ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷವನ್ನು ಜನರು ಗೆಲ್ಲಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇಶ ಮೇಟಿ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಶುಭ ಕೋರಲಾಗಿದೆ. ಎಚ್.ವೈ.ಮೇಟಿಯವರು ಈ ಭಾಗದ ಜನಪ್ರಿಯ ನಾಯಕರಾಗಿದ್ದು, ಅನಿರೀಕ್ಷಿತವಾಗಿ ನಮ್ಮನ್ನಗಲಿದ್ದಾರೆ. ಆ ಶಾಸಕ ಸ್ಥಾನ ತುಂಬಲು ಸರ್ವರ ಸಮ್ಮತಿ ಪಡೆದು, ಅವರ ಕುಟುಂಬದವರನ್ನೇ ಆಯ್ಕೆ ಮಾಡಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಜನತೆ ಸಂತಸ:ನಮ್ಮದು ನುಡಿದಂತೆ ನಡೆಯುವ ಸರ್ಕಾರ. 2013 ರಿಂದ 2018ರವರೆಗೆ ಮತ್ತು 2023ರಿಂದ ಜನಪರ ಯೋಜನೆಗಳನ್ನು ರಾಜ್ಯಕ್ಕೆ ನೀಡಲಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿನ ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು, ಇದಕ್ಕಾಗಿ ₹1.21 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಬಿಜೆಪಿಯವರು ಗ್ಯಾರಂಟಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದ್ದರು. ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯ ಜನರು ಸಂತೋಷದಿಂದಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಹಿಂದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಬಹುಮತದಿಂದ ಗೆಲುವು ಸಾಧಿಸಿದೆ ಎಂದರು.
ಕೃಷ್ಣಾ ಮೇಲ್ದಂಡೆ ಹಂತ-3, ಪರಿಹಾರಕ್ಕೆ ಅನುದಾನ:
ಬಿಜೆಪಿಯವರು ಕೇವಲ ಹಿಂದುತ್ವವನ್ನು ಮುಂದಿಡುತ್ತಾರೆಯೇ ಹೊರತು, ಕೃಷ್ಣಾ ಮೇಲ್ದಂಡೆ ಹಂತ-3 ಯೋಜನೆಗೆ ಅವರ ಅಧಿಕಾರಾವಧಿಯಲ್ಲಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ನಮ್ಮ ಸರ್ಕಾರ ಈ ಯೋಜನೆಯಡಿ ಮುಳುಗಡೆಯಾಗುವ ಜಮೀನಿಗೆ ಸೂಕ್ತ ಪರಿಹಾರ ನೀಡುವ ನಿರ್ಣಯ ಕೈಗೊಂಡಿದ್ದು, ಇದಕ್ಕಾಗಿ ಬೇಕಾದ ಈ ವರ್ಷದ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸಲಾಗಿದೆ. ಇದಕ್ಕಾಗಿ ₹70 ಸಾವಿರ ಕೋಟಿ ಪರಿಹಾರ ಒಂದೇ ಹಂತದಲ್ಲಿ ನೀಡಿ, ನನೆಗುದಿಗೆ ಬಿದ್ದಿರುವ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಜನರಿಂದ ಬಿಜೆಪಿ ತಿರಸ್ಕಾರ:ಬಾಗಲಕೋಟೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಎಚ್.ವೈ.ಮೇಟಿಯವರ ಕನಸಾಗಿತ್ತು. ಹಳ್ಳಿಗಾಡಿನ ವಿದ್ಯಾರ್ಥಿಗಳು ವೈದ್ಯ ವೃತ್ತಿ ಮಾಡಬೇಕೆಂದು ಈ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸುವ ಆಶಯ ಸರ್ಕಾರಕ್ಕಿದೆ. ಮೇಟಿಯವರು ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಉಮೇಶ ಮೇಟಿಯವರನ್ನು ಜನರು ಬೆಂಬಲಿಸುವ ವಿಶ್ವಾಸವಿದೆ. ಬಿಜೆಪಿಯವರ ಅಪಪ್ರಚಾರಕ್ಕೆ ಜನರು ಮಣೆ ಹಾಕುವುದಿಲ್ಲ ಎಂದು ಸಾಬೀತಾಗಿದೆ. ಬಿಜೆಪಿಯವರ ಮನೆದೇವರು ಸುಳ್ಳು. ಜನರು ಬಿಜೆಪಿ ತಿರಸ್ಕರಿಸಿದ್ದಾರೆ. ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.
