ಸಾರಾಂಶ
ಕನ್ನಡಪ್ರಭವಾರ್ತೆ, ಜಮಖಂಡಿ
ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಹಸೀಲ್ದಾರ್ ಕಚೇರಿ ಎದುರು ರೈತರು ಗುರುವಾರ ಪ್ರತಿಭಟನೆ ನಡೆಸಿದರು.ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ತಾಲೂಕಿನ ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಧರೆಪ್ಪ ದಾನಗೌಡ, ಸದೆಪ್ಪ ಕೌಟಗಿ, ಶ್ರೀಶೈಲ ಮೈಗೂರ, ಸಿದ್ದುಗೌಡ ಪಾಟೀಲ, ಕುಮಾರ ಹವಾಲ್ದಾರ, ಸುರೇಶ ಹಂಚಿನಾಳ, ಡಾ.ಅಜಯ ಕುಲಕರ್ಣಿ, ಕೃಷ್ಣಾ ಮೇಲ್ಡಂಡೆ ಯೋಜನೆ ಪೂರ್ಣಗೊಳಿಸಬೇಕು. ಬೇಸಿಗೆಯಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ, ಕೆರೆ ತುಂಬುವ ಯೋಜನೆ ಸ್ಥಗಿತಗೊಳಿಸಿ ನದಿತೀರದ ಚಿಕ್ಕಪಡಸಲಗಿಯಿಂದ ಹಿಪ್ಪರಗಿಯವರೆಗಿನ ಗ್ರಾಮಗಳಿಗೆ ಜನ-ಜಾನುವಾರುಗಳಿಗೆ ನೀರಿನ ತೊಂದರೆ ಆಗದಂತೆ ಕ್ರಮ ಜರುಗಿಸಬೇಕು. ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತರನ್ನು ಮಾತನಾಡಿಸುವ ಸೌಜನ್ಯ ತೋರಿಸಬೇಕು ಎಂದು ಆಗ್ರಹಿಸಿದರು,ಸಚಿವ ಎಂ.ಬಿ. ಪಾಟೀಲ ಅವರು ಬಬಲೇಶ್ವರಕ್ಕೆ ಕೃಷ್ಣಾನದಿಯಿಂದ ಏತನೀರಾವರಿ ಮೂಲಕ ನೀರು ಎತ್ತುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ಮಾತ್ರ ಕೆರೆ ತುಂಬುವ ಯೋಜನೆ ಚಾಲ್ತಿಯಲ್ಲಿರಬೇಕು. ಕೃಷ್ಣಾ ನದಿಯಲ್ಲಿ ಪ್ರವಾಹ ಸಂದರ್ಭದಲ್ಲಿ ನೀರೆತ್ತುವ ಎಲ್ಲಾ ಯೋಜನೆಗಳು ಚಾಲ್ತಿಯಲ್ಲಿರಬೇಕು ಎಂಬ ನಿಯಮವಿದೆ. ಆದರೆ ಬೇಸಿಗೆಯಲ್ಲಿ ನೀರೆತ್ತುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯನ್ನು ಬೇಸಿಗೆಯಲ್ಲಿ ಸ್ಥಗಿತ ಗೊಳಿಸಬೇಕು ಎಂದು ಆಗ್ರಹಿಸಿದರು. ನದಿತೀರದ ರೈತರು ಇದರಿಂದ ಕಂಗಾಲಾಗಿದ್ದು, ಉಗ್ರ ಹೋರಾಟ ನಡೆಸಲಾಗುವುದು. ಸರ್ಕಾರ, ಜನಪ್ರತಿನಿಧಿಗಳು ಕ್ರಮ ಜರುಗಿಸದೇ ಹೋದಲ್ಲಿ ತೀವ್ರ ಹೋರಾಟ ನಡೆಸಲಾಗುವುದು. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಪಂ ಮಾಜಿ ಸದಸ್ಯ ಬಸಪ್ಪ ಕಡಪಟ್ಟಿ, ಶಿವಾನಂದ ಕಲ್ಯಾಣಿ, ಕುಮಾರ ಹವಾಲ್ದಾರ, ಗೋಪಾಲ ಬಳಗಾರ, ಬಸವರಾಜ ಬಿರಾದಾರ ಸೇರಿದಂತೆ ಹಲವು ಮುಖಂಡರು ಇದ್ದರು.ನೀರಾವರಿ ಯೋಜನೆಗಳನ್ನು ಸ್ಥಗಿತಗೊಳಿಸಿ: ಚುನಾವಣೆ ಭಾಷಣಕ್ಕೆ ಮಾತ್ರ ಸೀಮಿತವಾಗಿರುವ ಜನಪ್ರತಿನಿಧಿಗಳು ರೈತರ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಸಚಿವರ ಕ್ಷೇತ್ರದ ರೈತರ ಹಿತ ಕಾಯಲು ನದಿಪಾತ್ರದ ರೈತರ ನೀರು ಕಸಿದರೆ ಹೇಗೆ ? ಎಲ್ಲಾ ರೈತರು ಒಂದೇ. ರೈತರಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬಾರದು. ಜಮಖಂಡಿ ತಾಲುಕು ವ್ಯಾಪ್ತಿಗೆ ಬರುವ ನದಿ ಪಾತ್ರದ ರೈತರ ನೀರನ್ನು ಕಸಿಯಬಾರದು. ಭೀಕರ ಬೇಸಿಗೆ ಎದುರಾಗಲಿದ್ದು, ಜೂನ್ ತಿಂಗಳವರೆಗೆ ನೀರಾವರಿ ಯೋಜನೆ ಸ್ಥಗಿತಗೊಳಿಸಿ ನದಿಯಲ್ಲಿ ನೀರು ಉಳಿಸಲು ಕ್ರಮ ಜರುಗಿಸಬೇಕು ಎಂದು ರೈತರು ಆಗ್ರಹಿಸಿದರು.