ಸಾರಾಂಶ
ಹೊಳಲ್ಕೆರೆ: ವಿಧಾನಸಭೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಪಟ್ಟಣದ ಕೊಟ್ರೆ ನಂಜಪ್ಪ ಕಾಲೇಜು ಆಟದ ಮೈದಾನದಲ್ಲಿ ಏ.12ರಂದು ಶುಕ್ರವಾರ ಮಧ್ಯಾನ 3ಕ್ಕೆ ನಡೆಯುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.ಹೊಳಲ್ಕೆರೆಯಲ್ಲಿ ಇಂದು ನಡೆಯಲಿರುವ ಬಿಜೆಪಿ ಕಾರ್ಯಕರ್ತರ ಸಭೆಯ ಸಿದ್ಧತೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ನಂತರ ನಡೆದಿರುವ ನಾಲ್ಕು ಚುನಾವಣೆಗಳಲ್ಲಿ ಮೂರು ಬಾರಿ ನಾನು ಗೆದ್ದಿದ್ದೇನೆ. ಹೊಳಲ್ಕೆರೆ ಕ್ಷೇತ್ರ ಯಾವತ್ತೂ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಕಾರ್ಯಕರ್ತರಿರುವ ಕ್ಷೇತ್ರವಾಗಿದೆ. ನಾನು ಶಾಸಕನಾಗಿರಲಿ ಇಲ್ಲದಿರಲಿ ಯಾವತ್ತು ಕ್ಷೇತ್ರದ ಜನರ ಕಾರ್ಯಕರ್ತರ ಸುಖ ದುಃಖದಲ್ಲಿ ಭಾಗಿಯಾಗುತ್ತಿರುತ್ತೇನೆ.
ಕ್ಷೇತ್ರದಲ್ಲಿ ರೈತರಿಗೆ ನಿಯಮಿತ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡುವಲ್ಲಿ, ಎಲ್ಲಾ ಗ್ರಾಮಗಳಿಗೂ ಸಂಪರ್ಕಿಸುವ ರಸ್ತೆಗಳ ಡಾಂಬರೀಕರಣ ಮಾಡುವಲ್ಲಿ ಶ್ರಮಿಸಿದ್ದೇನೆ. ನೂತನ ಶಾಲೆ ಕಾಲೇಜುಗಳ ಕಟ್ಟಡಗಳ ನಿರ್ಮಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದೇನೆ. ಕ್ಷೇತ್ರದ ಜನರ ಯಾವುದೇ ಸಮಸ್ಯೆ ಪರಿಹರಿಸಲು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದೇನೆ ಎಂದು ತಮ್ಮ ಸಾಧನೆಯನ್ನು ತಿಳಿಸಿಕೊಟ್ಟರು.ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಸಂಚಾಲಕರಾದ ಎನ್.ರವಿಕುಮಾರ, ವಿಧಾನ ಪರಿಷತ್ ಸದಸ್ಯರಾದ ನವೀನ್, ಜಿಲ್ಲಾಧ್ಯಕ್ಷರಾದ ಮುರಳಿ ಹಾಗೂ ಜೆಡಿಎಸ್ ಮುಖಂಡರು ಆಗಮಿಸುತ್ತಿದ್ದಾರೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಈ ವೇಳೆ ಎಲ್ಲ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅತಿ ಹೆಚ್ಚಿನ ಲೀಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು. ಬಿಜೆಪಿ ಘಟಕದ ಅಧ್ಯಕ್ಷ ಸಿದ್ದೇಶ್ ಮತ್ತಿತರರು ಇದ್ದಾರೆ.