ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಹಳೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಹಳ್ಳಿಗಳಾದ ನಾಗರಬಾವಿಯಿಂದ ದೇವರಕೊಂಡಹಳ್ಳಿಗೆ ಸಂಪರ್ಕ ಕಲ್ಪಿಸುವ ಸುಮಾರು 3 ಕೋಟಿ ರು. ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರದೀಪ್ ಈಶ್ವರ್ ಗುದ್ದಲಿ ಪೂಜೆ ನೆರವೇರಿಸಿದರು.ನಾಗರಬಾವಿ ಮತ್ತು ದೇವರಕೊಂಡಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು, ಪ್ರತಿಯೊಬ್ಬರ ಮನೆ ಬಾಗಿಲಿಗೂ ತೆರಳಿ ಜನಸಾಮಾನ್ಯರ ಜೊತೆ ಸಾಮಾನ್ಯರಂತೆ ಬೆರೆತು ಅವರ ಕಷ್ಟ ಮತ್ತು ಸಮಸ್ಯೆಗಳನ್ನು ಕೇಳಿ ಪರಿಹಾರ ನೀಡುವ ಭರವಸೆ ನೀಡಿದರು.
ಕ್ಷೇತ್ರದ ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸುವುದು ಮೊದಲ ಆದ್ಯತೆಯಾಗಿದೆ. ನಾಗರಬಾವಿ ಹಾಗೂ ದೇವರಕೊಂಡಹಳ್ಳಿ ಗ್ರಾಮಗಳ ರಸ್ತೆ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು 3 ಕೋಟಿ ರು. ವೆಚ್ಚದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರು ಕಾಮಗಾರಿಯ ಗುಣಮಟ್ಟದ ಕಡೆಗೆ ಗಮನ ಹರಿಸಬೇಕು ಎಂದರು.ಗ್ರಾಮಗಳಿಗೆ ಆಗಮಿಸಿದ ಶಾಸಕರು ಮತ್ತು ಅಧಿಕಾರಿಗಳಿಗೆ ಸ್ಥಳೀಯರು ಉತ್ಸಾಹದಿಂದ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ಇಲ್ಲಿ ಯಾವ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದೀರಿ? ಎಂದು ಕೇಳಿದರು. ಪ್ರತಿಯಾಗಿ, ಗ್ರಾಮಸ್ಥರು ಮೂಲಸೌಕರ್ಯಗಳ ಕೊರತೆ, ಕಂದಾಯ, ಪಿಂಚಣಿ ಸಮಸ್ಯೆ ಸೇರಿ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ಜಾಗದ ಒತ್ತುವರಿ ತೆರವು, ಬಸ್ ವ್ಯವಸ್ಥೆ, ಸ್ಮಶಾನದ ಜಾಗದ ಮತ್ತು ರಸ್ತೆ, ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣ ಹಾಗೂ ಆರೋಗ್ಯ ಸಮಸ್ಯೆಗಳು ಒಳಗೊಂಡಂತೆ ಹಲವಾರು ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ಹೇಳಿಕೊಂಡರು. ಕೆಲ ಸಮಸ್ಯೆಗಳಿಗೆ ಅಲ್ಲೆ ಪರಿಹಾರ ಕಲ್ಪಿಸಿದರೆ ಮತ್ತೆ ಕೆಲವಕ್ಕೆ ಕಾಲಾವಕಾಶ ನಿಗದಿ ಪಡಿಸಿ, ಅಧಿಕಾರಿಗಳಿಂದ ಆದಷ್ಟು ಬೇಗ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಸಮಸ್ಯೆಗಳಿಗೆ ಪರಿಹಾರ: ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ಕಷ್ಟಗಳನ್ನು