ರೋಣ: ಹೋಳಿ ಹುಣ್ಣಿಮೆ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಪುಟಾಣಿ ಮಕ್ಕಳು, ಯುವಕರು, ಯುವತಿಯರು ಮಹಿಳೆಯರಾದಿಯಾಗಿ ಬಣ್ಣದೋಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಪಟ್ಟಣದ ಶಿವಪೇಟಿ, ಶಿವಾನಂದ ನಗರ, ಗೌಡ್ರ ಓಣಿ, ಸಂತೋಜಿಯವರ ಓಣಿ, ಕುರಬಗಲ್ಲ ಓಣಿ, ಕಂಬಿಯವರ ಓಣಿ, ತಳವಾರ ಓಣಿ ಜಗ್ಗಲರ ಓಣಿ, ಶ್ರೀಲಕ್ಷ್ಮಿ ನಗರ, ಶಾಂತಿ ನಗರ, ಸುಭಾಸ ನಗರ, ಡಾ. ಅಂಬೇಡ್ಕರ ಬಡಾವಣೆ, ಶ್ಯಾನುಭೋಗರ ಚಾಳ, ಶ್ರೀನಗರ, ಕಲ್ಯಾಣನಗರ, ಹೊರಪೇಟಿ ಓಣಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.ಯುವಕರು ಹಲಗೆ ಬಾರಿಸುತ್ತಾ, ಹೋಳಿ ಪದ ಹಾಡುತ್ತಾ ಓಣಿ ಓಣಿಗಳ ಸುತ್ತಿ ಸಂಭ್ರಮಿಸಿದರು. ಯುವಕರು ಪಟ್ಟಣದ ಪ್ರಮುಖ ರಸ್ತೆ, ಓಣಿಗಳಲ್ಲಿ ಸಂಚರಿಸಿ ಪರಸ್ಪರ ಬಣ್ಣ ಹಚ್ಚಿ ಹೋಳಿ ಶುಭಾಶಯ ಕೋರಿ ಕೇಕೆ, ಸಿಳ್ಳೆ ಹಾಕುತ್ತಾ, ಕುಣಿದು ಕುಪ್ಪಳಿಸಿದರು. ಪಿಎಸ್ಐ ಪ್ರಕಾಶ ಬಣಕಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ತಾಲೂಕಿನ ಅರಹುಣಸಿ, ಮುಗಳಿ, ಹಿರೇಮಣ್ಣೂರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮಂಗಳವಾರವೇ ಕಾಮದಹನ, ಬಣ್ಣದೋಕುಳಿ ಆಚರಿಸಲಾಗಿತ್ತು. ಇನ್ನು ತಾಲೂಕಿನ ಸಂದಿಗವಾಡ, ಚಿಕ್ಕಮಣ್ಣೂರ, ಸವಡಿ, ಕೊತಬಾಳ, ಹಿರೇಹಾಳ, ಹುಲ್ಲೂರ, ಜಿಗಳೂರ, ಇಟಗಿ, ಹೊಳೆಆಲೂರ, ಬೆಳವಣಕಿ, ಮಲ್ಲಾಪುರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಬುಧವಾರ ಕಾಮದಹನ ಮಾಡಿ, ಬಳಿಕ ಜನತೆ ರಂಗಿನಾಟವಾಡಿ ಸಂತಸಪಟ್ಟರು.ತಾಲೂಕಿನ ಹೊನ್ನಿಗನೂರ ಗ್ರಾಮದಲ್ಲಿ ಮಾತ್ರ ಬಣ್ಣದಾಟ ಆಡಲಿಲ್ಲ. ಕೆಲ ವರ್ಷಗಳಿಂದ ಈ ಗ್ರಾಮದಲ್ಲಿ ಹೋಳಿ ಹುಣ್ಣಿಮೆಯಂದು ಒಂದೇ ದಿಂದ 6 ಜನ ಸಾವಿಗೀಡಾಗಿದ್ದರಂತೆ. ಅಂದಿನಿಂದ ಇಂದಿನವರೆಗೂ ಗ್ರಾಮಸ್ಥರು ಹೋಳಿ ಹಬ್ಬಆಚರಿಸುತ್ತಿಲ್ಲ. ಉಳಿದಂತೆ ತಾಲೂಕಿನಾದ್ಯಂತ ಹೋಳಿ ಹಬ್ಬ ಸಂಭ್ರಮದಿಂದ ಜರುಗಿತು.