ಸಾರಾಂಶ
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿರುವಾಗಲೇ ಉತ್ತರ ಕರ್ನಾಟಕದ ಜನರು ಚಳಿಯಿಂದ ತತ್ತರಿಸಿದ್ದಾರೆ.
ಶಶಿಕಾಂತ ಮೆಂಡೆಗಾರ
ವಿಜಯಪುರ : ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿರುವಾಗಲೇ ಉತ್ತರ ಕರ್ನಾಟಕದ ಜನರು ಚಳಿಯಿಂದ ತತ್ತರಿಸಿದ್ದಾರೆ. ಈ ಭಾಗದ ಜಿಲ್ಲೆಗಳಲ್ಲಿ ಚಳಿ ಮಿತಿ ಮೀರಿದ್ದು, ಜನರು ಚಳಿಯಿಂದ ರಕ್ಷಿಸಲು ಬೆಂಕಿಯಿಂದ ಕಾಯಿಸಿಕೊಳ್ಳಲು ಮೊರೆ ಹೋಗುತ್ತಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಆವರಿಸಿದ್ದ ಕನಿಷ್ಠ ತಾಪಮಾನ 6.5 ಡಿಗ್ರಿ ಈ ವರ್ಷವೂ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಈಗಾಗಲೇ ಎರಡು ದಿನಗಳಿಂದ ಈ ಭಾಗದಲ್ಲಿ ಕೋಲ್ಡ್ ವೇವ್ (ಶೀತ ಗಾಳಿ) ಪ್ರಾರಂಭವಾಗಿದ್ದು, ಇದೇ ವಾತಾವರಣ ಇನ್ನು ಮುಂದಿನ ದಿನಗಳಲ್ಲೂ ಮುಂದುವರಿಯುವ ಸಾಧ್ಯತೆ ಇದೆ. ಅಲ್ಲದೇ, ತಾಪಮಾನ 6 ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಶೀತ ಗಾಳಿಯ ಅಬ್ಬರ:
ಈ ಬಾರಿ ಅಧಿಕ ಮಳೆ ಬಂದಿದ್ದರಿಂದ ತೇವಾಂಶ ಹೆಚ್ಚಾಗಿದೆ. ಅಲ್ಲದೇ, ಮೊನ್ನೆಯಷ್ಟೆ ಚಂಡಮಾರುತದ ಪರಿಣಾಮ ಜನರು ಕಂಗೆಡುವಂತೆ ಮಾಡಿತ್ತು. ಕಳೆದ ಮೂರು ದಿನಗಳಿಂದ ಎಲ್ಲೆಡೆ ಕೋಲ್ಡ್ ವೇವ್ ಶುರುವಾಗಿದೆ. ರಾಜ್ಯಾದ್ಯಂತ ಅದರಲ್ಲೂ ಉತ್ತರದ ಭಾಗದಲ್ಲಿ ಕುಂತಲ್ಲಿ, ನಿಂತಲ್ಲಿ ಗಢಗಢ ನಡುಗು ಶುರುವಾಗಿದೆ. ಮುಸ್ಸಂಜೆ ವೇಳೆಯೇ ಶುರುವಾಗುವ ಚುಮುಚುಮು ಚಳಿ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬೆಳಗಿನ ಚಳಿ ಮಧ್ಯಾಹ್ನವಾದರೂ ಕಡಿಮೆಯಾಗದೇ ಜನರು ಮನೆಯಿಂದ ಹೊರಬರದಂತೆ ಮಾಡಿದೆ. ಅಲ್ಲದೇ, ಇನ್ನು, ಚಳಿಯಲ್ಲಿ ಶಾಲೆಗೆ ತೆರಳು ಮಕ್ಕಳು, ವೃದ್ಧರು ಹಾಗೂ ಕೆಲಸಗಳಿಗೆ ತೆರಳುವ ಜನರು ಚಳಿಯಲ್ಲಿ ನಡುಗುತ್ತಿದ್ದಾರೆ.
ವಿಜಯಪುರದಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇನ್ನೊಂದು ವಾರ ತೀವ್ರವಾದ ಶೀತದ ಅಲೆಗಳು ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕನಿಷ್ಠ ತಾಪಮಾನ 6 ರಿಂದ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎನ್ನಲಾಗುತ್ತಿದೆ.
ಹಲವೆಡೆ ಕನಿಷ್ಠ ತಾಪಮಾನ:
ರಾಜ್ಯದ ಬೀದರ 7.5, ವಿಜಯಪುರ 8.5, ಧಾರವಾಡ 11.8, ಬಾಗಲಕೋಟೆ, ರಾಯಚೂರು, ಗದಗದಲ್ಲಿ 12 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಭಾಗದಲ್ಲೂ ಉಷ್ಣಾಂಶ ಇಳಿಕೆಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾಗಿದ್ದರಿಂದ ಡಿ.21ರಿಂದ ರಾಜ್ಯದ ಹಲವೆಡೆ ಮತ್ತೆ ಮಳೆ ಬೀಳುವ ಸಾಧ್ಯತೆಯೂ ಇದೆ.
ತೀವ್ರ ಶೀತ ಗಾಳಿ ಬೀಸುತ್ತಿರುವುದರಿಂದ ಮುಂದಿನ ಮೂರು ದಿನಗಳ ಕಾಲ ಕಲಬುರಗಿ, ಬೀದರ, ವಿಜಯಪುರ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಶೀತ ಅಲೆಯ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ.
ಮೊದಲಿನಿಂದಲೂ ಅತಿಯಾದ ಬಿಸಿಲು ಹಾಗೂ ಚಳಿಯಲ್ಲಿ ತುಸು ಹೆಚ್ಚಾಗಿಯೇ ಗುರುತಿಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಇದೀಗ ದಾಖಲೆ ಪ್ರಮಾಣದ ಚಳಿ ಬೀಸಲಾರಂಭಿಸಿದೆ. ವಿಜಯಪುರದಲ್ಲಿರುವ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿನ ಕೃಷಿ ಹವಾಮಾನ ಯಂತ್ರದಲ್ಲಿ ಡಿ.17ರಂದು ಕನಿಷ್ಠ ತಾಪಮಾನ 8 ಡಿಗ್ರಿಗೆ ಇಳಿಕೆಯಾಗಿದೆ.
ವಿಜಯಪುರ ಕನಿಷ್ಠ ತಾಪಮಾನ
2017 ಡಿ.28ರಂದು 8.2, 2018 ಜನೆವರಿ 1ರಂದು 8.2, 2019 ಡಿ.19ರಂದು 9.0, 2020 ಡಿ.23ರಂದು 8.6, 2021 ಡಿ.19ರಂದು 10.2, 2022 ನ.21ರಂದು 7.6, 2022 ಡಿ.20ರಂದು 10.5, 2023 ಜ.9ರಂದು 6.5 ಕನಿಷ್ಠ ತಾಪಮಾನ ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಅತಿ ಕಡಿಮೆ ಉಷ್ಣಾಂಶದಲ್ಲೂ ದಾಖಲೆ ಬರೆದಿದೆ.ಬಾಕ್ಸ್
ಶೀತಗಾಳಿಗೆ ಜನ ತತ್ತರ:
ಬೀದರ, ವಿಜಯಪುರ, ಕಲಬುರಗಿ ಜಿಲ್ಲೆಯಲ್ಲಿ 6 ರಿಂದ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಇದು ಸಾಮಾನ್ಯಕ್ಕಿಂತ 6 ರಿಂದ 7 ಡಿಗ್ರಿ ಕಡಿಮೆ ತಾಪಮಾನವಾಗಿದೆ. ಇನ್ನು ಯಾದಗಿರಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಹ ಶೀತಹವಾಮಾನ ಇರಲಿದ್ದು, ಅಲ್ಲಿ ತಾಪಮಾನ ಸುಮಾರು 10 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇದು ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಕಡಿಮೆ ತಾಪಮಾನವಾಗಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಕಂಡು ಬರಲಿದೆ. ಇನ್ನು ಈ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆಡೆಗಳಲ್ಲಿ ಮೂರು ದಿನಗಳ ಕಾಲ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.