ಬಿಜೆಪಿಯ ಸುಳ್ಳುಗಳನ್ನು ಧಿಕ್ಕರಿಸಿ ಜನ ಮತ ನೀಡ್ತಾರೆ: ಸೌಮ್ಯಾರೆಡ್ಡಿ

| Published : Apr 19 2024, 01:34 AM IST / Updated: Apr 19 2024, 09:51 AM IST

ಬಿಜೆಪಿಯ ಸುಳ್ಳುಗಳನ್ನು ಧಿಕ್ಕರಿಸಿ ಜನ ಮತ ನೀಡ್ತಾರೆ: ಸೌಮ್ಯಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಇದನ್ನು ಮೆಟ್ಟಿನಿಂತು ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಹೇಳಿದ್ದಾರೆ.

 ಬೆಂಗಳೂರು :  ಕಾಂಗ್ರೆಸ್‌ ಅಧಿಕಾರದಲ್ಲಿದ್ದ 70 ವರ್ಷ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ ಎಂದು ಬಿಜೆಪಿ ಸುಳ್ಳು ಹಬ್ಬಿಸುತ್ತಿದೆ. ಆದರೆ, ಕಾಂಗ್ರೆಸ್‌ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಹಾಳು ಮಾಡುತ್ತಿದ್ದು, ಬಿಜೆಪಿ ಹೇಳುವ ಸುಳ್ಳುಗಳನ್ನು ನಂಬದೆ, ವಾಸ್ತವತೆಗೆ ಮತ ಚಲಾಯಿಸಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಮತದಾರರಿಗೆ ಮನವಿ ಮಾಡಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದ ಸೌಮ್ಯಾ ರೆಡ್ಡಿ, 70 ವರ್ಷಗಳಿಂದ ದೇಶದಲ್ಲಿ ಏನೂ ಆಗಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಶಿಕ್ಷಣ, ಆರೋಗ್ಯ, ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ದೇಶ ಅಭಿವೃದ್ಧಿ ಹೊಂದಲು ಕಾಂಗ್ರೆಸ್‌ ಅನುಷ್ಠಾನಗೊಳಿಸಿದ ಅಭಿವೃದ್ಧಿ ಕಾರ್ಯಗಳೇ ಕಾರಣ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಲಕ್ಷಾಂತರ ಶಾಲೆಗಳು, ಆಸ್ಪತ್ರೆಗಳನ್ನು ನಿರ್ಮಿಸಿದೆ, ವಿಮಾನ ನಿಲ್ದಾಣ, ರೈಲ್ವೆ ಸಂಪರ್ಕ, ಬಾಹ್ಯಾಕಾಶದಲ್ಲಿ ಯಶಸ್ಸನ್ನು ಗಳಿಸುವಂತೆ ಮಾಡಿದೆ. ಬಿಜೆಪಿ ನಾಯಕರು ಹೇಳುವ ಸುಳ್ಳುಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರೂ ಕೂಡ ಬಿಜೆಪಿ ನಾಯಕರ ಸುಳ್ಳುಗಳ ವಿರುದ್ಧ ಜಾಗೃತರಾಗುತ್ತಿದ್ದಾರೆ. ಹೀಗಾಗಿ ಜನರು ಸುಳ್ಳುಗಳ ವಿರುದ್ಧವಾಗಿ ವಾಸ್ತವತೆಗೆ ಮತ ಚಲಾಯಿಸಲಿದ್ದಾರೆ ಎಂದರು.

ಬಿಜೆಪಿ ನಾಯಕರು, ಐಟಿ ಸೆಲ್‌ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅನೇಕ ವಿಡಿಯೋ ಹಾಗೂ ಸುದ್ದಿಗಳನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಅದನ್ನೇ ಜನರು ನಿಜ ಎಂದು ಭಾವಿಸುವಂತಾಗಿದೆ. ಹೀಗಾಗಿ ಕಾಂಗ್ರೆಸ್‌ ಕಾರ್ಯಕರ್ತರೆಲ್ಲರೂ ಬಿಜೆಪಿಯ ಈ ಸುಳ್ಳಿನ ಮತ್ತು ಕುತಂತ್ರದ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಧರ್ಮ ದಂಗಲ್‌ನಲ್ಲಿ ನಿರತ ಬಿಜೆಪಿ:  ರಾಜ್ಯ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ. ಬಡ, ಮಧ್ಯಮ ವರ್ಗದ ಜನರ ಅಭ್ಯುಧಯಕ್ಕೆ ಹಲವು ಯೋಜನೆ ಅನುಷ್ಠಾನಗೊಳಿಸಿದೆ. ಆದರೆ, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದಾಗುತ್ತಿರುವ ಅನ್ಯಾಯ ಪ್ರಶ್ನಿಸದ ಬಿಜೆಪಿ ನಾಯಕರು ಧರ್ಮ ದಂಗಲ್‌ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿಹೆಚ್ಚು ವಿದ್ಯಾವಂತರಿದ್ದಾರೆ. ಅವರು ಈ ಬಾರಿ ಸಮಾಜದಲ್ಲಿ ಶಾಂತಿ ಕದಡುವವರನ್ನು ತಿರಸ್ಕರಿಸಿ, ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್‌ಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ. ಅಲ್ಲದೆ, ತಾವು ಮತ್ತು ತಮ್ಮ ತಂದೆ ರಾಮಲಿಂಗಾರೆಡ್ಡಿ ಅವರು ಮಾಡಿರುವ ಕೆಲಸಗಳನ್ನು ಗುರುತಿಸಿ ಮತ ಚಲಾಯಿಸುತ್ತಾರೆ ಎಂದು ಸೌಮ್ಯಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಮಾದರಿ ಗೋವಿಂದರಾಜನಗರ ನಿರ್ಮಾಣ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಹಾಗೂ ಅದರ ವ್ಯಾಪ್ತಿಯಲ್ಲಿನ ಗೋವಿಂದರಾಜನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿ ನಡೆಸಲು ಶಾಸಕ ಪ್ರಿಯಕೃಷ್ಣ ಅವರ ಕೈ ಬಲಪಡಿಸಬೇಕಿದೆ. ಶಾಸಕರಾಗಿ ಪ್ರಿಯಕೃಷ್ಣ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸಲು ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು. ಇಬ್ಬರು ಯುವ ನಾಯಕರು ಯಾವ ರೀತಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ನಾನು ಮತ್ತು ಪ್ರಿಯಕೃಷ್ಣ ತೋರಿಸುತ್ತೇವೆ. ಅದಕ್ಕೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಮತ ಚಲಾಯಿಸಬೇಕು ಎಂದು ಸೌಮ್ಯಾರೆಡ್ಡಿ ಹೇಳಿದರು.

ಕಾಂಗ್ರೆಸ್ ಮಾಡಿರುವ ಉತ್ತಮ ಹಾಗೂ ದೇಶ ನಿರ್ಮಾಣ ಕಾರ್ಯವನ್ನು ಜನರಿಗೆ ತಿಳಿಸಬೇಕು. ಆ ಮೂಲಕ ಮತದಾರರನ್ನು ಸೆಳೆದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲುವಂತೆ ಮಾಡಬೇಕು.

-ಸೌಮ್ಯಾರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