ಕಾಂಗ್ರೆಸ್‌ಗೆ ಜನ ಖುಷಿಯಿಂದ ಮತ ಹಾಕಲಿದ್ದಾರೆ: ಎಚ್.ವಿ.ರಾಜೀವ್

| Published : Nov 06 2025, 01:15 AM IST

ಸಾರಾಂಶ

ಪ್ರತಿ ಚುನಾವಣಾ ಸಂದರ್ಭದಲ್ಲೂ ಪ್ರತಿ ಮತಕ್ಕೂ ಇಂತಿಷ್ಟು ಹಣ ಕೊಟ್ಟು ಮತ ಪಡೆಯುವುದು ಮಾಮೂಲಿಯಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ಫಲವಾಗಿ ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ವ್ಯವಸ್ಥಿತವಾಗಿ ಜನ ಸಾಮಾನ್ಯರಿಗೆ ತಲುಪುತ್ತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೂ ಐದು ವರ್ಷಗಳ ಅವಧಿಯಲ್ಲಿ ಕನಿಷ್ಠ 4 ರಿಂದ 4.50 ಲಕ್ಷ ರು. ತಲುಪಿರುತ್ತದೆ. ಹೀಗಾಗಿ ಭವಿಷ್ಯದ ದಶಕಗಳಲ್ಲಿ ಕಾಂಗ್ರೆಸ್ ಗೆ ಜನ ಖುಷಿಯಿಂದ ಮತ ಹಾಕಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಎಚ್.ವಿ. ರಾಜೀವ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರ ಬಿ.ಕೆ. ಪ್ರಕಾಶ್ ಅವರೊಂದಿಗೆ ನಗರಾಧ್ಯಕ್ಷ ಆರ್. ಮೂರ್ತಿ ಅವರಿಂದ ಕೆಪಿಸಿಸಿ ಸದಸ್ಯತ್ವದ ಪ್ರಮಾಣ ಪತ್ರ ಸ್ವೀಕರಿಸಿದ ನಂತರ ಅವರು ಮಾತನಾಡಿದರು.

ಪ್ರತಿ ಚುನಾವಣಾ ಸಂದರ್ಭದಲ್ಲೂ ಪ್ರತಿ ಮತಕ್ಕೂ ಇಂತಿಷ್ಟು ಹಣ ಕೊಟ್ಟು ಮತ ಪಡೆಯುವುದು ಮಾಮೂಲಿಯಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ಫಲವಾಗಿ ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ವ್ಯವಸ್ಥಿತವಾಗಿ ಜನ ಸಾಮಾನ್ಯರಿಗೆ ತಲುಪುತ್ತಿವೆ. ಐದು ವರ್ಷಗಳ ನಂತರ ಪ್ರತಿ ಮನೆಗೂ ಐದು ಗ್ಯಾರಂಟಿ ಯೋಜನೆಗಳ ಮೂಲಕ ಕನಿಷ್ಠ 4 ರಿಂದ 4.50 ಲಕ್ಷ ರೂ. ತಲುಪಿರುತ್ತದೆ. ಹೀಗಾಗಿ ಜನ ಸಹಜವಾಗಿಯೇ ಕಾಂಗ್ರೆಸ್ಗೆ ಮತ ನೀಡಲಿದ್ದಾರೆ ಎಂದರು.

ಕಾಂಗ್ರೆಸ್ ಎಲ್ಲರನ್ನೂ ಒಳಗೊಂಡ ಪಕ್ಷ. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದ ಜಾಗದಲ್ಲಿ ಇರಬಾರದು ಎನ್ನುವ ಕಾರಣಕ್ಕೆ ಕಾಂಗ್ರೆಸ್ಸಿಗೆ ಬಂದಿದ್ದೇನೆ. ಕಾಂಗ್ರೆಸ್ ಸೇರ್ಪಡೆಗೊಂಡ ದಿನದಿಂದಲೇ ನನ್ನ ಜವಾಬ್ದಾರಿಗಳು ನಿಬಾಯಿಸುತ್ತಿದ್ದೇನೆ. ಇದೀಗ ಕೆಪಿಸಿಸಿ ಸದಸ್ಯನಾಗಿದ್ದು, ಹಗಲು- ರಾತ್ರಿ ಕೆಲಸ ಮಾಡಿ ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ ಎಂದರು.

