ಸಾರಾಂಶ
ಮುನಿರಾಬಾದ್:
ಏಕಾಏಕಿ ಬೀದಿನಾಯಿಗಳು ದಾಳಿ ನಡೆಸುತ್ತಿರುವುದರಿಂದ ಬೆಚ್ಚಿಬಿದ್ದಿರುವ ಮುನಿರಾಬಾದ್ ಗ್ರಾಮಸ್ಥರು ಅವುಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.ಕಳೆದೆರಡು ವರ್ಷದಲ್ಲಿ ಗ್ರಾಮದಲ್ಲಿ ಬರೋಬ್ಬರಿ 100ಕ್ಕೂ ಅಧಿಕ ಜನರ ಮೇಲೆ ದಾಳಿ ನಡೆಸಿವೆ. ಭಾನುವಾರವೂ ಸಹ ತುಂಗಭದ್ರಾ ಜಲಾಶಯ ವೀಕ್ಷಣೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕ ಚಂದ್ರಶೇಖರ ಎಂಬುವನ ಮೇಲೆ ದಾಳಿ ನಡೆಸಿರುವ ಬೀದಿನಾಯಿಗಳು ಕಚ್ಚಿ ಗಾಯಗೊಳಿಸಿವೆ. ಇದೀಗ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಪಾಲಕರಿಗೆ ಆತಂಕ:ಕೋಚಿಂಗ್ ಸೇರಿದಂತೆ ಶಾಲಾ-ಕಾಲೇಜಿಗೆ ತೆರಳುತ್ತಿರುವ ವಿದ್ಯಾರ್ಥಿಗಳ ಮೇಲೆ ಬೀದಿನಾಯಿಗಳ ದಾಳಿ ಹೆಚ್ಚಾಗಿದೆ. ಇದರಿಂದ ಪಾಲಕರು ಮಕ್ಕಳನ್ನು ಒಬ್ಬೊಬ್ಬರಾಗಿ ಮನೆಯಿಂದ ಹೊರಬಿಡಲು ಯೋಚಿಸುವಂತೆ ಆಗಿದೆ. ಬೈಕ್, ಸೈಕಲ್‌ನಲ್ಲಿ ಹೋಗುವರನ್ನು ಬೆನ್ನಟ್ಟುವುದರಿಂದ ಭಯಗೊಂಡ ಅವರು ಅವುಗಳಿಂದ ಬಿದ್ದು ಗಾಯವನ್ನು ಮಾಡಿಕೊಂಡಿದ್ದಾರೆ.
ಆಸ್ಪತ್ರೆಗೂ ಲಗ್ಗೆ ಇಟ್ಟ ನಾಯಿ:ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ. ಅವರನ್ನು ಆಸ್ಪತ್ರೆಯ ಆವರಣದಲ್ಲಿಯೇ ಬೀದಿನಾಯಿಗಳು ಸ್ವಾಗತಿಸುತ್ತವೆ. ಎರಡು ದಿನಗಳ ಹಿಂದೆ ಆಸ್ಪತ್ರೆಯೊಳಗೆ ಬೀದಿನಾಯಿಗಳ ಹಿಂಡು ನುಗ್ಗಿ ರಾಜಾರೋಷವಾಗಿ ಆಸ್ಪತ್ರೆ ಸುತ್ತು ಒಡೆದಿವೆ. ಇದರಿಂದ ಭಯಗೊಂಡಿರುವ ರೋಗಿಗಳು ಎಲ್ಲಿ ನಮ್ಮ ಮೇಲೆಯೇ ದಾಳಿ ಮಾಡುತ್ತವೆಯೋ ಎನ್ನುವ ಭಯದಲ್ಲಿ ಇದ್ದಾರೆ.
ಕ್ರಮಕೈಗೊಳ್ಳದ ಗ್ರಾಪಂ:ಗ್ರಾಮದಲ್ಲಿ ಬೀದಿನಾಯಿಗಳು ಕಚ್ಚಿದ ಪ್ರಕರಣ ಬೆಳಕಿಗೂ ಬಂದರೂ ಸ್ಥಳೀಯ ಗ್ರಾಮ ಪಂಚಾಯಿತಿ ಮಾತ್ರ ಅವುಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾನ್ಯಸಭೆಯಲ್ಲೂ ಒಮ್ಮೆಯೂ ಅಧ್ಯಕ್ಷರು, ಸದಸ್ಯರು ಬೀದಿನಾಯಿಗಳ ನಿಯಂತ್ರಣದ ಕುರಿತು ವಿಷಯ ಪ್ರಸ್ತಾಪಿಸಿಲ್ಲ ಎಂಬ ಆರೋಪವೂ ಇದೆ:
ಸ್ಥಳಾಂತರಿಸಿ ಇಲ್ಲವೇ ಕೊಲ್ಲಿ:ಅಬಾಲವೃದ್ಧರ ಮೇಲೆ ದಾಳಿ ನಡೆಸುತ್ತಿರುವ ಬೀದಿನಾಯಿಗಳನ್ನು ಗ್ರಾಮದಿಂದ ಸ್ಥಳಾಂತರಿಸಿ ಇಲ್ಲವೇ ಕೊಲ್ಲಿ ಎಂದು ಗ್ರಾಮ ಪಂಚಾಯಿತಿಗೆ ನೊಂದ ಪಾಲಕರು ಒತ್ತಾಯಿಸಿದ್ದಾರೆಬೀದಿನಾಯಿಗಳ ನಿಯಂತ್ರಣಕ್ಕೆ ಮುಂದಾದರೆ ಪ್ರಾಣಿ ದಯಾ ಸಂಘಟನೆಯವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರವೇ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವ ಜತೆಗೆ ಗ್ರಾಮದಿಂದ ಅವುಗಳನ್ನು ಸ್ಥಳಾಂತರಿಸಲಾಗುವುದು.
ಸೌಭಾಗ್ಯ, ಗ್ರಾಪಂ ಉಪಾಧ್ಯಕ್ಷೆ