ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಸದ್ದಿಗೆ ಜನತೆ ಬೆಚ್ಚಿದ್ದಾರೆ.... ಜಾನುವಾರುಗಳು ಆಕ್ರಂದಿಸುತ್ತಿವೆ.... ಮನೆಗಳು ಕಂಪಿಸುತ್ತಿವೆ... ಸ್ಫೋಟಕ ಶಬ್ದಕ್ಕೆ ನಲುಗುತ್ತಿರುವ ಗರ್ಭಿಣಿಯರಿಗೆ ಗರ್ಭಪಾತವಾಗುತ್ತಿದೆ... ಬೆಳೆ ಇಳುವರಿ ಕುಂಟಿತಗೊಂಡಿದೆ... ಗ್ರಾಮಸ್ಥರ ಆರೋಗ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳು ಎದುರಾಗಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೌನಕ್ಕೆ ಶರಣಾಗಿರುವ ಬಗ್ಗೆ ಇಡಿ ಗ್ರಾಮವೇ ಆಕ್ರೋಶಗೊಂಡಿದೆ.
-ಎಚ್.ಕೆ.ಬಿ. ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಸದ್ದಿಗೆ ಜನತೆ ಬೆಚ್ಚಿದ್ದಾರೆ.... ಜಾನುವಾರುಗಳು ಆಕ್ರಂದಿಸುತ್ತಿವೆ.... ಮನೆಗಳು ಕಂಪಿಸುತ್ತಿವೆ... ಸ್ಫೋಟಕ ಶಬ್ದಕ್ಕೆ ನಲುಗುತ್ತಿರುವ ಗರ್ಭಿಣಿಯರಿಗೆ ಗರ್ಭಪಾತವಾಗುತ್ತಿದೆ... ಬೆಳೆ ಇಳುವರಿ ಕುಂಟಿತಗೊಂಡಿದೆ... ಗ್ರಾಮಸ್ಥರ ಆರೋಗ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳು ಎದುರಾಗಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೌನಕ್ಕೆ ಶರಣಾಗಿರುವ ಬಗ್ಗೆ ಇಡಿ ಗ್ರಾಮವೇ ಆಕ್ರೋಶಗೊಂಡಿದೆ.ತಾಲೂಕಿನ ಎಣ್ಣೆಕೊಪ್ಪ, ಬೆಲವಂತನಕೊಪ್ಪ ಮತ್ತು ತೆವರೆತೆಪ್ಪ ತ್ರಿವಳಿ ಗ್ರಾಮಗಳಲ್ಲಿ ಅಮೂಲ್ಯ ಬೆಟ್ಟಗುಡ್ಡಗಳಿಂದ ಆವಸಿರುವುದರಿಂದ ಕಲ್ಲು ಗಣಿಗಾರಿಕೆ ಮಾಲೀಕರಿಗೆ ಆದಾಯ ಹೆಚ್ಚಿಸುವ ಮೂಲಸೌಕರ್ಯಗಳು ಇರುವುದರಿಂದ ಎಣ್ಣೆಕೊಪ್ಪ ಸರ್ವೆ ನಂ. ೬೦, ಬೆಲವಂತನಕೊಪ್ಪ ಸರ್ವೆ ನಂ. ೧೦೦ ಮತ್ತು ತೆವರೆತಪ್ಪ ಸರ್ವೆ ನಂ.೧೨೮ರ ಗಡಿ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಪ್ರತಿನಿತ್ಯ ಬಂಡೆ ಸಿಡಿಸಲು ಬಳಸುವ ಸ್ಫೋಟಕ ಮತ್ತು ರಾಸಾಯನಿಕ ಹೊಗೆಗೆ ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಿದೆ. ಕಲ್ಲು ಪುಡಿ ಧೂಳಿನಿಂದ ಗ್ರಾಮಸ್ಥರು ಕೆಮ್ಮು-ಅಸ್ತಮಾದಂತಹ ಕಾಯಿಲೆಗಳಿಂದ ನರಳುವುದು ಸಾಮಾನ್ಯವಾಗಿದೆ.
ರಾಸಾಯನಿಕ ಹೊಗೆ ಮಿಶ್ರಿತ ವಿಷಾನಿಲದಿಂದ ಗರ್ಭಿಣಿಯರಿಗೆ ಗರ್ಭಪಾತವಾಗುತ್ತಿದೆ. ಬಾಂಬ್ ಸ್ಫೋಟದ ಶಬ್ದಕ್ಕೆ ಅವಧಿಗೂ ಮುನ್ನ ಮಕ್ಕಳ ಜನನವಾಗುತ್ತಿದೆ. ಸ್ಫೋಟಕದ ಸದ್ದಿಗೆ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಭಯಭೀತರಾಗಿರುವ ಗ್ರಾಮಸ್ಥರು ಮನೆಯಿಂದ ಹೊರಗೆ ಬಂದು ಜೀವನ ಸಾಗಿಸುವಂತಾಗಿದೆ.ಹಲವು ವರ್ಷಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ ಬಂಡೆ ಒಡೆಯಲು ಕಬ್ಬಿಣದ ಸುತ್ತಿಗೆ ಬಳಸಲಾಗುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಪ್ರತಿಷ್ಠಿತ ಖಾಸಗಿ ಕಂಪನಿಯರು ಗಣಿಗಾರಿಕೆ ಮಾಲೀಕರಿಂದ ಲೀಸ್‌ಗೆ ಪಡೆದ ದಿನದಿಂದ ಪರವಾನಿಗೆ ಇಲ್ಲದಿದ್ದರೂ ಹಗಲು-ರಾತ್ರಿ ಎನ್ನದೇ ಅಕ್ರಮವಾಗಿ ಬಾಂಬ್ ಸಿಡಿಸಿ ಬಂಡೆ ಸೀಳುತ್ತಿದ್ದಾರೆ. ಜತೆಗೆ ಹ್ಯಾಮರ್ ಗ್ರಿಲ್ ಬಳಸುತ್ತಿರುವುದರಿಂದ ನಾಲ್ಕೈದು ಕಿ.ಮೀ. ವರೆಗೆ ಶಬ್ದ ಕೇಳಿಸುತ್ತದೆ ಎಂದು ಅವಳಿ ಗ್ರಾಮಗಳ ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.ಪ್ರತಿನಿತ್ಯ ಸುಮಾರು ೫೦೦ ರಿಂದ ೬೦೦ ಟನ್ ಜಲ್ಲಿ ಕಲ್ಲು ಸರಬರಾಜು ಆಗುತ್ತಿದೆ. ಲಾರಿಗಳು ಗಣಿಗಾರಿಕೆಗಾಗಿ ಗ್ರಾಮದ ಮಧ್ಯೆ ಸಂಚಾರಿಸುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಗಳು ಹಾಳಾಗಿ ಗುಂಡಿಗೊಡರುಗಳಿಂದ ಕೂಡಿ, ಮಳೆಗಾಲದಲ್ಲಿ ನಡೆದಾಡುವುದೇ ದುಸ್ಥರವಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗೋಮಾಳ ಜಾಗ ಅತಿಕ್ರಮಣ : ಯಾವುದೇ ಸ್ಫೋಟ ಇಲ್ಲದೇ ೪ ಎಕರೆ ಜಾಗದಲ್ಲಿ ಮಾತ್ರ ಕಲ್ಲು ಗಣಿಗಾರಿಕೆಗೆ ಪರವಾನಿಗೆ ನೀಡಲಾಗಿದೆ. ಗಣಿಗಾರಿಕೆಯ ಪಕ್ಕದಲ್ಲಿಯೇ ಸ.ನಂ. ೬೦, ೧೦೦, ೧೨೮ರಲ್ಲಿ ೧೫ ಎಕರೆ ೩ ಗುಂಟೆ ಗೋಮಾಳ ಜಾಗ ಸರ್ಕಾರದಿಂದ ಮೀಸಲಿದೆ. ಆದರೆ ಗಣಿ ಮಾಲೀಕರು ಸುಮಾರು ೧೨ ಎಕರೆಯಷ್ಟು ಗೋಮಾಳ ಜಾಗವನ್ನು ಅತಿಕ್ರಮಣ ಮಾಡಿ ಗಣಿಗಾರಿಕೆ ನಡೆಸುತ್ತಿದ್ದಾರೆ. ತ್ರಿವಳಿ ಗ್ರಾಮದಲ್ಲಿ ಸುಮಾರು ೪೦೦ ರಿಂದ ೫೦೦ ಜಾನುವಾರುಗಳಿವೆ. ಆದರೆ ಜಾನುವಾರುಗಳು ಮೇಯಲು ಜಾಗ ಇಲ್ಲದಂತಾಗಿದೆ. ಮುಫತ್ತು ಜಮೀನಿನಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಮತ್ತು ಅದರಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರ ಮಹಜರ್‌ನೊಂದಿಗೆ ವಾಸ್ತವಾಂಶದ ವರದಿಯನ್ನು ತಹಸೀಲ್ದಾರ್ ಮೇಲಧಿಕಾರಿಗಳಿಗೆ ಡಿಸೆಂಬರ್ ೧೬ರ ಪತ್ರದಲ್ಲಿ ಸಲ್ಲಿಸಿದ್ದಾರೆ. ಅಲ್ಲದೇ ಗಣಿ ಮತ್ತು ಭೂವಿಜ್ಞಾನ ಇಲಾಖಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ಇಲ್ಲವಾಗಿದೆ. ಗ್ರಾಮಕ್ಕೆ ಮತ್ತು ಪರಿಸರಕ್ಕೆ ಮಾರಕವಾಗಿ ಕಾಡುತ್ತಿರುವ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸಬೇಕಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಣಿ ಮಾಲೀಕರ ಬೆಂಬಲಕ್ಕೆ ನಿಂತಿರುವುದು ಅವರ ನೈತಿಕ ಸ್ಥೈರ್ಯ ಹೆಚ್ಚಿಸಿದಂತಾಗಿದೆ ಎನ್ನುವುದು ಗ್ರಾಮಸ್ಥರ ಆರೋಪ. ಎಣ್ಣೆಕೊಪ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ್ದು, ಮೇಲ್ನೋಟಕ್ಕೆ ಗಣಿಗಾರಿಕೆ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನುವುದು ಕಂಡುಬಂದಿದೆ. ಗ್ರಾಮದಲ್ಲಿ ಗಣಿಗಾರಿಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಗ್ರಾಮಸ್ಥರು ನೀಡಿರುವ ದೂರನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು
– ಮಂಜುಳಾ ಹೆಗಡಾಳ್, ತಹಸೀಲ್ದಾರ್, ಸೊರಬ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಗರ್ಭಿಣಿಯರಿಗೆ ಗರ್ಭಪಾತ ಮತ್ತು ಅವಧಿಗೂ ಮುನ್ನ ಪ್ರಸವವಾಗುತ್ತಿದೆ ಅಲ್ಲದೇ ಋತುಚಕ್ರದಲ್ಲಿ ಏರುಪೇರು ಕಂಡು ಅಧಿಕ ರಕ್ತಸ್ರಾವವಾಗುತ್ತದೆ. ಇದಕ್ಕೆಲ್ಲ ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಬಾಂಬ್ ಸ್ಫೋಟದ ಶಬ್ದ ಮತ್ತು ರಾಸಾಯನಿಕ ಹೊಗೆ, ಧೂಳು ಕಾರಣವಾಗಿದೆ. ತಕ್ಷಣ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜವಾಗಿಲ್ಲ- ಸೌಭಾಗ್ಯ, ರಾಧಿಕಾ ವೀರೇಶ್, ಎಣ್ಣೆಕೊಪ್ಪ
ಗಣಿಗಾರಿಕೆ ಬಗ್ಗೆ ಚರ್ಚಿಸಲು ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶೇಷ ಗ್ರಾಮಸಭೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖಾ ಅಧಿಕಾರಿಗಳಿಗೆ ಆಹ್ವಾನಿಸಲಾಗಿತ್ತು. ಆದರೆ ಅವರು ಗೈರಾಗಿದ್ದಾರೆ. ಈ ಮೂಲಕ ಅತಿಕ್ರಮಣ ಗಣಿಗಾರಿಕೆಯಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಗಣಿಧಣಿಗಳೊಂದಿಗೆ ಒಪ್ಪಂದವಾಗಿದೆ ಎನ್ನುವುದು ಸಾಬೀತಾಗಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಕುಬಟೂರು ಮನೆಯಲ್ಲಿ ಗ್ರಾಮಸ್ಥರು ಭೇಟಿ ನೀಡಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದರೂ ಗ್ರಾಮಸ್ಥರೊಂದಿಗೆ ಮಾತಿಗಿಳಿದು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೀದಿಗಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ- ಹೊನ್ನಪ್ಪ ಎಣ್ಣೆಕೊಪ್ಪ