ಮೋದಿ ಬದ್ಧತೆ, ತಾಕತ್ತಿನ ಮೇಲೆ ಜನರಿಗೆ ನಂಬಿಕೆ: ಸಿ.ಟಿ.ರವಿ

| Published : May 06 2024, 12:38 AM IST

ಮೋದಿ ಬದ್ಧತೆ, ತಾಕತ್ತಿನ ಮೇಲೆ ಜನರಿಗೆ ನಂಬಿಕೆ: ಸಿ.ಟಿ.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ಳು ಆರೋಪ, ಅನುಮಾನ, ಅಪಪ್ರಚಾರ ಮಾಡಿಕೊಂಡೇ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ, ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬದ್ಧತೆ, ತಾಕತ್ತು ಮತ್ತು ಪಾರದರ್ಶಕ ಆಡಳಿತ ಮೇಲೆ ನಂಬಿಕೆ ಇದೆ. ಆದ್ದರಿಂದ ಮತ್ತೊಮ್ಮೆ ಮೋದಿ ಪ್ರಧಾನಿ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

- ಸುಳ್ಳು ಆರೋಪ, ಅನುಮಾನ, ಅಪಪ್ರಚಾರ ಮಾಡುವ ಕಾಂಗ್ರೆಸ್‌: ವಾಗ್ದಾಳಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸುಳ್ಳು ಆರೋಪ, ಅನುಮಾನ, ಅಪಪ್ರಚಾರ ಮಾಡಿಕೊಂಡೇ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ, ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬದ್ಧತೆ, ತಾಕತ್ತು ಮತ್ತು ಪಾರದರ್ಶಕ ಆಡಳಿತ ಮೇಲೆ ನಂಬಿಕೆ ಇದೆ. ಆದ್ದರಿಂದ ಮತ್ತೊಮ್ಮೆ ಮೋದಿ ಪ್ರಧಾನಿ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೀತಿ, ನೇತೃತ್ವ, ನಿಯತ್ತು ಮೂರಂಶಗಳ ಮೇಲೆ ಬಲವಾದ ನಂಬಿಕೆ ಇಟ್ಟ ಪಕ್ಷ ನಮ್ಮದು. ದೇಶದ ವಿಕಾಸದ ನೀತಿ ನಮ್ಮದೆಂಬುದು ಸ್ಪಷ್ಟ. ದೇಶ ಮಾತ್ರವಲ್ಲ ಇಡೀ ವಿಶ್ವವೇ ಮೆಚ್ಚಿದ ಮೋದಿ ನಮ್ಮ ಪಕ್ಷದ ಸಾರಥ್ಯ ವಹಿಸಿದ್ದಾರೆ ಎಂದರು.

ಅತ್ಯಂತ ಪರಿಶ್ರಮ ಮತ್ತು ಭ್ರಷ್ಟಾಚಾರರಹಿತ ಆಡಳಿತ ನಡೆಸಿದ್ದಾರೆ. ಜನರೂ ನರೇಂದ್ರ ಮೋದಿ ನಾಯಕತ್ವ ಒಪ್ಪಿ, ಮತ್ತೊಮ್ಮೆ ಕೇಂದ್ರದಲ್ಲಿ ಮೋದಿಗೆ ಆಡಳಿತ ಚುಕ್ಕಾಣಿ ನೀಡಲಿದ್ದಾರೆ. ದಾವಣಗೆರೆಯಲ್ಲೂ ಮತದಾರರು ಗಾಯತ್ರಿ ಸಿದ್ದೇಶ್ವರ ಅವರನ್ನು ದಾಖಲೆಯ ಮತಗಳ ಅಂತರದಲ್ಲಿ ಗೆಲ್ಲಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಅಂತ್ಯೋದಯದ ಮೂಲಕ ಸಮಾಜ ಕಟ್ಟಕಡೆಯ ವ್ಯಕ್ತಿಯೂ ಯೋಜನೆ ತಲುಪಿಸುವ ಪಕ್ಷ ಬಿಜೆಪಿ. ದೇಶದ ಜನರನ್ನು ಬೇಡುವ ಸ್ಥಿತಿಯಿಂದ ನೀಡುವ ಸ್ಥಿತಿಗೆ ತರಬೇಕೆಂಬುದು ಮೋದಿಯ ಆಶಯ. ಸುಧಾರಣೆ, ಸಂರಕ್ಷಣೆ, ಸಾಂಸ್ಕೃತಿಕ, ಸಮೃದ್ಧಿ, ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಬಿಜೆಪಿ ಯೋಜನೆ ರೂಪಿಸುತ್ತದೆ. ಈಗಾಗಲೇ ಭಾರತ ಜಾಗತಿಕವಾಗಿ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಮುಂದಿನ 2 ವರ್ಷದಲ್ಲಿ ನಂಬರ್ 1 ಬಲಾಢ್ಯ ದೇಶವಾಗಿ ಯೋಜನೆಗಳನ್ನೂ ಬಿಜೆಪಿ ರೂಪಿಸಿದೆ ಎಂದು ಹೇಳಿದರು.

