ಶಿಕ್ಷಣದಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ: ಗುರುಪಾದಶ್ರೀ

| Published : Mar 12 2025, 12:46 AM IST

ಸಾರಾಂಶ

ಶಿಕ್ಷಣದಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಲಿದೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣದ ಭಾಗ್ಯ ಕಲ್ಪಿಸುವಲ್ಲಿ ಪಾಲಕರು ಗಮನಹರಿಸಬೇಕು ಎಂದು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಹೇಳಿದರು.

ರೋಣ: ಶಿಕ್ಷಣದಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಲಿದೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣದ ಭಾಗ್ಯ ಕಲ್ಪಿಸುವಲ್ಲಿ ಪಾಲಕರು ಗಮನಹರಿಸಬೇಕು ಎಂದು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಸಂಜೆ ಪಟ್ಟಣದ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಕಲ್ಯಾಣಸಿರಿ ಫೌಂಡೇಶನ್ ಕಲ್ಯಾಣಸಿರಿ ಪೂರ್ವ ಪ್ರಾಥಮಿಕ ಹಾಗೂ ಪ್ರಜಂಟೇಶನ್ ಪ್ರಾಥಮಿಕ ಶಾಲೆಯ ವಾರ್ಷಿಕ ಸಂಭ್ರಮ - 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಗುಣಮಟ್ಟದ ಶಿಕ್ಷಣ ಪ್ರಮುಖವಾಗಿದೆ. ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಕಲಿಕೆಯ ಬುನಾದಿಯನ್ನು ಗಟ್ಟಿಗೊಳಿಸಬೇಕು. ಅಕ್ಷರ ಜ್ಞಾನ ಜೊತೆಗೆ ಮಕ್ಕಳಲ್ಲಿ ಸಂಸ್ಕಾರ, ಮಾನವೀಯ ಮೌಲ್ಯಗಳ ಬೆಳೆಸಬೇಕು, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಗುರುತಿಸಿ ಪ್ರೋತ್ಸಾಹಿಸಬೇಕು. ಈ ದಿಶೆಯಲ್ಲಿ ಶಿಕ್ಷಕರ ಹಾಗೂ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ. ಶಾಲೆಯಷ್ಟೆ ಮನೆಯ ಪರಿಸರ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಕಲ್ಯಾಣಸಿರಿ ಫೌಂಡೇಶನ್ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲ್ಯಾಣಸಿರಿ ಫೌಂಡೇಶನ್‌ ಅಧ್ಯಕ್ಷ. ಪ್ರೊ. ಬಿ.ಬಿ. ಗೌಡರ ಮಾತನಾಡಿ, ಶೈಕ್ಷಣಿಕವಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು, ಏನಾದರೂ ಸುಧಾರಣೆ ತರುವಲ್ಲಿ ಸಂಸ್ಥೆಯು ಮಹತ್ವಾಕಾಂಕ್ಷೆ ಹೊಂದಿದೆ. ಈ ದಿಶೆಯಲ್ಲಿ ಸಮಾಜಮುಖಿ ಕಾರ್ಯಕ್ಕೆ ಸಂಸ್ಥೆಯು ಶ್ರಮಿಸುತ್ತಿದೆ ಎಂದರು.

ನಿವೃತ್ತ ಶಿಕ್ಷಕ‌ ಬಸಪ್ಪ ಹ್ಯಾಟಿ ಮಾತನಾಡಿದರು.

ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರಿಗ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಾಸ್ತಾವಿಕವಾಗಿ ಮುಖ್ಯ ಶಿಕ್ಷಕಿ ಗೀತಾ ಹಿರೇಸಕ್ಕರಗೌಡ್ರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಸ್ತೂರಿ ರಡ್ಡೇರ, ಗೀತಾ ನಂದಿಕೋಲಮಠ, ಶೃತಿ ಓಲೇಕಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.