ಪುಂಡರ ಬೈಕ್‌ ಕರ್ಕಶ ಶಬ್ದಕ್ಕೆ ಬೆಚ್ಚಿದ ಜನತೆ!

| Published : Jun 20 2024, 01:07 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎಲ್ಲಿ ನೋಡಿದರಲ್ಲಿ ಕರ್ಕಶ ಶಬ್ದ ಮಾಡುವ ಬೈಕ್ ಸವಾರರದ್ದೇ ಕಿರಿಕಿರಿ. ಇವರಿಗೆ ವೇಗದ ಮಿತಿ ಇಲ್ಲ, ಅದರಲ್ಲಿಯೂ ಪುಂಡರು ಅಪಾಯಕಾರಿ ಸದ್ದು ಮಾಡುತ್ತ ಬರುವ ಬೈಕ್‌ಗಳ ಹಾವಳಿ ಪಟ್ಟಣದಲ್ಲಿ ಹೆಚ್ಚಾಗಿದೆ. ಯುವಕರ ಈ ಹುಚ್ಚಾಟಕ್ಕೆ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎಲ್ಲಿ ನೋಡಿದರಲ್ಲಿ ಕರ್ಕಶ ಶಬ್ದ ಮಾಡುವ ಬೈಕ್ ಸವಾರರದ್ದೇ ಕಿರಿಕಿರಿ. ಇವರಿಗೆ ವೇಗದ ಮಿತಿ ಇಲ್ಲ, ಅದರಲ್ಲಿಯೂ ಪುಂಡರು ಅಪಾಯಕಾರಿ ಸದ್ದು ಮಾಡುತ್ತ ಬರುವ ಬೈಕ್‌ಗಳ ಹಾವಳಿ ಪಟ್ಟಣದಲ್ಲಿ ಹೆಚ್ಚಾಗಿದೆ. ಯುವಕರ ಈ ಹುಚ್ಚಾಟಕ್ಕೆ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ.

