ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಸರ್ಕಾರದ ನಿಯಮಾನುಸಾರದಂತೆ ನಾಮ ಫಲಕಗಳಲ್ಲಿ ಶೇ.೬೦ರಷ್ಟು ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆ ಮಾಡಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಡಿಸಿ ಡಾ.ಶಂಕರ್ ವಾಣಿಕ್ಯಳ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ಮಾ.೧೩ರೊಳಗೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಇರಬೇಕು, ಇಲ್ಲದಿದ್ದರೆ ಕಾರ್ಯಕರ್ತರೆ ಬೀದಿಗಿಳಿದು ಅನ್ಯ ಭಾಷಾ ನಾಮಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿತು. ವಿಧೇಯಕಕ್ಕೆ ರಾಜ್ಯಪಾಲರು ಸಹಿ ಮಾಡಿರುವುದರಿಂದ ಅದು ಕಾನೂನಾಗಿ ಕೂಡ ಜಾರಿಯಾಗಿದೆ, ಇದು ಕಾನೂನು ಜಾರಿಗೆ ತರಲು ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ನೆಲದ ಕಾಯ್ದೆ ಪಾಲಿಸದಿದ್ದರೆ ತೊಲಗಿ
ಈ ನೆಲದ ಕಾಯ್ದೆ ಕಾನೂನು ಪಾಲಿಸದವರು ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ, ಕಾನೂನು ಪಾಲಿಸುವ ಮನಸು ಇಲ್ಲದಿದ್ದರೆ ತಮ್ಮ ತಮ್ಮ ರಾಜ್ಯಗಳಿಗೆ ವಾಪಸ್ಸು ತೆರಳಲಿ. ಕನ್ನಡಿಗರು ಯಾರ ಅಡಿಯಾಳುಗಳಲ್ಲ. ನಮ್ಮ ನೆಲದಲ್ಲಿ ನಾವು ಸಾರ್ವಭೌಮರು. ಇದನ್ನು ಎಲ್ಲರಿಗೂ ನೆನಪಿಸುವ ಕಾಲವಿದು. ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವುದು ಕನ್ನಡಿಗನ ಹಕ್ಕು. ಯಾರಾದರೂ ನಿರಾಕರಿಸಿದರೆ ಅದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಕರವೇ ಪದಾಧಿಕಾರಿಗಳಾದ ಡಿ.ಕೆ.ಹಳ್ಳಿ ಮುನಿರಾಜು, ವಡಗೂರು ಶಂಕರ್ ರೆಡ್ಡಿ, ಮಂಜುನಾಥ, ಮದಿರಪ್ಪ, ಮಾಲೂರು ಶ್ರೀನಿವಾಸ, ಬಂಗಾರಪೇಟೆ ರಾಮ್ ಪ್ರಸಾದ್, ಮುಳಬಾಗಿಲು ಹುಸೇನ್, ಲೋಕೇಶ್, ಮಂಜುನಾಥ್‌ಗೌಡ, ಭಾಗ್ಯಲಕ್ಷ್ಮಿ, ನಿರ್ಮಲಾ, ಚೌಡೇಗೌಡ, ಗಣೇಶ, ಆಂಜಿ, ಮಾಲೂರು ಸಂತೋಷ್, ಮುರಳಿಧರ ಇದ್ದರು.