ಕಾಡಾನೆಗಳಿಂದ ಬೇಸತ್ತ ಜನರಿಂದ ಅರಣ್ಯಾಧಿಕಾರಿಗಳಿಗೆ ತರಾಟೆ

| Published : Aug 24 2024, 01:19 AM IST

ಕಾಡಾನೆಗಳಿಂದ ಬೇಸತ್ತ ಜನರಿಂದ ಅರಣ್ಯಾಧಿಕಾರಿಗಳಿಗೆ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ತಾಲೂಕಿನ ಬಕ್ರವಳ್ಳಿ ಹಾಗೂ ಬಿಳಗುಳಿ ಗ್ರಾಮದಲ್ಲಿ ಅಪಾರ ಪ್ರಮಾಣದ ಕಾಫಿ, ಮೆಣಸು, ಅಡಕೆ, ಬಾಳೆ, ಭತ್ತ ಹಲವು ಬೆಳೆಗಳು ಕಾಡಾನೆಗಳ ದಾಳಿಗೆ ಸಂಪೂರ್ಣ ನೆಲಕಚ್ಚಿದ್ದು ಕೇವಲ ಬೆಳೆ ಹಾನಿಯಾದ ಸಂದರ್ಭದಲ್ಲಿ ಮಾತ್ರ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆಯವರು ಇಲ್ಲಿಗೆ ಬರುತ್ತಾರೆ. ಇದರಿಂದ ಏನು ಪ್ರಯೋಜನ ಎಂದು ಆಕ್ರೋಶಗೊಂಡು ಆನೆ ಕಾರ್ಯಾಚರಣೆಯ ಇಟಿಎಫ್ ಸಿಬ್ಬಂದಿಯನ್ನು ಬೆಳೆಗಾರರು ಕೂಡಿಹಾಕಲು ಯತ್ನಿಸಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಳೆಗಾರರಾದ ಕೋಕಿಲ, ಮೋಹನ್, ಮಲ್ಲಿಕಾರ್ಜುನ ಹಾಗೂ ವೀಣಾ ದಿನೇಶ್, ಈ ಭಾಗದಲ್ಲಿ ಸುಮಾರು ೩೮ ಕಾಡಾನೆಗಳು ಬೀಡು ಬಿಟ್ಟಿದ್ದು ಸಂಪೂರ್ಣವಾಗಿ ಈ ಭಾಗದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಕಾಫಿಬೆಳೆಗಾರರ ತೋಟಗಳು ಹಾಳಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಬಿಳಗುಲಿ, ಬಕ್ರವಳ್ಳಿ, ಸೂರ್‌ಕೋಡ್, ಬೆಳ್ಳಾವರ, ಹಿರೇಗರ್ಜೆ, ಕೆಸಗುಲಿ ಗ್ರಾಮದಲ್ಲಿ ಸುಮಾರು ೩೫ ಕ್ಕೂ ಹೆಚ್ಚು ಕಾಡಾನೆಗಳು ಒಂದು ವಾರದಿಂದ ಬೀಡು ಬಿಟ್ದಿದ್ದು ಅಪಾರ ಪ್ರಮಾಣದ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿಯನ್ನು ಜನರು ಕೂಡಿಹಾಕಲು ಯತ್ನಿಸಿದಲ್ಲದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಿನ ಬಕ್ರವಳ್ಳಿ ಹಾಗೂ ಬಿಳಗುಳಿ ಗ್ರಾಮದಲ್ಲಿ ಅಪಾರ ಪ್ರಮಾಣದ ಕಾಫಿ, ಮೆಣಸು, ಅಡಕೆ, ಬಾಳೆ, ಭತ್ತ ಹಲವು ಬೆಳೆಗಳು ಕಾಡಾನೆಗಳ ದಾಳಿಗೆ ಸಂಪೂರ್ಣ ನೆಲಕಚ್ಚಿದ್ದು ಕೇವಲ ಬೆಳೆ ಹಾನಿಯಾದ ಸಂದರ್ಭದಲ್ಲಿ ಮಾತ್ರ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆಯವರು ಇಲ್ಲಿಗೆ ಬರುತ್ತಾರೆ. ಇದರಿಂದ ಏನು ಪ್ರಯೋಜನ ಎಂದು ಆಕ್ರೋಶಗೊಂಡು ಆನೆ ಕಾರ್ಯಾಚರಣೆಯ ಇಟಿಎಫ್ ಸಿಬ್ಬಂದಿಯನ್ನು ಬೆಳೆಗಾರರು ಕೂಡಿಹಾಕಲು ಯತ್ನಿಸಿದ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬೆಳೆಗಾರರಾದ ಕೋಕಿಲ, ಮೋಹನ್, ಮಲ್ಲಿಕಾರ್ಜುನ ಹಾಗೂ ವೀಣಾ ದಿನೇಶ್, ಈ ಭಾಗದಲ್ಲಿ ಸುಮಾರು ೩೮ ಕಾಡಾನೆಗಳು ಬೀಡು ಬಿಟ್ಟಿದ್ದು ಸಂಪೂರ್ಣವಾಗಿ ಈ ಭಾಗದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಕಾಫಿಬೆಳೆಗಾರರ ತೋಟಗಳು ಹಾಳಾಗಿದೆ. ಚೇತನ್ ಎಂಬುವವರ ತೋಟದಲ್ಲಿ ಬೆಳಗ್ಗಯಿಂದ ಅಲ್ಲೇ ಬೀಡುಬಿಟ್ಟಿರುವ ಕಾಡಾನೆಗಳು ಹಿಂಡನ್ನು ಓಡಿಸಲು ಮಾತ್ರ ಇಲ್ಲಿಗೆ ಅಧಿಕಾರಿಗಳು ಬರುತ್ತಿದ್ದಾರೆ. ಈಗಾಗಲೇ ನಮ್ಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮದ ಬಂದಿರುವ ಒಂದು ಆನೆ ಅವರನ್ನು ಅಟ್ಟಾಡಿಸಿದ್ದು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಮ್ಮ ಕೈಯಲ್ಲಿ ಆಗದಿದ್ದರೆ ನಮಗೆ ಬಿಡಿ ನಾವು ಇಲ್ಲಿಂದ ಎಲ್ಲಾ ಆನೆಗಳನ್ನು ಬೆಳೆಗಾರರು ಸೇರಿ ಓಡಿಸುತ್ತೇವೆ ಎಂದು ಕಿಡಿಕಾರಿದರಲ್ಲದೆ ನಿಮ್ಮ ಮೇಲಾಧಿಕಾರಿಗಳು ಬರುವರೆಗೂ ಆನೆ ಓಡಿಸಲು ಬಂದಿರುವ ಇಟಿಎಫ್ ಸಿಬ್ಬಂದಿಗೆ ನಾವು ಹೊರಹೋಗಲು ಬಿಡುವುದಿಲ್ಲ. ನಮಗೆ ನಿಮ್ಮ ಪರಿಹಾರ ಬೇಡ ನಮಗೆ ಆನೆಗಳನ್ನು ಓಡಿಸಿ ಇಲ್ಲದಿದ್ದರೆ ನಮ್ಮ ತೋಟಗಳನ್ನು ನಿಮಗೆ ನೀಡುತ್ತೇವೆ ನೀವೆ ನಮಗೆ ಬದಲಿ ವ್ಯವಸ್ಥೆ ಮಾಡಿಕೊಡಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೇಲೂರು ವಲಯ ಅರಣ್ಯ ಅಧಿಕಾರಿ ವಿನಯ್ ಕುಮಾರ್ ಮಾತನಾಡಿ, ಭುವನೇಶ್ವರಿ, ಓಲ್ಡ್ ಬೆಲ್ಟ್ ಹಾಗೂ ಬಿಟ್ಟಮ್ಮ ಗ್ಯಾಂಗ್‌ನ ಸುಮಾರು ೩೮ ಆನೆಗಳು ಈ ಭಾಗದಲ್ಲಿ ಬೀಡುಬಿಟ್ಟಿದ್ದು ಇದರಿಂದ ತುಂಬಾ ಹಾನಿಯಾಗಿದೆ. ಸಂಪೂರ್ಣ ಮಾಹಿತಿಯನ್ನು ಪಡೆದು ಆನೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ನಮ್ಮ ಸಿಬ್ಬಂದಿ ರಾತ್ರಿ ಹಗಲೆನ್ನದೆ ಕೆಲಸ ಮಾಡುತ್ತಿದ್ದೇವೆ. ಆದರೂ ಸಹ ಕೆಲ ಆನೆಗಳು ಮದವೇರಿರುವುದರಿಂದ ಮರಿ ಆನೆಗಳು ಇರುವುದರಿಂದ ಅವುಗಳು ನಿಧಾನವಾಗಿ ಹೊರಕಳಿಸಲಾಗುತ್ತಿದೆ. ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಅತಿ ಶೀಘ್ರದಲ್ಲಿ ಶಾಸಕರ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಈ ಭಾಗದ ಬೆಳೆಗಾರರ ಸಮಸ್ಯೆಗಳನ್ನು ಆಲಿಸುವ ಕೆಲಸವನ್ನು ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಜಿಲ್ಲಾ ಆನೆ ಕಾರ್ಯ ಪಡೆಯ ಆರ್‌ಎಫ್‌ಒ ಷರೀಫ್‌, ಉಪವಲಯಾರಣ್ಯಾಧಿಕಾರಿ ಸುಭಾಷ್, ಯತೀಶ್, ವೇದಾರಾಜ್, ಗ್ರಾಮಸ್ಥರಾದ ಚೇತನ್, ಕಾಂತರಾಜು, ಮಹೇಂದ್ರ, ನಟಶೇಖರ್, ಪರಮೇಶ್, ಶಿವಪ್ಪ, ಮಲ್ಲಿಕಾರ್ಜುನ ಇತರರು ಹಾಜರಿದ್ದರು.

