ಕಾಂಗ್ರೆಸ್‌ಗೆ ಜನರ ಬೆಂಬಲ: ವೇಣುಗೋಪಾಲ ನಾಯಕ

| Published : Apr 13 2024, 01:06 AM IST

ಸಾರಾಂಶ

ಸುರಪುರ ಮತಕ್ಷೇತ್ರ ವ್ಯಾಪ್ತಿಯ ಯಣ್ಣಿವಡಗೇರಾ ಗ್ರಾಮದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಕನ್ನಡಪ್ರಭ ವಾರ್ತೆ ಸುರಪುರ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲಿವಿದೆ. ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಜನಪರ ಕಾರ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ಮತಕ್ಷೇತ್ರ ವ್ಯಾಪ್ತಿಯ ಯಣ್ಣಿವಡಗೇರಾ ಗ್ರಾಮದಲ್ಲಿ ಬಿಜೆಪಿ ತೊರೆದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಳಪ್ಪ ಸಿದ್ದಪ್ಪ ಪೂಜಾರಿ ಹಾಗೂ ಮುಖಂಡರು ರಾಜಾ ವೇಣುಗೋಪಾಲ ನಾಯಕ ಸಮ್ಮುಖದಲ್ಲಿ ಕಾಂಗ್ರೆಸ್ ಧ್ವಜ ಸ್ವೀಕರಿಸಿ ಸೇರ್ಪಡೆಯಾದರು. ಈ ವೇಳೆ ಅವರು ಮಾತನಾಡಿದರು.

ಸರ್ಕಾರದ ಸಾಧನೆಗಳು ಹಾಗೂ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜನರು ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಉಪಚುನಾವಣೆ ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಎಲ್ಲವೂ ಮಿಂಚಿನಂತೆ ನಡೆಯುತ್ತಿದೆ. ತಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಹಾಗೂ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಗಾಗಿ ನಿಮ್ಮ ಅಮೂಲ್ಯವಾದ ಮತ ನೀಡಬೇಕು ಎಂದರು.

ದುಃಖದಲ್ಲಿರುವ ಕುಟುಂಬವನ್ನು ಸಾಂತ್ವನ ಮಾಡುವ ಕೆಲಸ ಮಾಡಿದ್ದೀರಾ. ಕ್ಷೇತ್ರದ ಜನತೆ ನಮ್ಮ ಕುಟುಂಬಕ್ಕೆ ಧೈರ್ಯವನ್ನು ತುಂಬುತ್ತಿದ್ದಾರೆ. ತಂದೆಯವರಂತೆ ಕ್ಷೇತ್ರದ ಜನರ ಒಳಿತಿಗಾಗಿ, ಅಭಿವೃದ್ಧಿಗಾಗಿ ಸದಾ ಜನಸೇವೆ ಮಾಡುತ್ತೇನೆ. ನಮಗೆ ನಮ್ಮ ತಂದೆ ಹಾಗೂ ಹಿರಿಯರು ಜನಸೇವೆಯನ್ನು ಮಾಡುವುದನ್ನು ಹೇಳಿಕೊಟ್ಟಿದ್ದಾರೆ ಹೊರತು ಬೇರೆ ಇನ್ಯಾವುದನ್ನು ನಮಗೆ ಹೇಳಿಕೊಟ್ಟಿಲ್ಲ. ಇಂದು ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಂದಿರುವವರು ಪಕ್ಷದ ಬಲವರ್ಧನೆಗೆ ಹಾಗೂ ಬೂತ್‌ಮಟ್ಟದಿಂದ ಸಂಘಟಿಸಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಹಾಗೂ ರಾಯಚೂರು ಲೋಕಾಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕುಮಾರ ನಾಯಕಗೆ ಮತ ನೀಡುವಂತೆ ಕ್ಷೇತ್ರದ ಜನರಲ್ಲಿ ಮನವೊಲಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಪ್ರಮುಖರಾದ ವೆಂಕೋಬ ಯಾದವ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ಬ್ಲಾಕ್ ಕಾಂಗ್ರೆಸ್ ಸುರಪುರ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ತಾಲೂಕು ಪಂಚಾಯತ ಮಾಜಿ ಸದಸ್ಯ ಭೀಮರಾಯ ಮೂಲಿಮನಿ, ರಂಗನಗೌಡ ದೇವಿಕೇರಾ, ಸೇರಿದಂತೆ ಯಣ್ಣಿವಡಗೇರಾ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದುರು