವಿಕೋಪ, ಸಾವು ನೋವನ್ನು ಯಾವ ರೀತಿ ಸ್ವೀಕಾರ ಮಾಡಿದೆ ಎನ್ನುವುದು ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.ಜನರ ಬಗ್ಗೆ ಯಾವ ವಿಚಾರದಲ್ಲೂ ಕಾಂಗ್ರೆಸ್ ಗೆ ನೈಜ ಕಾಳಜಿ ಇಲ್ಲ. ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕಿತ್ತು. ಆದರೆ ಇದುವರೆಗೂ ಯಾವೊಬ್ಬ ಸಚಿವರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಆದರೆ, ಕೇಂದ್ರ ಸಚಿವರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದನ್ನೇ ಟೀಕೆ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ಮಾನಸಿಕತೆ ಎಂದು ದೂರಿದರು.
ಹಗರಣಗಳಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನ ಸತ್ತರೇನು ಬಿಟ್ಟರೇನು ಎನ್ನುವ ಮನಸ್ಥಿತಿ ಇದೆ. ಜನರ ಸಾವಿನ ಬಗ್ಗೆಯೂ ಅನುಕಂಪ ತೋರಿಸದೆ ಇರುವ ಸ್ಥಿತಿ ಕಾಂಗ್ರೆಸ್ ಗೆ ಬಂದಿರುವುದು ದುರಂತ. ಯಾವುದೇ ವಿಚಾರಕ್ಕೂ ರಾಜ್ಯ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))