ಸಾರಾಂಶ
ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೇಳಿ ಜಿಲ್ಲಾಧಿಕಾರಿ ಕಚೇರಿಗೆ ಜನರು ಬರದಂತೆ ಗ್ರಾಮ, ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು.
ಧಾರವಾಡ:
ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೇಳಿ ಜಿಲ್ಲಾಧಿಕಾರಿ ಕಚೇರಿಗೆ ಜನರು ಬರದಂತೆ ಗ್ರಾಮ, ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಗ್ರಾಮಮಟ್ಟದಲ್ಲಿ ಅಧಿಕಾರಿಗಳು ಜನರ ಬೇಡಿಕೆಗಳಿಗೆ ಸ್ಪಂದಿಸಿದರೆ ಮಾತ್ರ ಉತ್ತಮ ಆಡಳಿತ ನೀಡಲು ಅನುಕೂಲ. ಅದಕ್ಕಾಗಿ ತಹಸೀಲ್ದಾರ್‌ರು ಕಡ್ಡಾಯವಾಗಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಲು ಜಿಲ್ಲಾಧಿಕಾರಿ ದಿವ್ಯಪ್ರಭು ಸೂಚನೆ ನೀಡಿದರು.ತಹಸೀಲ್ದಾರ್, ತಾಲೂಕು ಪಂಚಾಯಿತಿ ಇಒ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ಜಿಲ್ಲೆಯ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಮೇವು ಸಂಗ್ರಹಣೆ ಹಾಗೂ ಬೆಳೆಹಾನಿ ಪರಿಹಾರ ಪ್ರಗತಿ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದರು.ತಹಸೀಲ್ದಾರ್‌ರು ತಾಪಂ ಇಒ ಜತೆಗೆ ತಾಲೂಕಿನ ಪ್ರತಿ ಗ್ರಾಮಗಳಿಗೆ ಭೇಟಿ ಸಂದರ್ಭದಲ್ಲಿ ಗ್ರಾಪಂ ಸದಸ್ಯರು, ಗ್ರಾಮದ ಪ್ರಮುಖರ ಸಭೆ ಜರುಗಿಸಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ನರೇಗಾ ಕೂಲಿ ಕೆಲಸದ ಬಗ್ಗೆ ಸಲಹೆ, ಮಾಹಿತಿ ಪಡೆದುಕೊಳ್ಳಿ. ಅವರ ಅಗತ್ಯಕ್ಕೆ ಅನುಗುಣವಾಗಿ ನಿಯಮಾನುಸಾರ ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ಕ್ರಮವಹಿಸಲು ಸೂಚಿಸಿದರು. ಬರ ಪರಿಸ್ಥಿತಿ ಮತ್ತು ಸಾರ್ವತ್ರಿಕ ಚುನಾವಣೆ ಸಮಯ ಇದಾಗಿದ್ದು, ಸಂಬಂಧಿಸಿದ ಗ್ರಾಮ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಯಾ ಪಿಡಿಒ ಮತ್ತು ಗ್ರಾಮ ಆಡಳಿತ ಅಧಿಕಾರಿ ಕಡ್ಡಾಯವಾಗಿ ಸ್ಥಾನಿಕವಾಗಿವಿದ್ದು, ಜನರಿಗೆ ತಕ್ಷಣ ಸ್ಪಂದಿಸಬೇಕು. ಗ್ರಾಮದ ಯಾವುದೇ ಸಮಸ್ಯೆ, ಬೇಡಿಕೆಗಳಿದ್ದಲ್ಲಿ ಗ್ರಾಮಮಟ್ಟದಿಂದ ತಕ್ಷಣ ತಹಸೀಲ್ದಾರ್‌ರು ವರದಿ ಪಡೆದು ಕ್ರಮವಹಿಸಬೇಕು ಎಂದ ಅವರು, ಹೆಚ್ಚು ಪ್ರಮಾಣದಲ್ಲಿ ನೀರು ಪೂರೈಕೆ ಸಾಮರ್ಥ್ಯವಿರುವ ಕೊಳವೆ ಬಾವಿಗಳನ್ನು ಗುರುತಿಸಿ, ನೀರು ಪೂರೈಕೆ ಒಪ್ಪಂದ ಮಾಡಿಕೊಳ್ಳುವುದು, ಗ್ರಾಮಗಳಲ್ಲಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸುವುದು, ವಾರ್ಡ್ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಿ ಎಂದರು.ಅನುದಾನರ ಕೊರತೆ ಇಲ್ಲ:ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲ. ಶುದ್ಧ ಕುಡಿಯುವ ನೀರಿನ ಕೇಂದ್ರಗಳನ್ನು ದುರಸ್ತಿ ಮಾಡಿಸಿ. ಅನುಮತಿಗಾಗಿ ಕಾಯದೆ, ಸ್ಥಳದಲ್ಲಿ ಪರಿಶೀಲನಾ ಕ್ರಮ ಅಗತ್ಯವಾಗಿದ್ದರೆ ಕೈಗೊಂಡು ನಿಯಮಾನುಸಾರ ವರದಿ ಸಲ್ಲಿಸಲು ತಿಳಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಪೂರ್ವದಲ್ಲಿ ಮೇವು ಸಂಗ್ರಹಣೆಯ ಕಾರ್ಯವಾಗಿದೆ. ಧಾರವಾಡ ತಾಲೂಕಿನ ಮದನಬಾವಿ ಮತ್ತು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದ್ದು, ಅವಶ್ಯಕತೆ ಕಂಡುಬಂದರೆ ಉಳಿದ ತಾಲೂಕುಗಳಲ್ಲಿ ಮೇವು ಬ್ಯಾಂಕ್ ಅಥವಾ ಗೋಶಾಲೆ ತೆರೆಯಲಾಗುವುದು. ಜಿಲ್ಲೆಯಲ್ಲಿ ಒಂಭತ್ತು ವಾರಗಳ ವರೆಗೆ ಮೇವು ಲಭ್ಯವಿದೆ ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ವಿವಿಧ ಇಲಾಖಾಧಿಕಾರಿಗಳಾದ ಆರ್.ಎಂ. ಸೋಪ್ಪಾಮಠ, ರಮೇಶ ಬಿ.ಎಸ್, ದೀಪಕ ಮಡಿವಾಳರ, ಡಾ. ಕಿರಣಕುಮಾರ, ಕೆ.ಸಿ. ಬದ್ರಣ್ಣವರ, ಡಾ. ರವಿ ಸಾಲಿಗೌಡರ ಇದ್ದರು.
;Resize=(128,128))
;Resize=(128,128))