ಸಸ್ಯಕಾಶಿಗೆ ಮನಸೋತ ಜನತೆ

| Published : Nov 18 2024, 12:07 AM IST

ಸಾರಾಂಶ

ಹುಬ್ಬಳ್ಳಿ ಮತ್ತು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರದಿಂದ ಸೋಮವಾರದ ವರೆಗೆ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬ ಹಮ್ಮಿಕೊಳ್ಳಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಬಣ್ಣಬಣ್ಣದ ಹೂವುಗಳು, ಸಿರಿಧಾನ್ಯಗಳಿಂದ ತಯಾರಿಸಲಾಗಿದ್ದ ಸುಂದರ ಕಲಾಕೃತಿಗಳು ಹಾಗೂ ರಂಗೋಲಿ, ವಿವಿಧ ತಳಿಯ ಸಸಿಗಳು, ಹಣ್ಣು- ತರಕಾರಿಗಳಲ್ಲಿ ತಯಾರಿಸಿದ ಪ್ರಾಣಿ, ಪಕ್ಷಿಗಳ ಆಕೃತಿಗಳು, ಸಾಧಕರ ಕಲಾಕೃತಿಗಳು. ಎಲ್ಲಿ ನೋಡಿದರಲ್ಲಿ ಫಲಪುಷ್ಪಗಳ ರಾಶಿ... ಇವೆಲ್ಲವೂ ನಿಮಗೆ ಕಾಣಸಿಗುವುದು ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ.

ತೋಟಗಾರಿಕೆ ಹಾಗೂ ಕೃಷಿ ಇಲಾಖೆ, ಜಿಲ್ಲಾಡಳಿತ, ಜಿಪಂ, ಹು-ಧಾ ಮಹಾನಗರ ಪಾಲಿಕೆ, ಮೀನುಗಾರಿಕೆ ಇಲಾಖೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಹಾಪ್ ಕಾಮ್ಸ್, ಸ್ವರ್ಣ ಟೆಕ್ನೋ ಕನಸ್ಟ್ರಕ್ಷನ್ ಪ್ರೈ.ಲಿ. ಹುಬ್ಬಳ್ಳಿ ಮತ್ತು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರದಿಂದ ಸೋಮವಾರದ ವರೆಗೆ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬ ಹಮ್ಮಿಕೊಳ್ಳಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶನಿವಾರ ಸಂಜೆ ಹಾಗೂ ಭಾನುವಾರ ಸಾವಿರಾರು ಜನರು ಇಂದಿರಾ ಗಾಜಿನ ಮನೆಗೆ ಭೇಟಿ ನೀಡಿ ಫಲಪುಷ್ಪ ಪ್ರದರ್ಶನದ ಕಣ್ಣುಂಬಿಕೊಂಡರು.

ಸೇವಂತಿಗೆಯಲ್ಲಿ ಅರಳಿದ ನಂದಿ

ಈ ಬಾರಿಯ ಪ್ರಮುಖ ಆಕರ್ಷಣೆಯಂದರೆ 11 ಅಡಿ ಎತ್ತರದಲ್ಲಿ ಸೇವಂತಿಗೆಯಿಂದ ತಯಾರಿಸಲಾಗಿರುವ ನಂದಿ. ಇದರೊಂದಿಗೆ ರಾಗಿ, ಸಜ್ಜೆ, ನವಣೆ, ಊದಲ, ಹಾರಕ, ಸಾವೆ, ಬರಗು, ಕೊರಲ ಸೇರಿದಂತೆ ಸಿರಿಧಾನ್ಯ ಬಳಸಿ ತಯಾರಿಸಲಾದ ಪ್ರಜಾಸತ್ತೆ- ಸಮಾನತೆ, ಸಂವಿಧಾನ ಸಾರುವ ಬುದ್ಧ- ಬಸವ, ಅಂಬೇಡ್ಕರ್‌ರ ಮೂರ್ತಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಗೆ ಕಾರಣ‍ವಾಗಿವೆ. ಅಲ್ಲದೇ ಸಿರಿಧಾನ್ಯಗಳನ್ನು ಬಳಸಿ ಆವರಣದಲ್ಲಿ ಬಿಡಿಸಲಾದ ಬಗೆಬಗೆಯ ರಂಗೋಲಿಯು ನೋಡುಗರ ಗಮನ ಸೆಳೆಯುತ್ತಿವೆ. ಇದರೊಂದಿಗೆ ಸುಮಾರು 6 ಅಡಿ ಎತ್ತರದಲ್ಲಿ ಕೆಂಪು ಮೆಣಸಿನಕಾಯಿ ಬಳಸಿ ಸಿದ್ಧಪಡಿಸಲಾದ ಪಕ್ಷಿಯು ಪ್ರದರ್ಶನದ ಅಂದ ಹೆಚ್ಚಿಸಿದೆ.

