ರಾಜ್ಯದಲ್ಲಿ ಕುಸಿದ ಸ್ಥಳೀಯಾಡಳಿತ ವ್ಯವಸ್ಥೆ, ಸರ್ಕಾರದ ನಿರಾಶಕ್ತಿ ವಿರುದ್ದ ಬಿ.ಜೆ.ಪಿ. ವತಿಯಿಂದ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾದಯಾತ್ರೆ ಮೂಲಕ ಜನಾಂದೋಲನ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಕುಸಿದ ಸ್ಥಳೀಯಾಡಳಿತ ವ್ಯವಸ್ಥೆ, ಸರ್ಕಾರದ ನಿರಾಶಕ್ತಿ ವಿರುದ್ದ ಬಿ.ಜೆ.ಪಿ. ವತಿಯಿಂದ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾದಯಾತ್ರೆ ಮೂಲಕ ಜನಾಂದೋಲನ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.

೨೦೨೩ರಲ್ಲಿ ಗ್ಯಾರಂಟಿಯ ಆಮಿಷದ ಮೂಲಕ ಆಡಳಿತ ಪಡೆದಿರುವ ಕಾಂಗ್ರೆಸ್ ಸರ್ಕಾರ ಕಳೆದ ಮೂರುವರೆ ವರ್ಷದಿಂದ ನಿರಂತರವಾಗಿ ಜನರನ್ನು ದೋಚುವ ಮತ್ತು ಜನರ ತಲೆ ಮೇಲೆ ಟೋಪಿ ಇಡುವ ಕೆಲಸ ಮಾಡುತ್ತಿದೆ. ಈ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಸ್ಥಳೀಯಾಡಳಿತ ವ್ಯವಸ್ಥೆ ಸಂಪೂರ್ಣವಾಗಿ ಅಧಪತನಕ್ಕೆ ಇಳಿದಿದೆ. ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ಹುದ್ದೆ ಖಾಲಿಯಾದರೂ, ನೇಮಕಾತಿ ಮಾಡುತ್ತಿಲ್ಲ. ಸಿಬ್ಬಂದಿಗಳಿಗೆ ಕನಿಷ್ಠ ವೇತನ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದರೂ ಜಾರಿಯಾಗದೆ ಅನ್ಯಾಯವಾಗಿದೆ. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಅ.೮ ರಿಂದ ನ.೭ ರವರೆಗೆ ಪ್ರತಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದಿವಾಳಿ ಕಾಂಗ್ರೆಸ್ ಸರ್ಕಾರದ ನೀತಿಯಿಂದ ಕುಸಿದಿರುವ ಸ್ಥಳೀಯಾಡಳಿತದ ವಿರುದ್ಧ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿ ಚುರುಕು ಮುಟ್ಟಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.

ಈಗಾಗಲೇ ಈ ಬಗ್ಗೆ ಜಿಲ್ಲಾ ಮಟ್ಟದ ಸಭೆಗಳು ನಡೆದಿದ್ದು, ಜಿಲ್ಲಾ ಸಂಚಾಲಕರಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಆಯ್ಕೆ ಮಾಡಲಾಗಿದೆ. ಸಹಸಂಚಾಲಕರಾಗಿ ವಿಕಾಸ್ ಪುತ್ತೂರು, ರಾಧಾಕೃಷ್ಣ ಬೂಡಿಯಾರ್, ಈಶ್ವರ್ ಕಟೀಲ್, ಲೋಹಿತ್ ಅಮೀನ್ ಕಾವೂರು, ಸುಜಿತ್ ಪ್ರತಾಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.