ಈ ಪಡ್ಡೆ ಹುಡುಗರ ವಾಹನಗಳ ಕರ್ಕಶವಾದ ಶಬ್ದಕ್ಕೆ ಶಾಲಾ ಮಕ್ಕಳು ಮತ್ತು ನಾಗರಿಕರ ಮನಸ್ಥಿತಿ ಹಾಳಾಗುತ್ತಿದ್ದು, ಅದರಲ್ಲಿಯೂ ಶಾಲಾ-ಕಾಲೇಜುಗಳ ಹತ್ತಿರ ಬೀದಿ ಕಾಮಣ್ಣರ, ಬೈಕ್‌ಗಳನ್ನು ಸೌಂಡ್‌ ಮಾಡುವವರ ಹಾವಳಿ ಹೆಚ್ಚಾಗುತ್ತಿದೆ. ಕಾಲೇಜು ವಿದ್ಯಾರ್ಥಿನಿಯರು, ಒಬ್ಬಂಟಿ ಮಹಿಳೆಯರು ಇವರ ಕಾಟಕ್ಕೆ ರಸ್ತೆಯಲ್ಲಿ ಓಡಾಡಲು ಆತಂಕಪಡುವಂತಾಗಿದೆ. ಪಟ್ಟಣದ ಬಸ್ ನಿಲ್ದಾಣದಿಂದ ಸಾಯಿ ಮಂದಿರದವರೆಗೆ, ಶಿವಯೋಗಿ ವೃತ್ತದಿಂದ ಸಂಕೋನಟ್ಟಿ ಗ್ರಾಮದವರೆಗೆ, ಐನಾಪುರ ರಸ್ತೆ, ಜತ್‌ ರಸ್ತೆ, ಮದಬಾವಿ ರಸ್ತೆ ಸೇರಿದಂತೆ ವಿವಿಧ ಕಿರು ರಸ್ತೆಗಳಲ್ಲಿಯೂ ಜನರನ್ನು ಲೆಕ್ಕಿಸದೇ ಜನರ ಮಧ್ಯೆ ವೇಗವಾಗಿ ಬಂದು ಬೈಕ್‌ ನುಗ್ಗಿಸುತ್ತಿದ್ದು, ಮಧ್ಯೆ ಹಾರ್ನ್‌ ಹಾಕಿ ಜೋರಾಗಿ ಸೌಂಡ್‌ ಮಾಡುತ್ತಾರೆ. ಇಷ್ಟಾದರೂ ಇವರನ್ನು ಪ್ರಶ್ನಿಸಲು ಪೊಲೀಸರು ಮುಂದಾಗುತ್ತಿಲ್ಲ. ಅವರ ಅಟ್ಟಹಾಸ ತಡೆಯಲು ಅವರಿಂದ ಸಾಧ್ಯವಾಗಿಲ್ಲ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.ಇಂತಹ ದೃಶ್ಯಗಳು ಅಥಣಿ ಪಟ್ಟಣದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದು, ರಸ್ತೆ ಸಂಚಾರಿ ನಿಯಮಗಳ ಪುಂಡ ಯುವಕರಿಗೆ ಲೆಕ್ಕಕ್ಕೆ ಇಲ್ಲದಂತಾಗಿವೆ. ಪೊಲೀಸ್ ಅಧಿಕಾರಿಗಳು ಮತ್ತು ಆರ್‌ಟಿಒ ಅಧಿಕಾರಿಗಳು ಸಂಚಾರಿ ನಿಯಮಗಳ ಬಗ್ಗೆ ಜನಜಾಗೃತಿ ಮೂಡಿಸಿ ಕೈ ತೊಳೆದುಕೊಂಡು ಮೌನವಾಗುತ್ತಾರೆ. ಆದರೆ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕರ್ಕಶ ಶಬ್ದ ಮಾಡುವ, ಸಾರ್ವಜನಿಕರಿಗೆ ಕಿರಿಕಿರಿ ಎನಿಸುವ ಪುಂಡರಿಗೆ ಕಡಿವಾಣ ಹಾಕಿಲ್ಲವೇಕೆ ಎಂದು ನಾಗರಿಕರು ಪೊಲೀಸರನ್ನೇ ಪ್ರಶ್ನೆ ಮಾಡುತ್ತಿದ್ದಾರೆ.ಇನ್ನು, ಬೇಕೆಂತಲೇ ಫ್ಯಾಶನ್‌ಗಾಗಿ ಕರ್ಕಶ ಸೈಲೆನ್ಸರ್‌ ಅನ್ನು ಅನೇಕ ಯುವಕರು ತಮ್ಮ ಬೈಕ್‌ಗಳಿಗೆ ಹಾಕಿಕೊಂಡು ಕಿರಿಕಿರಿ ನೀಡುವ ಯುವಕರ ಹುಚ್ಚಾಟವೂ ಇದೀಗ ಪಟ್ಟಣದಲ್ಲಿ ಹೆಚ್ಚಾಗಿದೆ. ಈ ಯುವಕರ ಹುಚ್ಚಾಟದಿಂದ ದಾರಿ ಹೋಕರಿಗೆ ಅಷ್ಟೇ ಅಲ್ಲದೆ, ವ್ಯಾಪಾರಸ್ಥರಿಗೆ ಮತ್ತು ರಸ್ತೆ ಬದಿ ವಾಸಿಸುವವರಿಗೆ ತಲೆನೋವಾಗಿ ಪರಿಣಮಿಸಿದೆ.ಪೊಲೀಸ್ ಇಲಾಖೆ ಅಧಿಕಾರಿಗಳು ಆಗಾಗ ರಸ್ತೆಗಿಳಿದು ಬೈಕ್‌ಗಳ ದಾಖಲೆಗಳ ತಪಾಸಣೆ ಮಾಡಿ ದಂಡ ವಸೂಲಿ ಮಾಡುತ್ತಿದ್ದರೂ ಕೂಡ, ಇವರ ಹಾವಳಿಗೆ ಕಡಿವಾಣ ಹಾಕಿಲ್ಲ. ವಿವಿಧ ವೃತ್ತಗಳಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೂ ಇವರ ಮೇಲಾಟ ಜೋರಾಗಿದೆ. ಪೊಲೀಸರು ಇದ್ದಲ್ಲಿ ನಿಧಾನ ಬೈಕ್ ರೈಡ್‌ ಮಾಡುವ ಪುಂಡರು ಪೊಲೀಸರು ಇಲ್ಲದ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳು ಇರುವ ರಸ್ತೆಯಲ್ಲಿ ಶಬ್ದ ಮಾಲಿನ್ಯ ಮಾಡುತ್ತಾ ಹೋಗುತ್ತಾರೆ. ಪಟ್ಟಣದಲ್ಲಿ ಇವರಿಗೆ ಯಾರು ಹೇಳುವವರು, ಕೇಳುವವರು ಇಲ್ಲದಂತಾಗಿದೆ.ಸೈಲೆನ್ಸರ್ ಬದಲಾವಣೆ:

