ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ ವಸೂಲಾತಿ ಕುರಿತಂತೆ ಮೊಬೈಲ್ ಟವರ್, ಕೈಗಾರಿಕೆ ಕೇಂದ್ರಗಳು ಹಾಗೂ ಇತರೆ ಎಲ್ಲ ಖಾಸಗಿ ಕ್ಷೇತ್ರಗಳಿಂದ ಮುಂದಿನ 15 ದಿನಗಳಲ್ಲಿ ಶೇ.50 ರಷ್ಟು ಪ್ರಗತಿ ಸಾಧಿಸಲು ಎಲ್ಲ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಜರುಗಿದ ಪ್ರಗತಿ ಪರಿಶೀಲನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅದರಂತೆ ಸಕಾಲ ಅಧಿನಿಯಮದಡಿ ಬಾಕಿವಿರುವ ಅರ್ಜಿಗಳನ್ನು ಆದ್ಯತೆ ಮೇರೆಗೆ 3 ದಿನಗಳಲ್ಲಿ ವಿಲೇವಾರಿ ಮಾಡಲು ಕ್ರಮ ಜರುಗಿಸುವುದು. ಗ್ರಾಮ ಪಂಚಾಯತಿ ಹಂತದಲ್ಲಿ ವಾರ್ಡ್ ಸಭೆ, ಸಾಮಾನ್ಯ ಸಭೆ ಹಾಗೂ ಇತರೆ ಎಲ್ಲ ಸಭೆಗಳನ್ನು ಆನ್‌ಲೈನ್ ಮೂಲಕ ನಿರ್ವಹಿಸಲು ಕಟ್ಟುನಿಟ್ಟಿನ ಕ್ರಮ ವಹಿಸುವುದು, ಗ್ರಾಮ ಪಂಚಾಯತಿ ಸಿಬ್ಬಂದಿ ಬಯೋಮೆಟ್ರಿಕ್ ಮೂಲಕ ಹಾಜರಾತಿ ಕಡ್ಡಾಯಗೊಳಿಸಿ, ನಿಗದಿತ ಸಮಯದಲ್ಲಿ ಸಿಬ್ಬಂದಿ ಸಂಬಳ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಡಿಜಿಟಲ್ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 500 ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 486 ಗ್ರಾಮ ಪಂಚಾಯತಿ ಗ್ರಂಥಾಲಯಗಳು ಸರ್ಕಾರದಿಂದ ಮಂಜೂರಾಗಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 480 ಡಿಜಿಟಲ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಬಾಕಿ ಉಳಿದಿರುವ 6 ಹೊಸ ಗ್ರಾಮ ಪಂಚಾಯತಿಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣವಾದ ಕೂಡಲೇ ಡಿಜಿಟಲ್ ಗ್ರಂಥಾಲಯಗಳನ್ನಾಗಿ ಪರಿವರ್ತನೆ ಮಾಡಲು ಕ್ರಮವಹಿಸುವಂತೆ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಾನವ ದಿನ ಸೃಜನೆಯಲ್ಲಿ ಡಿಸೆಂಬರ್ ಅಂತ್ಯದವರೆಗೆ ಎಲ್ಲ ತಾಲೂಕುಗಳು ಶೇ.85 ರಷ್ಟು ಪ್ರಗತಿ ಸಾಧಿಸುವುದು, 2021-22 ರಿಂದ 2023-24 ರವರೆಗೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವುದು. ಮುಂದುವರೆದು ಬೆಳಗಾವಿಯ ಜಿಲ್ಲೆಯ ಆದ್ಯತೆ ಕಾಮಗಾರಿಗಳಾದ ಶಾಲಾ ಕಂಪೌಂಡ, ಅಡುಗೆ ಕೋಣೆ ಶೌಚಾಲಯ, ಆಟದ ಮೈದಾನ, ಗ್ರಾಮ ಪಂಚಾಯತಿ ಕಟ್ಟಡ ಹಾಗೂ ತ್ಯಾಜ್ಯ ನಿರ್ವಹಣಾ ಘಟಕಗಳ ಪ್ರಗತಿಯನ್ನು ಆದ್ಯತೆ ಮೇಲೆ ಪ್ರಗತಿ ಸಾದಿಸುವುದು, ಒಂಬಡ್ಸಮನ್ ಪ್ರಕರಣಗಳ ಮೇಲೆ ವಸೂಲಾತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಸಾಧಿಸಬೇಕು ಎಂದರು.ಜಲಜೀವನ ಮಿಷನ್ ಯೋಜನೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಅವುಗಳನ್ನು ಹರ ಘರ ಜಲ್ ಗ್ರಾಮ ಎಂದು ಘೋಷಣೆ ಮಾಡಲು ಕ್ರಮವಹಿಸುವಂತೆ ಕಾರ್ಯಪಾಲಕ ಅಭಿಯಂತರರು/ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಎಲ್ಲ ತಾಲೂಕು ಮಟ್ಟದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.ಸಭೆಯಲ್ಲಿ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಉಪಕಾರ್ಯದರ್ಶಿ(ಆಡಳಿತ) ಬಸವರಾಜ್ ಹೆಗ್ಗಾನಾಯಕ್, ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಪ್ರೋಬೆಷನರಿ ಐ.ಎ.ಎಸ್ ಅಧಿಕಾರಿ ದಿನೇಶಕುಮಾರ ಮೀನಾ, ಕಾರ್ಯನಿರ್ವಾಹಕ ಅಭಿಯಂತರರು ಶಶಿಕಾಂತ ನಾಯಕ ಮತ್ತಿತರರು ಉಪಸ್ಥಿತರಿದ್ದರು.