ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಹೇಮಗಿರಿ ವೃತ್ತದ ಎಚ್.ಪಿ ಗ್ಯಾಸ್ ಏಜೆನ್ಸಿ ಶಾಖಾ ಕಚೇರಿ ಮುಂಭಾಗ ನೂರಾರು ಗ್ರಾಹಕರು ಕಳೆದ 10 ದಿನಗಳ ಹಿಂದೆಯೇ ಬುಕಿಂಗ್ ಮಾಡಿದ್ದರೂ ಗ್ಯಾಸ್ ವಿತರಿಸದೆ, ಕಡಿಮೆ ಸಿಲಿಂಡರ್ ಇರುವುದರಿಂದ ಗ್ರಾಹಕರು ಗ್ಯಾಸ್ ಪಡೆಯಲು ಹರಸಾಹಸ ಪಡುತ್ತಿರುವ ಘಟನೆ ನಡೆಯಿತು.

ಚನ್ನರಾಯಪಟ್ಟಣ ಮೂಲದ ಶ್ರೀ ಮಂಜುನಾಥ ಎಚ್.ಪಿ.ಗ್ಯಾಸ್ ಏಜೆನ್ಸಿಯವರು ಪಟ್ಟಣದ ಹಳೆ ಹೇಮಗಿರಿ ವೃತ್ತದ ಬಳಿ ಗ್ಯಾಸ್ ವಿತರಿಸುತ್ತಿದ್ದು, ಆದರೆ, ಕಳೆದ 20 ದಿನಗಳಿಂದ ಕೊಲ್ಲಿ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಸಿಲಿಂಡರ್ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಗ್ಯಾಸ್ ಗಾಗಿ ಗ್ರಾಹಕರು ಮುಗಿಬಿದ್ದಿದ್ದಾರೆ. ಭರ್ತಿ ಸಿಲಿಂಡರ್ ಪಡೆದುಕೊಳ್ಳಲು ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ. ಆದರೆ ಗ್ಯಾಸ್ ಏಜೆನ್ಸಿಯವರು ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿಲಿಂಡರ್ ತಂದು ವಿತರಿಸುತ್ತಿಲ್ಲ ಎಂದು ಗ್ರಾಹಕರು ದೂರಿದರು.

ಗ್ರಾಹಕರು ಸಿಲಿಂಡರ್ ಪಡೆಯಲು ಸರತಿ ಬಿಟ್ಟು ಸಿಲಿಂಡರ್ ತುಂಬಿದ ಲಾರಿ ಮುಂದೆ ಮುಗಿ ಬಿದ್ದ ಕಾರಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಿಲಿಂಡರ್ ಕೊಡಿಸಲು ಮುಂದಾದರು. ಈ ವೇಳೆ ಜನರ ನಡುವೆ ತಳ್ಳಾಟ-ನೂಕಾಟ ನಡೆಯಿತು. ನಂತರ ಪೊಲೀಸರ ನೆರವಿನೊಂದಿಗೆ 75 ಮಂದಿ ಗ್ರಾಹಕರಿಗೆ ಸಿಲಿಂಡರ್ ವಿತರಿಸಲಾಯಿತು. ಉಳಿದವರಿಗೆ ಇಂದು ವಿತರಣೆ ಮಾಡುವ ಭರವಸೆ ನೀಡಿ ಟೋಕನ್ ವಿತರಣೆ ಮಾಡಿದರು.

ಟೌನ್ ಸರ್ಕಲ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್ ಮಾತನಾಡಿ, ನಿಗದಿತ ದಿನಗಳಂದು ಸಿಲಿಂಡರ್ ವಿತರಿಸದೇ ಕೃತಕ ಅಭಾವ ಸೃಷ್ಟಿಸಿದರೆ ಏಜೆನ್ಸಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.