ಕಾಂಗ್ರೆಸ್‌ ಸರ್ಕಾರದಿಂದ ಜನರ ಹಿತ: ರಾಯರಡ್ಡಿ

| Published : Mar 27 2025, 01:07 AM IST

ಸಾರಾಂಶ

ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕ್ಷೇತ್ರದ ಜನರು ಅಭಿವೃದ್ಧಿಯ ವಿಚಾರಕ್ಕೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಬಸ್ ನಿಲ್ದಾಣ, ಕೆರೆ ನಿರ್ಮಾಣ, ಕಲ್ಯಾಣ ಮಂಟಪ ಸೇರಿದಂತೆ ನಾನಾ ಯೋಜನೆಗಳ ಅಭಿವೃದ್ಧಿಗೆ ಭೂಮಿ ಬೇಕಾಗಿದ್ದು ಹಣ ನೀಡಿದರೂ ಭೂಮಿ ನೀಡುತ್ತಿಲ್ಲ.

ಯಲಬುರ್ಗಾ:

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರೈತಪರ ಯೋಜನೆ ಜಾರಿಗೊಳಿಸಿ ನಾಡಿನ ಬಡಜನರ ಹಿತ ಕಾಪಾಡುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಕಂದಾಯ ಭವನದಲ್ಲಿ ಬುಧವಾರ ಸಣ್ಣ ನೀರಾವರಿ ಇಲಾಖೆಯ ೨೦೨೪-೨೫ನೇ ಸಾಲಿನ ಎಸ್.ಸಿಪಿ/ಟಿಎಸ್‌ಪಿ ಯೋಜನೆದಡಿ ಬರುವ ಫಲಾನುಭವಿಗಳಿಗೆ ಬೋರ್‌ವೆಲ್ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸವಿಟ್ಟು ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿದ್ದಾರೆ. ಈ ಮೂಲಕ ಅಭಿವೃದ್ಧಿಗೆ ಹೆಚ್ಚು ಸಹಕಾರ ನೀಡಿದ್ದಾರೆ ಎಂದರು.

ಜನರು ಭೂಮಿ ನೀಡಿ:

ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕ್ಷೇತ್ರದ ಜನರು ಅಭಿವೃದ್ಧಿಯ ವಿಚಾರಕ್ಕೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಬಸ್ ನಿಲ್ದಾಣ, ಕೆರೆ ನಿರ್ಮಾಣ, ಕಲ್ಯಾಣ ಮಂಟಪ ಸೇರಿದಂತೆ ನಾನಾ ಯೋಜನೆಗಳ ಅಭಿವೃದ್ಧಿಗೆ ಭೂಮಿ ಬೇಕಾಗಿದ್ದು ಹಣ ನೀಡಿದರೂ ಭೂಮಿ ನೀಡುತ್ತಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಜನರು ಭೂಮಿ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಇನ್ನೂ ಹೆಚ್ಚು ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರದ ವಿವಿಧ ಯೋಜನೆ ಸದುಪಯೋಗ ಪಡೆದುಕೊಂಡು ಕ್ಷೇತ್ರದ ಜನರು ಆರ್ಥಿಕವಾಗಿ ಸಬಲರಾಗಬೇಕು ಎಂದು ಇದೇ ವೇಳೆ ಕರೆ ನೀಡಿದರು.

ಕೆರೆ ನಿರ್ಮಾಣಕ್ಕೆ ₹ ೯೭೦ ಕೋಟಿ:

ಇಡೀ ರಾಜಕ್ಕೆ ಯಲಬುರ್ಗಾ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾದರಿಯಾಗಲಿದೆ. ಬಿಎಸ್ಸಿ ನರ್ಸಿಂಗ್ ಕಾಲೇಜ್ ಪ್ರವೇಶ ಪಡೆಯಲು ಸರ್ಕಾರ ಆದೇಶ ನೀಡಿದ್ದು ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಿದೆ. ಈ ಕ್ಷೇತ್ರದಲ್ಲಿ ೩೦ಕ್ಕೂ ಅಧಿಕ ಹೊಸದಾಗಿ ಕೆರೆ ನಿರ್ಮಿಸಿ ಅವುಗಳಿಗೆ ತುಂಗಾಭದ್ರ ನದಿ ನೀರು ಹರಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಇದಕ್ಕೆ ಸರ್ಕಾರ ₹ ೯೭೦ ಕೋಟಿ ಅನುದಾನ ನೀಡಿದೆ. ಇನ್ನೂ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಹೆಚ್ಚು ಲಾಭವಾಗಿದೆ ಎಂದರು.

ದೇವರಾಜ ಅರಸು ನಿಗಮದಿಂದ ಹೊಲಿಗೆ ಯಂತ್ರವನ್ನು ಫಲಾನುಭವಿಗಳಿಗೆ ಶಾಸಕರು ವಿತರಿಸಿದರು. ಈ ವೇಳೆ ತಹಸೀಲ್ದಾರ್‌ ಬಸವರಾಜ ತೆನ್ನಳ್ಳಿ, ತಾಪಂನ ಸಂತೋಷ ಪಾಟೀಲ, ಸಣ್ಣ ನೀರಾವರಿ ಇಲಾಖೆಯ ಎಇಇ ಜಗನ್ನಾಥ, ಎಇ ಅಮೀತ್ ಹಾಗೂ ಮುಖಂಡರು ಇದ್ದರು.