ಮಾಜಿ ಸಚಿವ ಶಿವಶಂಕರ್ ರೆಡ್ಡಿ ಅವರು ಸೋಲಿನಿಂದ ಕಂಗೆಡಬೇಕಾಗಿಲ್ಲ. ನಿಷ್ಠಾವಂತ ಕಾರ್ಯಕರ್ತರು ಜೊತೆಯಲ್ಲಿದ್ದೇವೆ, ಮುಂದಿನ ದಿನಗಳಲ್ಲಿ ಜನತೆ ಅವರ ಸೇವೆಯನ್ನು ಗುರುತಿಸಿ ಅಧಿಕಾರ ನೀಡಲಿದ್ದಾರೆ .
ಗೌರಿಬಿದನೂರು: ಹಣಬಲ ಹಾಗೂ ಒಳ ಸಂಚಿನಿಂದ ಆಕಸ್ಮಿಕವಾಗಿ ಆಯ್ಕೆಯಾಗಿ ಅಧಿಕಾರದ ಅಮಲೇರಿಸಿಕೊಂಡಿರುವ ಶಾಸಕರಿಗೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಡಾ.ಎಚ್.ಎನ್. ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಶಂಕರ್ ರೆಡ್ಡಿ ಶಾಸಕರ ಆಡಳಿತ ವೈಖರಿಯ ವಿರುದ್ಧ ಕಿಡಿಕಾರಿದರು.
ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿಯ ತರಿಧಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ಯಾವಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತರನ್ನು ಬೆದರಿಸಿ ಹಣ ಬಲದ ಮೂಲಕ ಅವರನ್ನು ಸೇರ್ಪಡೆಗೊಳಿಸಿಕೊಂಡು ಅಧಿಕಾರ ನಡೆಸಲು ಆಹ್ವಾನಿಸುತ್ತಿರುವುದು ಕ್ಷಣಿಕವಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನಮ್ಮ ಜೊತೆಯಲ್ಲಿ ಉಳಿದಿದ್ದು ಮುಂದಿನ ದಿನಗಳಲ್ಲಿ ತಳಮಟ್ಟದಿಂದ ಪಕ್ಷ ಸಂಘಟಿಸಲಾಗುವುದು. ರೈತರ ಹಿತಾಸಕ್ತಿಗಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದು, ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತರಿಗೆ ಭೂಮಿ ಮಂಜೂರು ಮಾಡಿಸಿಕೊಡುವ ಮೂಲಕ ಸಾಗುವಳಿ ಚೀಟಿ ಕೊಡಿಸಿ ರೈತರ ಜೀವನ ಕ್ರಮದ ಸುಧಾರಣೆಗೆ ಎಲ್ಲಾ ಸಹಕಾರ ನೀಡಲಾಗಿದೆ ಎಂದು ತಿಳಿಸಿದರು. ಈ ಕ್ಷೇತ್ರದ ಮಗನಾದ ನಾನು ಯಾವುದೇ ಕಾರಣಕ್ಕೂ ರೈತರಿಗೆ, ಕಾರ್ಯಕರ್ತರಿಗೆ ತೊಂದರೆಯಾಗುವುದನ್ನು ಸಹಿಸಲ್ಲ. ತಾಲೂಕಿನ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸಾರ್ವಜನಿಕರಿಗೆ ತೊಂದರೆ ಎದುರಾಗಿದೆ ಎಂದು ಕಿಡಿಕಾರಿದರು.ಕಾಂಗ್ರೆಸ್ ಮುಖಂಡ ದೊಡ್ಮನೆ ಅಂಬಾಜಿ ರಾವ್ ಮಾತನಾಡಿ, ಮಾಜಿ ಸಚಿವ ಶಿವಶಂಕರ್ ರೆಡ್ಡಿ ಅವರು ಸೋಲಿನಿಂದ ಕಂಗೆಡಬೇಕಾಗಿಲ್ಲ. ನಿಷ್ಠಾವಂತ ಕಾರ್ಯಕರ್ತರು ಜೊತೆಯಲ್ಲಿದ್ದೇವೆ, ಮುಂದಿನ ದಿನಗಳಲ್ಲಿ ಜನತೆ ಅವರ ಸೇವೆಯನ್ನು ಗುರುತಿಸಿ ಅಧಿಕಾರ ನೀಡಲಿದ್ದಾರೆ ಎಂದರು.ಕಾಂಗ್ರೆಸ್ ಮುಖಂಡ ಲಕ್ಷ್ಮೀನಾರಾಯಣ, ಗೌರಿಬಿದನೂರು ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಅಶ್ವತ್ಥ್ದ್ ನಾರಾಯಣ ಗೌಡ, ಹಿರಿಯ ಕಾಂಗ್ರೆಸ್ ಮುಖಂಡರಾದ ರಾಮು, ಯುವ ಮುಖಂಡರಾದ ಗಿರೀಶ್ ರೆಡ್ಡಿ, ಜೈ ಮುನಿರಾವ್, ಗಿರೀಶ್ ಚವ್ಹಾಣ್, ಅಪ್ಪು, ರಮೇಶ್ ರಾವ್, ಅರುಣ್, ಕಿರಣ್, ಬಾಬು, ಅಶೋಕ್, ವಿನಯ್ ಕುಮಾರ್, ರವಿ, ಆನಂದ್ ರಾವ್ ಚವ್ಹಾಣ್, ರಾಮು, ಶಂಕರ್ ಉಪಸ್ಥಿತರಿದ್ದರು.