ಮಾರುಕಟ್ಟೆಯಲ್ಲಿಯೂ ಹಸಿರು ಪಟಾಕಿಗಳ ಬಗ್ಗೆ ಗ್ರಾಹಕರ ಆಸಕ್ತಿ ಹೆಚ್ಚುತ್ತಿದೆ. ಆದರೆ, ಸಾಮಾನ್ಯ ಪಟಾಕಿಗಳ ನಡುವೆ ಹಸಿರು ಪಟಾಕಿ ಗುರುತಿಸುವುದೇ ಗ್ರಾಹಕರಿಗೆ ಸವಾಲಾಗಿದೆ.

ಅಜೀಜಅಹ್ಮದ ಬ‍ಳಗಾನೂರ

ಹುಬ್ಬಳ್ಳಿ:

ದೀಪಾವಳಿ ಸಂಭ್ರಮದ ಹೆಸರಿನಲ್ಲಿ ಪಟಾಕಿಗಳ ಅಬ್ಬರ ಹೆಚ್ಚಾದರೆ ಪರಿಸರಕ್ಕೆ ಹೊಗೆ, ಜನರ ಆರೋಗ್ಯಕ್ಕೆ ಕುತ್ತು. ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯದ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಹಸಿರು ಪಟಾಕಿಗಳ ಬಳಕೆಗೆ ಸರ್ಕಾರ ಒತ್ತು ನೀಡಿದೆ. ಇದರ ಬೆನ್ನಲ್ಲೇ ಮಾರುಕಟ್ಟೆಯಲ್ಲಿಯೂ ಹಸಿರು ಪಟಾಕಿಗಳ ಬಗ್ಗೆ ಗ್ರಾಹಕರ ಆಸಕ್ತಿ ಹೆಚ್ಚುತ್ತಿದೆ. ಆದರೆ, ಸಾಮಾನ್ಯ ಪಟಾಕಿಗಳ ನಡುವೆ ಹಸಿರು ಪಟಾಕಿ ಗುರುತಿಸುವುದೇ ಗ್ರಾಹಕರಿಗೆ ಸವಾಲಾಗಿದೆ.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ 12 ಹಾಗೂ ಧಾರವಾಡದಲ್ಲಿ 15 ಪಟಾಕಿ ಮಾರಾಟ ಮಳಿಗೆ ತೆರೆದು, ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಮುನ್ನಚ್ಚರಿಕಾ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಕ್ಯೂಆರ್‌ ಕೋಡ್‌:

ಹಸಿರು ಪಟಾಕಿ ಖರೀದಿಸುವಾಗ ಪೊಟ್ಟಣದ ಮೇಲಿರುವ ಕ್ಯೂ ಆರ್‌ ಕೋಡ್ ಹಾಗೂ ಅಧಿಕೃತ ಪ್ರಮಾಣೀಕರಣದ ಲೋಗೋ ಪರಿಶೀಲಿಸಬೇಕು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌), ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ) ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪೆಸೊ) ಅಧಿಕೃತ ಗುರುತುಗಳಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕ್ಯೂ ಆರ್‌ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಉತ್ಪನ್ನದ ದೃಢೀಕರಣದ ಮಾಹಿತಿ ಪಡೆಯಬಹುದು. ಕೇವಲ ಹಸಿರು ಬಣ್ಣದ ಪೊಟ್ಟಣ ಅಥವಾ ಹೆಸರಿನ ಆಧಾರದಲ್ಲಿ ಪಟಾಕಿ ಖರೀದಿಸುವುದು ಸೂಕ್ತವಲ್ಲ.

ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳಲ್ಲಿ ಹಾನಿಕಾರಕ ರಾಸಾಯನಿಕಗಳ ಬಳಕೆ ಕಡಿಮೆ ಇದ್ದು ನೈಟ್ರೋಜನ್ ಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್‌ನಂತಹ ಮಾಲಿನ್ಯಕಾರಕ ಅನಿಲಗಳ ಹೊರಸೂಸುವಿಕೆಯನ್ನು ತಗ್ಗಿಸುವ ಉದ್ದೇಶದಿಂದ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೂ ಕುಂಡ, ಸುರುಸುರು ಬತ್ತಿ ಸೇರಿದಂತೆ ವಿವಿಧ ಮಾದರಿಗಳಲ್ಲಿ ಲಭ್ಯವಿವೆ. ಆದರೆ, ಹಸಿರು ಪಟಾಕಿಗಳೂ ಸಂಪೂರ್ಣ ಮಾಲಿನ್ಯರಹಿತವಲ್ಲ ಎಂಬುದನ್ನು ಗ್ರಾಹಕರು ಗಮನದಲ್ಲಿಟ್ಟುಕೊಳ್ಳಬೇಕು.

2 ಗಂಟೆ ಮಾತ್ರ ಅವಕಾಶ:

ಸರ್ಕಾರದ ಮಾರ್ಗಸೂಚಿಯಂತೆ ದೀಪಾವಳಿ ಸಂದರ್ಭದಲ್ಲಿ ರಾತ್ರಿ 8ರಿಂದ 10ರ ವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ. ಹಗಲು ಪಟಾಕಿ ಸಿಡಿಸುವುದಕ್ಕೆ ನಿರ್ಬಂಧವಿದ್ದು, ನಿಷೇಧಿತ ಪಟಾಕಿಗಳ ಸಂಗ್ರಹ, ಮಾರಾಟ ಮತ್ತು ಬಳಕೆಯನ್ನೂ ನಿಯಂತ್ರಿಸಲಾಗಿದೆ. ನಿಗದಿತ ಸಮಯ ಮೀರದೆ, ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಸಂಭ್ರಮಕ್ಕೆ ಸುರಕ್ಷತೆಯೂ ಇರಲಿ

ಪಟಾಕಿಗಳ ಹೊಗೆ ಮತ್ತು ಧೂಳಿನ ಕಣಗಳು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು. ಶಬ್ದದ ಅಬ್ಬರ ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯ ಪೀಡಿತರಿಗೂ ತೊಂದರೆ ಉಂಟುಮಾಡುತ್ತದೆ. ಪಟಾಕಿ ಬಳಸುವಾಗ ಮಕ್ಕಳು ಪಾಲಕರ ಮೇಲ್ವಿಚಾರಣೆಯಲ್ಲಿರಬೇಕು. ಜನನಿಬಿಡ ಪ್ರದೇಶ, ಮನೆಗಳ ಸಮೀಪ ಹಾಗೂ ವಾಹನಗಳ ಬಳಿ ಪಟಾಕಿ ಸಿಡಿಸುವುದನ್ನು ತಪ್ಪಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಜತೆಗೆ ನೀರು ಮತ್ತು ಪ್ರಥಮ ಚಿಕಿತ್ಸಾ ವ್ಯವಸ್ಥೆ ಇರಿಸಿಕೊಳ್ಳಬೇಕು.ಬರದ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಪಟಾಕಿ ವ್ಯಾಪಾರ ಕೊಂಚ ಕಡಿಮೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹಸಿರು ಪಟಾಕಿಗಳನ್ನು ಕೇಳಿ ಖರೀದಿಸುತ್ತಿದ್ದಾರೆ.

ಮನೋಹರ, ಪಟಾಕಿ ಮಾರಾಟಗಾರಪ್ರತಿ ವರ್ಷಕ್ಕಿಂತ ಈ ಬಾರಿ ಪಟಾಕಿ ಬಳಕೆ ಕಡಿಮೆ ಮಾಡುತ್ತಿದ್ದೇವೆ. ಮಕ್ಕಳಲ್ಲಿಯೂ ಈ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಕಡಿಮೆ ಪ್ರಮಾಣದಲ್ಲಿ ಹಸಿರು ಪಟಾಕಿಗಳನ್ನು ಖರೀದಿಸುತ್ತಿದ್ದೇವೆ.

ಜ್ಞಾನೇಂದ್ರ ಸೋಲಂಕಿ, ಗ್ರಾಹಕ