ಭೋರ್ಗರೆದ ಮೇಘ ಮಳೆಗೆ ಜನರ ಪರದಾಟ

| Published : Aug 18 2024, 01:51 AM IST

ಸಾರಾಂಶ

ಲಿಂಗಸುಗೂರು ಪಟ್ಟಣದ ಪಿಂಚಣಿಪುರದಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿ ಜನರು ಬದುಕು ಬೀದಿಗೆ ಬಂದಿರುವುದು. ನಿವಾಸಿಗಳು ಆತಂಕದಿಂದ ಜೀವನ ಕಳೆದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮೇಘ ಮಳೆ ಭೋರ್ಗರೆದು ಸುರಿದ ಪರಿಣಾಮ ಕೆಲವಡೆ ಮಳೆಯ ನೀರು ಮನೆಗಳಿಗೆ ಇನ್ನೂ ರಸ್ತೆ, ಬಲದಂಡೆ ನಾಲೆ ಕೆಲವಡೆ ಕೊಚ್ಚಿ ಹೋಗಿದ್ದು ಮಳೆಗೆ ನಾಗರೀಕರ ಬದುಕು ಅಪೋಷನ ಪಡೆದಿದೆ.

ರಾತ್ರಿಯಿಡಿ ಮಳೆ ಸುರಿದ ಪರಿಣಾಮ ಲಿಂಗಸುಗೂರು ಪಟ್ಟಣದ ಪಿಂಚಣಿಪುರದಲ್ಲಿನ ಮನೆಗಳಿಗೆ ನುಗ್ಗಿದ ಹಳ್ಳದ ನೀರಿನಿಂದ ನಾಗರೀಕರಿಗೆ ತೀವ್ರ ತೊಂದರೆ ಉಂಟುಮಾಡಿದೆ. ಮನೆಯಲ್ಲಿದ್ದ ದವಸ-ದಾನ್ಯಗಳು, ಆಹಾರ ಪದಾರ್ಥಗಳು ಮಳೆ ನೀರಿನಲ್ಲಿ ತೇಲಾಡಿದ್ದು, ಚರಂಡಿಗಳು ಬಂದ್ ಆಗಿದ್ದರಿಂದ ಮಳೆ ನೀರು ರಸ್ತೆಗಳಲ್ಲಿ ನಿಂತ ಪರಿಣಾಮ ಜನರು ಮನೆಯಿಂದ ಹೊರ ಬರಲು ಭಯದ ವಾತಾವರಣ ನಿರ್ಮಾಣವಾಗಿತ್ತು.

ಮಹಿಳೆಯರು, ಮಕ್ಕಳು ಸೇರಿದಂತೆ ತೀವ್ರ ಸಂಕಷ್ಟಕ್ಕೀಡಾದರು ಮನೆಗೆ ನೀರು ನುಗ್ಗಿ ಬದುಕು ನೀರಿಗೆ ಹರಿದುಕೊಂಡು ಹೋದರು ಸಹಿತ ನೆರವಿಗೆ ಯಾರು ಬಂದಿಲ್ಲ. ನಾವು ದುಡಿದು ತಿನ್ನುವ ಜನರು, ಮಳೆಯ ನೀರು ಸಮರ್ಪಕವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೇ ಇರುವುದರಿಂದ ಹಿಟ್ಟು, ಖಾರ, ಸೇರಿ ಜೀವನಾವಶ್ಯಕ ವಸ್ತುಗಳು ನೀರಿನಲ್ಲಿ ಹರಿದು ಹೋಗಿವೆ. ವಾರದ ಸಂತೆಗೆ 15 ದಿನಗಳು ದುಡಿದರೆ ಊಟ ಸಿಗುತ್ತದೆ. ಈಗ ಮಳೆಗೆ ವಸ್ತುಗಳೆಲ್ಲ ಹರಿದು ಹೋಗಿದೆ. ಹೀಗಾದರೇ ನಾವು ಹೇಗೆ ಜೀವನ ಮಾಡಬೇಕು ಎಂದು ಪಿಂಚಣಿಪುರದ ನಿವಾಸಿಗಳಾದ ಶಾಂತಮ್ಮ ಹಾಗೂ ಹುಸೇನಬಿ ಹತಾಶೆಯಿಂದ ಹೇಳಿದರು.