ಕೇಳುವ ನಿಟ್ಟಿನಲ್ಲಿ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಡಿ ಕ್ಷೇತ್ರದ ಪ್ರತಿ ಹಳ್ಳಿಗೂ ತೆರಳಿ ಅಲ್ಲೆ ಪರಿಹರಿಸಲು ಕ್ರಮ ಕೈಗೊಳ್ಳುವ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಬಡವರ ಬದುಕು ಬಹಳ ಕಷ್ಟವಾಗಿದೆ. ಸರ್ಕಾರದ ವತಿಯಿಂದ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿ ಅವರ ಮುಖದಲ್ಲಿ ಮಂದಹಾಸ ಮೂಡಿಸುವುದೆ ನನ್ನ ಏಕೈಕ ಉದ್ದೇಶ. ಜನರಿಗೆ ದೂಡ್ಡ ದೂಡ್ಡ ಕನಸು ತೋರಿಸುವವರು ಒಂದೊಮ್ಮೆ ಹಳ್ಳಿಗಳಿಗೆ ಬಂದು ಬಡವರ ಬದುಕು ನೋಡಲಿ ಬಡತನ ಏನೆಂಬುದನ್ನು ತಿಳಿಯಬಹುದು. ಇನ್ನು ನನ್ನ ಕ್ಷೇತ್ರದ ಜನರಿಗೆ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದೇನೆ. ವಿದ್ಯಾರ್ಥಿ ವೇತನ, ಅಮ್ಮ ಆಂಬ್ಯುಲೆನ್ಸ್ ನೀಡಿದ್ದು ಪ್ರತಿ ಹಳ್ಳಿಯಲ್ಲಿ ರಸ್ತೆಗಳ ದುರಸ್ತಿ ಚರಂಡಿ ವ್ಯವಸ್ಥೆ ಸರಿಪಡಿಸುವುದು, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ದಲಿತರ ಸ್ಮಶಾನಗಳಿಗೆ ಜಾಗ, ಸೂರು ಕಲ್ಪಿಸುವುದಾಗಿದೆ. ನನ್ನ ಕ್ಷೇತ್ರದ ಜನರಿಗೆ ಎಲ್ಲಾ ಸೌಲಭ್ಯ ಒದಗಿಸುವುದೇ ನನ್ನ ಗುರಿ ಎಂದರು.
ಶಾಸಕರೊಂದಿಗೆ ಕಂದಾಯ, ಆಹಾರ,ಬೆಸ್ಕಾಂ, ಆರೋಗ್ಯ, ಪೋಲಿಸ್ ಇಲಾಖೆಗಳ ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ, ಅಧಿಕಾರಿಗಳು, ಮುಖಂಡರು ಇದ್ದರು. ಈ ವೇಳೆ ಗ್ರಾಮಸ್ಥರು ಪಡಿತರ ಚೀಟಿ ಪಿಂಚಣಿ ಸೌಲಭ್ಯ, ಕುಡಿಯುವ ನೀರಿನ ತೊಂದರೆ, ಆಟದ ಮೈದಾನ ಹಾಗೂ ಸರ್ಕಾರದ ವಸತಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಜನರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ ಪ್ರದೀಪ್ ಈಶ್ವರ್, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಪಂಚಾಯಿತಿ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷಿತ್ ರೆಡ್ಡಿ, ಮುಖಂಡರಾದ ನಾಗೇಶ್, ನಾಗೇಶ್ ರೆಡ್ಡಿ, ಬೈರೇಶ್, ರಮೇಶ್ ಬಾಬು, ಉಮೇಶ್, ವಿನಯ್ ಬಂಗಾರಿ, ಮಂಜುನಾಥ್ ಮತ್ತಿತರರು ಇದ್ದರು.
ಸಿಕೆಬಿ-1ಮಂಚೇನಹಳ್ಳಿ ತಾಲೂಕಿನ ನಾಗರಬಾವಿಯಿಂದ ದೇವರಕೊಂಡಹಳ್ಳಿಗೆ ಸಂಪರ್ಕ ಕಲ್ಪಿಸುವ ಸುಮಾರು 3 ಕೋಟಿ ರು. ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರದೀಪ್ ಈಶ್ವರ್ ಗುದ್ದಲಿ ಪೂಜೆ ನೆರವೇರಿಸಿದರು.