ಸಾರ್ವಜನಿಕರು ಸ್ವಯಂ ಗಣತಿಗಾಗಿ ವೆಬ್ ಸೈಟ್ ಬಳಸಿಕೊಂಡು 33 ಪ್ರಶ್ನೆಗೆ ಉತ್ತರಿಸಲು ಮನವಿಕನ್ನಡಪ್ರಭ ವಾರ್ತೆ ಮಂಡ್ಯ

ಜನಗಣತಿ-2027ರ ಅಂಗವಾಗಿ ಸಾರ್ವಜನಿಕರು ಸುರಕ್ಷಿತ ವೆಬ್ ಪೋರ್ಟಲ್ ಮೂಲಕ ಸ್ವಯಂ-ಗಣತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು ಏ.1ರಿಂದ ಆರಂಭವಾಗಿದೆ. ಸಾರ್ವಜನಿಕರು ಸ್ವಯಂ ಗಣತಿಗಾಗಿ ವೆಬ್ ಸೈಟ್ ಬಳಸಿಕೊಂಡು ಲಾಗ್ ಇನ್ ಆಗಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಸಂಬಂಧ ಕೇಳಲಾಗುವ 33 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಸಾರ್ವಜನಿಕರು ಸ್ವಯಂ ಗಣತಿ ಮಾಹಿತಿ ಯಶಸ್ವಿಯಾಗಿ ಸಲ್ಲಿಸಿದ ನಂತರ ಎಸ್‌ಎಂಎಸ್ ಮತ್ತು ಇ-ಮೇಲ್ ಪೊರ್ಟಲ್‌ಗೆ ರೆಫರೆನ್ಸ್ ಐ.ಡಿ.ಸ್ವೀಕೃತವಾಗುತ್ತದೆ.

ಗಣತಿದಾರರು ಮನೆಗೆ ಭೇಟಿ ನೀಡಿದಾಗ ರೆಫರೆನ್ಸ್ ಐ.ಡಿ.ನೀಡುವ ಮೂಲಕ ಗಣತಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಒಂದು ವೇಳೆ ರೆಫರೆನ್ಸ್ ಐ.ಡಿ.ನೀಡದಿದ್ದರೆ ಗಣತಿದಾರರು ಮೊದಲಿನಿಂದಲೂ ಎಲ್ಲ ಪ್ರಶ್ನೆಗಳನ್ನು ಕೇಳಿ ಹೊಸದಾಗಿ ಗಣತಿ ಮಾಡಬೇಕಿದೆ.

ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವುದರಿಂದ ಗಣತಿದಾರರು ಬಂದಾಗ ಆಗುವ ಸಮಯ ವ್ಯಯವನ್ನು ತಪ್ಪಿಸಬಹುದು. ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವಂತೆ ಡೀಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.---


ಗ್ಯಾಸ್ ವಿತರಣೆಯಲ್ಲಿ ಮಾರ್ಗಸೂಚಿ ಪಾಲಿಸಿ: ಡೀಸಿ ಎಚ್ಚರಿಕೆಮಂಡ್ಯ: ಗೃಹ ಬಳಕೆ ಅನಿಲ ಸರಬರಾಜು ಮತ್ತು ವಿತರಣೆ ಕುರಿತಂತೆ ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಅನಿಲ ವಿತರಕ ಕಂಪನಿಯವರು ಪಾಲಿಸಬೇಕು. ಎಲ್ಲ ಕಂಪನಿಗಳು ಜಿಲ್ಲೆಯ ದೈನಂದಿನ ಬೇಡಿಕೆಗೆ ತಕ್ಕಂತೆ ಗೃಹ ಬಳಕೆ ಅನಿಲ ಸರಬರಾಜು ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಚ್‌ಪಿಸಿ, ಬಿಪಿಸಿ ಮತ್ತು ಐಒಸಿ ಅನಿಲ ವಿತರಕ ಕಂಪನಿ ಮಾರಾಟಾಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 34 ಅನಿಲ ವಿತರಣೆ ಕಂಪನಿ ಮಾರಾಟಗಾರರಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ನಿಯಾಮನುಸಾರ ಸ್ಧಳಕ್ಕೆ ಹೋಗಿ ಸ್ಟಾಕ್ ಪರಿಶೀಲನೆ ಮಾಡಬೇಕು. ಅಕ್ರಮ ಮಾರಾಟ ಮಾಡುವುದು, ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರು ಗೃಹ ಬಳಕೆ ಅನಿಲ ಸಿಲಿಂಡರ್ ಮುಂಗಡ ಬುಕಿಂಗ್ ಮಾಡಿದಾಗ ಏಜೆನ್ಸಿ ಅವರು ನಿಯಾಮನುಸಾರ ಹಾಗೂ ಆದ್ಯತೆಯ ಮೇರೆಗೆ ವಿತರಿಸಬೇಕು. ಜಿಲ್ಲೆಯಲ್ಲಿ ಗೃಹಬಳಕೆ ಅನಿಲ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಇಲ್ಲ. ಗೃಹಬಳಕೆ ಅನಿಲದ ದೈನಂದಿನ ಸರಬರಾಜು ಮತ್ತು ವಿತರಣೆಯಲ್ಲಿ ಯಾವುದೇ ಅಡಚಣೆ ಇಲ್ಲದೆ ಎಂದಿನಂತೆ ನಡೆಯುತ್ತಿದೆ. ಸಾರ್ವಜನಿಕರು ಯಾವುದೇ ರೀತಿಯ ಅನಗತ್ಯ ಗೊಂದಲ ಮತ್ತು ಆತಂಕಗಳಿಗೆ ಒಳಗಾಗಬಾರದು ಎಂದರು.

ಜಿಲ್ಲೆಯಲ್ಲಿನ ಅಂಗನವಾಡಿಗಳು, ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಹಾಸ್ಟೆಲ್‌ಗಳಿಗೆ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಆದ್ಯತೆಯಲ್ಲಿ ಅನಿಲ ಸರಬರಾಜು ಮಾಡುವಂತೆ ಹೇಳಿದರು.

ಸಭೆಯಲ್ಲಿ ಎಸ್ಪಿ ಡಾ. ವಿ.ಜೆ. ಶೋಭಾರಾಣಿ, ಆಹಾರ ಇಲಾಖೆ ಉಪನಿರ್ದೇಶಕ ಪ್ರತೀಕ ಹೆಗ್ಡೆ ಹಾಗೂ ಅನಿಲ ಸರಬರಾಜು ಕಂಪನಿಗಳ ಅಕಾರಿಗಳು, ಜಿಲ್ಲೆಯ ವಿವಿಧ ತಾಲೂಕುಗಳ ಅನಿಲ ಸರಬರಾಜುದಾರರು ಭಾಗವಹಿಸಿದ್ದರು.

-----------

1ಕೆಎಂಎನ್ ಡಿ21