ಗಮನ ಸೆಳೆಯ ಜೈ ಜವಾನ್ ಜೈ ಕಿಸಾನ್

ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಗೆ ಕಾರಣ‍ವಾಗಿದ್ದು ಜೈ ಜವಾನ್‌ ಜೈಕಿಸಾನ್‌ ಮೂರ್ತಿ. ಅರ್ಧದೇಹ ದೇಶಕಾಯುವ ಯೋಧನದ್ದಾಗಿದ್ದರೆ, ಇನ್ನರ್ಧ ಭಾಗ ದೇಶಕ್ಕೆ ಅನ್ನ ನೀಡುವ ನೇಗಿಲು ಹೊತ್ತ ರೈತನ ಮೂರ್ತಿ. ಪ್ರದರ್ಶನದ ವೀಕ್ಷಣೆಗೆ ಆಗಮಿಸುವ ಜನರು ಇದರ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು.

ಇದರೊಂದಿಗೆ 3 ಸಾವಿರಕ್ಕೂ ಅಧಿಕ ಹೂವಿನ ಕುಂಡಗಳು ಪ್ರದರ್ಶನದ ಆಕರ್ಷಣೆಯಾಗಿವೆ. 25ಕ್ಕೂ ಅಧಿಕ ಬಗೆಯ ಗುಲಾಬಿ ಹೂ, ಸುಗಂಧ ರಾಜ ಸೇರಿದಂತೆ ಬಗೆಬಗೆಯ ಪುಷ್ಪಗಳು, ಹಲವು ಬಗೆಯ ಬೋನ್ಸಾಯ್ ಗಿಡಗಳ ಪ್ರದರ್ಶನ, ಜಿಲ್ಲೆಯ 8 ತಾಲೂಕುಗಳಿಂದ ರೈತರು ತಾವು ಬೆಳೆದ ತರಕಾರಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಪ್ರದರ್ಶನಕ್ಕೆ ಹೆಚ್ಚಿನ ಕಳೆ ತಂದಿದೆ.

ತರಕಾರಿಯಲ್ಲಿ ಅರಳಿದ ಕಲೆ

ತರಕಾರಿಯಲ್ಲಿ ಅರಳಿದ ಕಲಾಕೃತಿಗಳು ಹೆಚ್ಚಿನ ಆಕರ್ಷಣೆಗೆ ಕಾರಣವಾದವು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಾಹಿತ್ಯ ದಿಗ್ಗಜರು, ಸಂಗೀತಗಾರರು, ಕವಿಗಳು, ದೇವತೆಗಳು, ಹೋರಾಟಗಾರರು, ಪ್ರಮುಖ ಪ್ರಾಣಿ, ಪಕ್ಷಿಗಳನ್ನು ಕಲ್ಲಂಗಡಿ, ಸೌತೆಕಾಯಿ, ಕುಂಬಳಕಾಯಿ, ಬದನೆಕಾಯಿ, ಗಜ್ಜರಿ ಸೇರಿದಂತೆ ಬಗೆಬಗೆಯ ತರಕಾರಿಯಲ್ಲಿ ಅರಳಿ ನಿಂತಿವೆ.