ಕೆಪಿಸಿಸಿ ಸದಸ್ಯ ಬಿ.ಕೆ. ಪ್ರಕಾಶ್ ಮಾತನಾಡಿ, ನನ್ನ ತಂದೆ ಕೂಡ ಕೆಪಿಸಿಸಿ ಸದಸ್ಯರಾಗಿದ್ದರು. ಹಿಂದೆ ಕೆಪಿಸಿಸಿ ಸದಸ್ಯತ್ವಕ್ಕಾಗಿಯೇ ದೊಡ್ಡಮಟ್ಟದ ಚುನಾವಣೆಗಳು ನಡೆಯುತ್ತಿದ್ದವು. ಇದೆಲ್ಲವನ್ನೂ ನೋಡಿದ್ದ ನನಗೆ ಯಾವುದೇ ಲಾಭಿ ಮಾಡಿದೆಯೂ ಸದಸ್ಯತ್ವ ದೊರಕಿದೆ. ಬಿಜೆಪಿಯವರು ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಭಾರತಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ. ಇದೆಲ್ಲವನ್ನೂ ಅರಿತುಕೊಂಡು ಕಾರ್ಯಕರ್ತರೊಂದಿಗೆ ಕೆಲಸ ಮಾಡುತ್ತೇನೆ ಎಂದರು. ಕಾಂಗ್ರೆಸ್ ಮುಖಂಡರಾದ ಟಿ.ಬಿ. ಚಿಕ್ಕಣ್ಣ, ಪುಷ್ಪಾಲತಾ ಚಿಕ್ಕಣ್ಣ, ಈಶ್ವರ ಚಕ್ಕಡಿ, ರವಿ ಮಂಚೇಗೌಡನಕೊಪ್ಪಲು, ಮಹೇಶ್ ಇದ್ದರು.

ಬದಲಾವಣೆ ಅನಿವಾರ್ಯವಾದರೆ ಪರಮೇಶ್ವರ್‌ ಸಿಎಂ ಆಗಲಿ

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚೆಗೆ ಬಂದಾಗಲೆಲ್ಲ ಹಲವರ ಹೆಸರು ಕೇಳಿ ಬರುತ್ತದೆ. ಆದರೆ, ಕಾಂಗ್ರೆಸ್ ಸಂಘಟನೆಗೆ, ಪಕ್ಷಕ್ಕೆ ಮಹತ್ತರ ಕೊಡುಗೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೆಸರು ಏಕೆ ಬರುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್ ಅಭಿಮಾನಿ ಬಳಗದ ಅಧ್ಯಕ್ಷ ಬಿಳಿಕೆರೆ ರಾಜು ಪ್ರಶ್ನಿಸಿದರು.

ಚುನಾವಣೆ ವೇಳೆ ದಲಿತರಿಗೆ ಸಿಎಂ ಸ್ಥಾನ ನೀಡುವುದಾಗಿ ತಿಳಿಸಿದರೂ ನಂತರ ಕಡೆಗಣನೆ ಮಾಡಲಾಗುತ್ತದೆ. ಈ ಸಮುದಾಯದಲ್ಲಿ ಮತದಾರರಿಲ್ಲವೇ, ಡಾ.ಜಿ.ಪರಮೇಶ್ವರ್ ಅವರು ತಮಗೆ ಅನ್ಯಾಯವಾದಾಗಲೂ ಧ್ವನಿಯೆತ್ತದೇ ಮೌನವಾಗಿರುತ್ತಾರೆ. ಆದರೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಅನಿವಾರ್ಯವಾದಲ್ಲಿ ಪರಮೇಶ್ವರ್‌ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾಂಗ್ರೆಸ್ ಅಧ್ಯಕ್ಷರಾಗಿ, ಹಲವಾರು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈಗಲೂ ನಿಭಾಯಿಸುತ್ತಿದ್ದಾರೆ. ಈ ಹಿಂದೆಯೂ ಇವರಿಗೆ 2 ಬಾರಿ ಅನ್ಯಾಯವಾಗಿದೆ. ಹಿರಿಯ ರಾಜಕೀಯ ಮುತ್ಸದ್ಧಿಯೂ ಆಗಿದ್ದು, ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ಮುಖಂಡರು ಇತ್ತ ಗಮನ ಹರಿಸಿ, ಇವರಿಗೇ ಸಿಎಂ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೃಷ್ಣ, ಶಿವರಾಜು, ನಾಗರಾಜ್, ಲೋಕೇಶ್ ಇದ್ದರು.