ದೇಶದ ಅಭಿವೃದ್ಧಿ ಪರಿಕಲ್ಪನೆ ಹೊಂದಿರುವ ಮೋದಿ ಎಲ್ಲರನ್ನೂ ಒಳಗೊಳ್ಳುವಿಕೆ, ಏಕತೆಗೆ ಒತ್ತು ನೀಡಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ಸಿನವರು ಮೋದಿ ವಿರುದ್ಧ ಸುಳ್ಳು, ಅಪಪ್ರಚಾರ, ಅನುಮಾನ ಹುಟ್ಟಿ ಹಾಕುವನ್ನೇ ಕಾರ್ಯಸೂಚಿ ಮಾಡಿಕೊಂಡು ಮತ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ತೆರಿಗೆ, ಬರ ಪರಿಹಾರ, ಮೀಸಲಾತಿ ವಿಷಯದಲ್ಲೂ ಕಾಂಗ್ರೆಸ್ಸಿನವರು ಅಪಪ್ರಚಾರ ಮಾಡುತ್ತಿದ್ದು, ಮೋದಿ ರಾಜ್ಯಕ್ಕೆ ₹5.29 ಲಕ್ಷ ಕೋಟಿ ತೆರಿಗೆ ಪಾಲು ನೀಡಿದ್ದಾರೆ ಎಂದು ವಿವರಿಸಿದರು.

ಮನಮೋಹನ ಸಿಂಗ್ ಪ್ರಧಾನಿ ಇದ್ದಾಗಲೂ ಇಷ್ಟೊಂದು ಹಣ ನೀಡಿರಲಿಲ್ಲ. ಕಳೆದ 10 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಪರ ಪರಿಹಾರವಾಗಿ ₹4,571 ಕೋಟಿ ನೀಡಿದ್ದಾರೆ. ಮೀಸಲಾತಿ ವಿರೋಧಿಗಳು ನಾವೆಂದು ಬಿಂಬಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಅಸಲಿಗೆ ಪರಿಶಿಷ್ಟರ ಮೀಸಲಾತಿ ಒಳಗೆ ಮತೀಯ ಮೀಸಲಾತಿ ತುರುಕಲು ಪ್ರಯತ್ನಿಸಿದ್ದೇ ಕಾಂಗ್ರೆಸ್. ಆದರೆ, ಮೋದಿ ಪರಿಶಿಷ್ಟರ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿದ್ದಾರೆ ಎಂದು ಅವರು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಆಶಯ ಮತ್ತು ಸಂವಿಧಾನ ಉಳಿಸುವ ಕೆಲಸ ಮೋದಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಸುಳ್ಳನ್ನೇ ಮನೆ ದೇವರು ಮಾಡಿಕೊಂಡು, ಅಪಪ್ರಚಾರ ಮಾಡುತ್ತಿದೆ. ಇದುವರೆಗೂ ಕಾಂಗ್ರೆಸ್ಸಿಗೆ ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರೆಂದೇ ಗೊತ್ತಿಲ್ಲ. ರಾಹುಲ್ ಗಾಂಧಿ ಹೆಸರು ಹೇಳಿದರೆ ಮತ ಸಿಗುವುದಿಲ್ಲವೆಂಬ ಸತ್ಯ ಕಾಂಗ್ರೆಸ್ಸಿಗರಿಗೆ ತಿಳಿದಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಈ ಬರ ಪರಿಸ್ಥಿತಿಯಲ್ಲಿ ಎಷ್ಟು ಗೋ ಶಾಲೆ ಆರಂಭಿಸಿದ್ದಾರೆ? ಎಷ್ಟು ಮೇವು ನೀಡಿದ್ದಾರೆ ಮೊದಲು ಲೆಕ್ಕ ನೀಡಲಿ ಎಂದು ಅವರು ಆಗ್ರಹಿಸಿದರು.

