ಸಾರಾಂಶ
ಗೋಕರ್ಣ: ಮಂಗಳವಾರ ಸುರಿದ ಭಾರಿ ಮಳೆಗೆ ಹನೇಹಳ್ಳಿ ಮತ್ತು ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸ್ಥಳೀಯ ಆಡಳಿತ ಮಳೆಯ ಮುಂಜಾಗೃತ ಕ್ರಮ ತೆಗೆದುಕೊಳ್ಳದ ಪರಿಣಾಮ ಕೃತಕ ನೆರ ಉಂಟಾಗಿತ್ತು.
ಹನೇಹಳ್ಳಿಯ ಗಿರೀಶ ಮಾಣಿ ನಾಯ್ಕ ಹಾಗೂ ಮಂಜು ನಾಯ್ಕ ಎಂಬುವವರ ಮನೆಗೆ ಚರಂಡಿ ನೀರು ನುಗ್ಗಿ ಹಾನಿಯಾಗಿದೆ.ಹನೇಹಳ್ಳಿ ಗ್ರಾಪಂದಿಂದ ಈ ಭಾಗದ ಚರಂಡಿಯ ಹೂಳೆತ್ತದೆ ಬಿಟ್ಟ ಪರಿಣಾಮ ಈ ಆವಾಂತರವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಪಂಚಾಯತ ಅಭಿವೃದ್ಧಿ ಅಧಿಕಾರಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದಿದ್ದು, ತಕ್ಷಣ ಈ ಬಗ್ಗೆ ದೂರವಾಣಿ ಮೂಲಕ ಶಾಸಕ ದಿನಕರ ಶೆಟ್ಟಿ ಅವರ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದರು. ಆದರೆ ಬೇರೆ ನಿಗದಿತ ಕಾರ್ಯಕ್ರಮ ಇರುವುದರಿಂದ ಬರಲಾಗುವುದಿಲ್ಲ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು, ತಮಗಾದ ತೊಂದರೆಗೆ ಜನರು ಗ್ರಾಪಂಗೆ ತೆರಳಿ ಆಕ್ರೋಶ ಹೊರ ಹಾಕಿದ್ದಾರೆ. ಮಳೆಗಾಲದ ಪೂರ್ವಭಾವಿಯಾಗಿ ಚರಂಡಿ ಸ್ಚಚ್ಚಗೊಳಿಸದೆ ಬಿಟ್ಟ ಪರಿಣಾಮ ಬಂಕಿಕೊಡ್ಲ ಪೇಟೆಯ ಭಾಗ, ಶಾಲೆ ಹತ್ತಿರ ನೀರು ತುಂಬಿ ಸಂಚಾರಕ್ಕೆ ತೊಡಕಾಗುತ್ತಿದೆ, ಅಲ್ಲದೇ ಶಾಲಾ ತರಗತಿ ಪ್ರಾರಂಭವಾದರೆ ಪಟ್ಟಮಕ್ಕಳು ಅಪಾಯದಲ್ಲೇ ಸಾಗಬೇಕಿದೆ. ಕಳೆದ ವರ್ಷ ಸಹ ಇದೇ ಸಮಸ್ಯೆಯಾಗಿದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದು, ಈ ಬಗ್ಗೆ ಜಿಲ್ಲಾ ಅಥವಾ ತಾಲೂಕಾಡಳಿತವಾದರೂ ಎಚ್ಚೆತ್ತು ಮಳೆಗಾಲ ಪ್ರಾರಂಭವಾಗುವ ಮುನ್ನ ಸಮಸ್ಯೆ ಬಗೆಹರಿಸಬೇಕಿದೆ.
ಆವಾಂತರ: ಗಂಗಾವಳಿ ಸೇತುವೆ ಹತ್ತಿರದ ರಸ್ತೆ ಬಳಿ ಚರಂಡಿ ಅಂಚಿನಲ್ಲಿ ವಿದ್ಯುತ್ ಪರಿವರ್ತಕ ಇದ್ದು, ಕಂಬ ಕುಸಿದು ಬೀಳುವ ಹಂತ ತಲುಪಿದೆ. ಈ ಬಗ್ಗೆ ಹಲವು ದಿನಗಳ ಹಿಂದೆಯೇ ಸಂಬಂಧಿಸಿದ ಇಲಾಖೆಗೆ ಸಾರ್ವಜನಿಕರು ತಿಳಿಸಿದರೂ ಸಹ ಎಚ್ಚೆತ್ತುಕೊಳ್ಳದೆ ನಿರ್ಲಕ್ಷಿಸಿದ ಪರಿಣಾಮ ಕಂಬ ಕುಸಿದು ನಿಂತಿದ್ದು ,ಅವಘಡ ಸಂಭವಿಸುವ ಆತಂಕ ಎದುರಾಗಿದೆ.