*ಹೇಳಿಕೆ1

ನಮ್ಮ ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಆನೆಗಳ ಹಾವಳಿ ಜಾಸ್ತಿಯಾಗುತ್ತಿದ್ದು, ತೀವ್ರ ಸಂಕಷ್ಟಕ್ಕೆ ಬೆಳೆಗಾರರು ಹಾಗೂ ರೈತರು ಸಿಲುಕುತ್ತಿದ್ದಾರೆ. ಆನೆಗಳನ್ನು ಇಲ್ಲಿಂದ ಶಾಶ್ವತವಾಗಿ ಸ್ಥಳಾಂತರಿಸಲು ಮನವಿ ಮಾಡಿದ್ದು, ತಡೆಗೋಡೆಗಳನ್ನು ನಿರ್ಮಾಣ ಮಾಡಲು ಅನುದಾನವನ್ನು ಕೇಳಿದ್ದು, ಅತಿ ಶೀಘ್ರದಲ್ಲಿ ಆ ಭಾಗದ ಬೆಳೆಗಾರ ರೈತರೊಂದಿಗೆ ಚರ್ಚಿಸಿ ಅಧಿಕಾರಿಗಳ ಸಭೆಯನ್ನು ಕರೆಯಲಾಗುತ್ತದೆ.

- ಎಚ್‌ ಕೆ ಸುರೇಶ್‌, ಶಾಸಕ

* ಬಾಕ್ಸ್‌ನ್ಯೂಸ್‌: ಉಗ್ರ ಪ್ರತಿಭಟನೆಯ ಎಚ್ಚರಿಕೆಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ಧೂರಿ ಕುಮಾರ್ ಮಾತನಾಡಿ, ಮುರ್ನಾಲ್ಕು ವರ್ಷಗಳಿಂದ ಕೇವಲ ಬೆಳೆಗಾರರಿಗೆ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಇವರಿಂದ ಯಾವುದೇ ಸಣ್ಣ ಕೆಲಸವೂ ಆಗಿಲ್ಲ. ಆನೆಗಳು ಬಂದು ಪ್ರಾಣಾಪಾಯವಾದಾಗ ಬೆಳೆ ಹಾನಿಯಾದಾಗ ಮಾತ್ರ ನಾಟಕವಾಡಲು ಬರುತ್ತಾರೆ. ಇನ್ನೊಂದು ವಾರದಲ್ಲಿ ನಮಗೆ ಸಂಪೂರ್ಣ ಮಾಹಿತಿ ನೀಡಿ, ಆನೆಗಳನ್ನು ಓಡಿಸಿ ನಮಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ತಾಲೂಕಿನ ಎಲ್ಲಾ ಬೆಳೆಗಾರರು ಸೇರಿ ಬೇಲೂರು ಬಂದ್ ಮಾಡಿ ರಸ್ತೆ ತಡೆ ಮಾಡಿ ಉಗ್ರ ರೀತಿಯಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.