ಸಾರಾಂಶ
ನೆಮ್ಮಾರು ಸಮಾಜಿಕ ಪರಿಶೋದನಾ ಗ್ರಾಮಸಭೆಯ ಅಧ್ಯಕ್ಷತೆಯಲ್ಲಿ ಸಲಹೆ
ಕನ್ನಡಪ್ರಭ ವಾರ್ತೆ, ಶೃಂಗೇರಿನರೇಗಾ, ಸಾಮಾಜಿಕ ಅರಣ್ಯ ಸಮೀತಿ, ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದು, ಜನರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ ಸಲಹೆ ನೀಡಿದರು.
ತಾಲೂಕಿನ ನೆಮ್ಮಾರು ಪಂಚಾಯಿತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ನೆಮ್ಮಾರು ಪಂಚಾಯಿತಿಯ ಸಾಮಾಜಿಕ ಪರಿಶೋದನಾ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಯೋಜನೆ, ಸೌಲಭ್ಯಗಳು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಬೇಕು .ಆಗಲೇ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ತಿಳಿಸಿದರು.ಯೋಜನೆಗಳ ಬಗ್ಗೆ ಅಧಿಕಾರಿಗಳು ಕಚೇರಿಗಳಲ್ಲಿ ಜನರಿಗೆ ಮಾಹಿತಿ ನೀಡಿ ತಲುಪಿಸಬೇಕು. ಗ್ರಾಮಗಳಲ್ಲಿನ ಸಮಸ್ಯೆಗಳ ಬಗ್ಗೆಯೂ ಪರಿಶೀಲಿಸಬೇಕು. ತೋಟಗಾರಿಕೆ, ಕೃಷಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಿಗಬಹುದಾದ ಸರ್ಕಾರದ ಸೌಲಭ್ಯಗಳ ಬಗ್ಗೆ ಅರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಬೇಕು ಎಂದರು.
ತಾಲೂಕು ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ವ್ಯವಸ್ಥಾಪಕಿ ರಶ್ಮಿತಾ ಮಾತನಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನರೇಗಾ ಯೋಜನೆ ಉಪಯೋಗ ಎಲ್ಲರಿಗೂ ಸಿಗುವಂತಾಗಬೇಕು. ಕೂಲಿ ಕಾರ್ಮಿಕರನ್ನು ಗುರುತಿಸಬೇಕಿದೆ. ಎಲ್ಲಾ ಇಲಾಖೆಗಳಲ್ಲಿಯೂ ಉದ್ಯೋಗ ಚೀಟಿ ದಾಖಲಾತಿಗಳು ನಡೆದು ಹೊಸ ಉದ್ಯೋಗ ಚೀಟಿಗಳು ದಾಖಲಾಗಬೇಕಿದೆ. ಹಳೆ ಉದ್ಯೋಗ ಚೀಟಿಗಳನ್ನು ನವೀಕರಿಸಬೇಕಿದೆ ಎಂದು ಹೇಳಿದರು.ಸಾಮಾಜಿಕ ಅರಣ್ಯ ಸಮಿತಿ ಅಭಿವೃದ್ಧಿ ಕಾಮಗಾರಿಗಳಿಗೆ ನಾಮಪಲಕ ಅಳವಡಿಸಬೇಕಿದೆ. ಕಡ್ಡಾಯವಾಗಿ ಇದನ್ನು ಅನುಸರಿಸಬೇಕಿದೆ. ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಫಲಾನುಭವಿಗಳು ಉಪಯೋಗ ಪಡೆದುಕೊಳ್ಳಬೇಕಿದೆ ಎಂದರು.
ಗ್ರಾಮಸ್ಥರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿ ಹೊಸದೇವರ ಹಡ್ಲು ರವಿಶಂಕರ್ ಮಾತನಾಡಿ ಗ್ರಾಮದಲ್ಲಿ ಕಾಮಗಾರಿಗಳು ಉತ್ತಮವಾಗಿ ನಡೆಯುತ್ತಿದೆ. ಹೆಚ್ಚು ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಎಪಿಎಲ್ ಕಾರ್ಡುದಾರರಿಗೂ ಯೋಜನೆ ಸೌಲಭ್ಯ ಸಿಗಬೇಕು. ಆಗಲೇ ಯೋಜನೆ ಯಶಸ್ವಿಯಾಗುತ್ತದೆ. ಬಡ ರೈತರಿಗೆ ಉದ್ಯೋಗ ಖಾತ್ರಿ ಯೋಜನೆ ಸೌಲಭ್ಯ ಸಿಗುತ್ತಿಲ್ಲ. ರೈತರಿಗೂ ಸೌಲಭ್ಯ ಸಿಗುವಂತೆ ಮಾಡಬೇಕು ಎಂದರು.ಗ್ರಾಮಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ, ಉಪಾಧ್ಯಕ್ಷೆ ವಾಣಿ ದುರ್ಗಾಪ್ರಸಾದ್, ಜಿಲ್ಲಾ ಒಂಬುಡ್ಸಮನ್ ಅಧಿಕಾರಿ ನಟರಾಜ್, ತಾಂತ್ರಿಕ ಸಂಯೋಜಕಿ ಶ್ವೇತಾ, ಐಸಿ ಸೌಮ್ಯ, ಗ್ರಾಪಂ ಸದಸ್ಯರಾದ ಜನಾರ್ದನ್, ಉಮೇಶ್ ನಾಯಕ್, ಜ್ಯೋತಿ ಚಂದ್ರಶೇಖರ್, ಲೀಲಾವತಿ ರವಿಶಂಕರ್ , ಪ್ರಭಾರಿ ಪಿಡಿಒ ಚಂದ್ರಕಾಂತಿ ಮತ್ತಿತರರು ಉಪಸ್ಥಿತರಿದ್ದರು.
7 ಶ್ರೀ ಚಿತ್ರ 1-ಶೃಂಗೇರಿ ನೆಮ್ಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರದಲ್ಲಿ ನಡೆದ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ವೀಣಾ ಮಾತನಾಡಿದರು. ಗಿರಿಜಮ್ಮ,ವಾಣಿ ಮತ್ತಿತರರು ಇದ್ದರು.