ಕರ್ನಾಟಕ ವಿಶ್ವವಿದ್ಯಾಲಯದಿಂದ 1000, ಹು-ಧಾ ಮಹಾನಗರ ಪಾಲಿಕೆಯಿಂದ 300, ತೋಟಗಾರಿಕೆ ಇಲಾಖೆಯಿಂದ 2,000ಕ್ಕೂ ಅಧಿಕ ಹೂವು ಹಾಗೂ ಆಲಂಕಾರಿಕ ಕುಂಡಗಳನ್ನು ಪ್ರದರ್ಶನದಲ್ಲಿ ಇಡಲಾಗಿವೆ. ಅಲ್ಲದೆ, ಮೀನುಗಾರಿಕೆ ಇಲಾಖೆಯಿಂದ ವಿಶಿಷ್ಟ ಮೀನು ತಳಿಗಳಾದ ರೋಹು, ಮೃಗಾಲ, ಕಾಟ್ಲ, ಹುಲ್ಲಗೆಂಡೆ ಮೀನುಗಳ ಪ್ರದರ್ಶನಕ್ಕಿಡಲಾಗಿದೆ. ಸಂಜೀವಿನಿ ಆಯುರ್ವೇದಿಕ ಮೆಡಿಕಲ್‌ ಕಾಲೇಜಿನಿಂದ 40ಕ್ಕೂ ಅಧಿಕ ಬಗೆಯ ಔಷಧೀಯ ಸಸ್ಯೆಗಳು, 100ಕ್ಕೂ ಅಧಿಕ ಬೋನ್ಸಾಯ್ ಗಿಡಗಳು, ಜಿಲ್ಲೆಯ 50ಕ್ಕೂ ಅಧಿಕ ರೈತರಿಂದ ಬಗೆಬಗೆಯ ಹಣ್ಣು, ತರಕಾರಿ, ಹೂಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಪ್ರಚಾರ

ಹುಬ್ಬಳ್ಳಿಯಲ್ಲಿ ಪ್ರತಿವರ್ಷವೂ ಫಲಪುಷ್ಪ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತದೆ. ಜನರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕೆ ಇನ್ನೂ ಹೆಚ್ಚಿನ ಪ್ರಚಾರದ ಅವಶ್ಯಕತೆಯಿದೆ.

ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವಹೆಚ್ಚಿನ ಜನ ವೀಕ್ಷಣೆ

ಪ್ರತಿವರ್ಷವೂ ವಿಭಿನ್ನ ರೀತಿಯಲ್ಲಿ, ವಿಶೇಷವಾಗಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ಯೋಗೀಶ ಕಿಲಾರಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ, ಧಾರವಾಡಚೆನ್ನಾಗಿ ಆಯೋಜನೆ

ಪ್ರತಿವರ್ಷಕ್ಕಿಂತ ಈ ಬಾರಿ ಫಲಪುಷ್ಪ ಪ್ರದರ್ಶನ ತುಂಬಾ ಚೆನ್ನಾಗಿ ಆಯೋಜನೆ ಮಾಡಲಾಗಿದೆ. ಪ್ರದರ್ಶನದ ಕುರಿತು ಎಲ್ಲಡೆ ಹೆಚ್ಚಿನ ಪ್ರಚಾರ ಕೈಗೊಂಡಲ್ಲಿ ಹೆಚ್ಚಿನ ಜನರು ಆಗಮಿಸಿ ವೀಕ್ಷಿಸಬಹುದಾಗಿದೆ. ಇನ್ನೂ ಹೆಚ್ಚಿನ ಪ್ರಚಾರ ಮಾಡುವಂತಾಗಲಿ.

ರಾಜಶ್ರೀ, ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ್ದ ಮಹಿಳೆ