ದ್ವಿಚಕ್ರ ವಾಹನ ತಯಾರಿಕೆ ಕಂಪನಿಗಳು ಮೋಟಾರು ಕಾಯ್ದೆ ಅನುಸಾರ ವಾಹನಗಳ ಶಬ್ದ ನಿಗದಿಪಡಿಸುತ್ತವೆ. ಆದರೆ, ಕೆಲವರು ಇದಕ್ಕಾಗಿ ಸೈಲೆನ್ಸರ್‌ನ್ನೇ ಬದಲಿಸಿಕೊಂಡು ಜನರಿಗೆ ತೀವ್ರ ತೊಂದರೆ ಕೊಡುತ್ತಿದ್ದಾರೆ. ಈ ರೀತಿ ಮಾಡುವುದು ಕೂಡ ಕಾನೂನು ಬಾಹಿರವಾಗಿದೆ. ಪಡ್ಡೆ ಹುಡುಗರು ಕರ್ಕಶ ಶಬ್ದ ಮಾಡುವ ಬೈಕ್‌ಗಳನ್ನು ಪಟ್ಟಣದ ಸುತ್ತಲೂ ಸುತ್ತಾಡುವ ಕೆಟ್ಟ ಚಾಳಿ ಬೆಳೆಸಿಕೊಂಡಿದ್ದಾರೆ.

ಇದಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಆರ್‌ಟಿಒ ಅಧಿಕಾರಿಗಳು ಕಡಿವಾಣ ಹಾಕಲು ಮುಂದಾಗಬೇಕು ಎಂದು ಸ್ಥಳೀಯ ಪ್ರಜ್ಞಾವಂತ ನಾಗರಿಕರು ಒತ್ತಾಯ ಮಾಡಿದ್ದಾರೆ.

-----------------------------

ಕೋಟ್‌.........

ಬೈಕ್ ಸೈಲೆನ್ಸರ್ ಪೈಪ್ ಬದಲಾವಣೆ ಮಾಡಿಕೊಂಡು ಕರ್ಕಶ ಶಬ್ದ ಮಾಡಿಕೊಂಡು ವೇಗವಾಗಿ ಬೈಕ್ ಚಲಾಯಿಸುವ ಯುವಕರ ಗಮನ ಹರಿಸಿ ಶಿಸ್ತು ಕ್ರಮ ಜರುಗಿಸಲಾಗುವದು. ಈ ಪುಂಡ ಯುವಕರ ಚಲನ ವಲನದ ಬಗ್ಗೆ ಸಾರ್ವಜನಿಕರು ಕೂಡ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು.

- ಶ್ರೀಪಾದ್ ಜಲ್ದೆ, ಡಿವೈಎಸ್ಪಿ ಅಥಣಿ.