ಕಳೆದ 7 ತಿಂಗಳಿನಿಂದ ಹಾಲು ಉತ್ಪಾದಕರಿಗೆ ಸಬ್ಸಿಡಿ ಹಣ ನೀಡಿಲ್ಲ. 108 ಅಂಬ್ಯುಲೆನ್ಸ್ ಸಿಬ್ಬಂದಿಗೆ ವೇತನ ಕೊಟ್ಟಿಲ್ಲ. ಯಾಕೆಂದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿಯೇ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ವಿಪ ಸದಸ್ಯರಾದ ಕೆ.ಎಸ್. ನವೀನ, ಎನ್. ರವಿಕುಮಾರ, ಪಕ್ಷದ ವಕ್ತಾರೆ ಮಾಳವಿಕಾ ಅವಿನಾಶ, ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ, ಅಣ್ಣೇಶ ಐರಣಿ, ಎಸ್.ಎಂ.ವೀರೇಶ ಹನಗವಾಡಿ, ಬಿ.ಎಂ. ಸತೀಶ ಕೊಳೇನಹಳ್ಳಿ ಸೇರಿದಂತೆ ಇತರರು ಇದ್ದರು.

- - -

ಕೋಟ್ಸ್‌

ಜಿಹಾದಿ ಮಾನಸಿಕತೆ ಬೆಂಬಲಿಸಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ಸಿಗರ ಆಡಳಿತ ನೋಡಿದರೆ ಔರಂಗಜೇಬ್, ಟಿಪ್ಪುಸುಲ್ತಾನ್, ಬಾಬರ್, ಘಜ್ನಿ ಮಹಮದ್‌ ಅವರನ್ನು ಮೀರಿಸಿದಂತಿದೆ. ಅವರೆಲ್ಲರಿಗಿಂತಲೂ ಈ ಕಾಂಗ್ರೆಸ್ ಪಕ್ಷದವರು ಒಂದು ಹೆಜ್ಜೆ ಮುಂದಿದ್ದಾರೆ. ಹಿಂದೆ ಲವ್ ಜಿಹಾದ್ ಇತ್ತು. ಈಗ ಸುಳ್ಳು ಹೇಳಿ ವೋಟ್ ಜಿಹಾದ್ ಮಾಡಲು ಯತ್ನಿಸುತ್ತಿದ್ದಾರೆ

- ಸಿ.ಟಿ.ರವಿ, ಮಾಜಿ ಸಚಿವ

- - -

ನಾವು ಪಾನ್ ಮಸಾಲ ಮಾರಾಟ ಮಾಡುತ್ತೇವೆನ್ನುತ್ತಾರೆ. ಆಪಾದನೆ ಮಾಡುವ ಮುಂಚೆ ಹತ್ತು ಬಾರಿ ಯೋಚಿಸಿ ಆರೋಪಿಸಬೇಕು. ಕಲ್ಲೇಶ್ವರ ಮಿಲ್‌ನಲ್ಲಿ ರಿಪೀಟ್ ಮತ್ತು ಫೈರ್ ಹೆಸರಿನಲ್ಲಿ ಅವರು ಮಾರುತ್ತಿರುವುದಾದರೂ ಏನು? ನಾನು ಇದುವರೆಗೂ ಭ್ರಷ್ಟಾಚಾರ ಮಾಡಿಲ್ಲ. ತಾವು ಸಭ್ಯ ರಾಜಕಾರಣ ಮಾಡಿದರೆ ಸೂಕ್ತ. ಹೆಚ್ಚು ಮಾತನಾಡಿದರೆ ನಿಮ್ಮ ಪುರಾಣ ಬಿಚ್ಚಿಡಬೇಕಾಗುತ್ತದೆ

- ಜಿ.ಎಂ.ಸಿದ್ದೇಶ್ವರ, ಸಂಸದ

- - - -5ಕೆಡಿವಿಜಿ9, 10:

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮಾಜಿ ಸಚಿವರಾದ ಸಿ.ಟಿ.ರವಿ, ಬಿ.ಎ.ಬಸವರಾಜ ಭೈರತಿ, ವಿಪ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ, ಎನ್.ರಾಜಶೇಖರ ನಾಗಪ್ಪ, ರಾಜನಹಳ್ಳಿ ಶಿವಕುಮಾರ, ನವೀನ, ರಮೇಶ ನಾಯ್ಕ, ಆರ್.ಎಲ್.ಶಿವಪ್ರಕಾಶ ಇತರರು ಪ್ರಚಾರ ನಡೆಸಿದರು.