ಸುರಿದ ಮಳೆ ನೀರು ಪಟ್ಟಣದ ಡಿವೈಎಸ್‌ಪಿ ಕಚೇರಿ ಎದುರಿನ ಕೆರೆಗೆ ಹರಿದು ಹೋಗುತ್ತದೆ. ಆದರೆ ಮಳೆಯ ನೀರಿನ ಹರಿವಿಗೆ ಅಡ್ಡಲಾಗಿ ಉದ್ಯಾನವನ ನಿರ್ಮಿಸಿದ್ದರಿಂದ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೇ ಕಾರಣ ಹೆದ್ದಾರಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಪರಿಣಾಮ ಮಹಿಳೆಯರು ವಾಹನಗಳನ್ನು ತೆಗದುಕೊಂಡು ಹೋಗಲು ಹರಸಾಹಸಪಟ್ಟರು.

ಅಗ್ನಿಶಾಮಕ ಠಾಣೆಗೂ ನೀರು ನುಗ್ಗಿದ ಪರಿಣಾಮ ಠಾಣೆಯ ಒಳಗೆ ಹೋಗಲಾರದಷ್ಟು ನೀರು ನಿಂತಿದ್ದವು. ಪಟ್ಟಣದಲ್ಲಿ ಮಳೆಯಿಂದ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣದ ಕಾಮಗಾರಿಗಳ ಅಸಲಿ ಮುಖ ಹೊರ ಬಿದ್ದಿತು.

ವರದಿಯ ಪ್ರಕಾರ ಲಿಂಗಸುಗೂರಲ್ಲಿ ಅತೀ ಹೆಚ್ಚು 98.4 ಮಿಮೀ, ಹಟ್ಟಿ 89 ಮಿಮೀ, ಗುರುಗುಂಟಾ 53 ಮಿಮೀ, ಮುದಗಲ್ 23.4 ಮಿಮೀ ಮಳೆ ಆಗಿದೆ.

ಪ್ರಸಕ್ತ ವರ್ಷದಲ್ಲಿ ಪಟ್ಟಣದಲ್ಲಿ ಭಾರಿ ಮಳೆ ಆಗಿದ್ದು ಪಿಂಚರಣಿಪುರದಲ್ಲಿ ಸೇತುವೆ ನಿರ್ಮಿಸುವ ಕಾಮಗಾರಿಯಲ್ಲಿ ರಸ್ತೆಗಾಗಿ ಮಣ್ಣು ಹಾಕಿದ್ದರಿಂದ ಹಳ್ಳದಲ್ಲಿ ಹರಿದು ಹೋಗುವ ಬದಲು ನೀರು ಮನೆಗಳಿಗೆ ನುಗ್ಗಿ ಅವಾಂತರ ಉಂಟು ಮಾಡಿದೆ. ಭಾರಿ ಮಳೆಯ ಕಾರಣ ನಾಗರೀಕರ ಬದುಕು ಬೀದಿಗೆ ಬಂದಿದೆ. ನಾರಾಯಣಪುರ ಬಲದಂಡೆ ನಾಲೆಯ ವಿತರಣಾ ನಾಲೆ 8ಕ್ಕೆ ಮಳೆಯ ನೀರು ನುಗ್ಗಿ ಬೆಂಚಲದೊಡ್ಡಿ ಮಳೆಯಲ್ಲಿ ಕೊಚ್ಚಿಕೊಂದು ಹೋಗಿದೆ. ನಾಲೆಯ ಕೆಳಗಡೆ ಜಮೀನು ಜಲಾವೃತವಾಗಿ ಬೆಳಗೂ ಹಾನಿಯಾಗಿದೆ. ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭಾರಿ ಪ್ರಮಾಣ ತಗ್ಗು-ದಿನ್ನೆಗಳು ನಿರ್ಮಾಣಗೊಂಡು ಸಂಚಾರಕೆ ಬೀತಿ ಉಂಟು ಮಾಡಿವೆ.