ಕರ್ನಾಟಕ ಪಶ್ಚಿಮ ಪದವೀಧರ ದೈವಾರ್ಷಿಕ ಚುನಾವಣಾ-2026ರ ಪ್ರಕ್ರಿಯೆಯನ್ನು ಅತ್ಯಂತ ಜವಾಬ್ದಾರಿಯುತ, ಪಾರದರ್ಶಕವಾಗಿ ಮತ್ತು ಯಾವುದೇ ಲೋಪದೋಷಗಳಿಲ್ಲದೆ ನಿರ್ವಹಿಸಬೇಕು.
ಚುನಾವಣಾ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಗದಗಕರ್ನಾಟಕ ಪಶ್ಚಿಮ ಪದವೀಧರ ದೈವಾರ್ಷಿಕ ಚುನಾವಣಾ-2026ರ ಪ್ರಕ್ರಿಯೆಯನ್ನು ಅತ್ಯಂತ ಜವಾಬ್ದಾರಿಯುತ, ಪಾರದರ್ಶಕವಾಗಿ ಮತ್ತು ಯಾವುದೇ ಲೋಪದೋಷಗಳಿಲ್ಲದೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಚುನಾವಣಾ ಪ್ರಿಸೈಡಿಂಗ್ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ತರಬೇತಿ ಕಾರ್ಯಕ್ರಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚುನಾವಣಾ ಕಾರ್ಯದಲ್ಲಿ ಅಧಿಕಾರಿಗಳು ನಿಖರತೆ ಮತ್ತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಪ್ರಕ್ರಿಯೆಯಲ್ಲಿ ಆಚಾತುರ್ಯವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಪ್ರಿಸೈಡಿಂಗ್ ಹಾಗೂ ಪೋಲಿಂಗ್ ಅಧಿಕಾರಿಗಳು ತಮ್ಮ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ತರಬೇತಿ ಅವಧಿಯಲ್ಲಿ ಹೇಳಿಕೊಡುವ ಪ್ರತಿಯೊಂದು ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು. ಮತದಾನದ ಅಂಕಿ-ಅಂಶಗಳು ಹಾಗೂ ವರದಿಗಳನ್ನು ಸಿದ್ಧಪಡಿಸುವಾಗ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಿಖರವಾದ ಲೆಕ್ಕಾಚಾರವಿರಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಸಮಯಪಾಲನೆ ಅತ್ಯಂತ ಮುಖ್ಯವಾದುದು. ಮಾಹಿತಿಯನ್ನು ಕಾಲಕಾಲಕ್ಕೆ ನೀಡಬೇಕು ಅಧಿಕಾರಿಗಳಿಗೆ ಎಚ್ಚರಿಸಿದರು.
ಮಾಸ್ಟರ್ ಟ್ರೈನರ್ ಬಿ.ಜಿ. ಗಿರೀತಿಮ್ಮಣ್ಣವರ ಮಾತನಾಡಿ, ಈ ಬಾರಿ ಇವಿಎಂ (EVM) ಬದಲಿಗೆ ಮತಪತ್ರ (Ballot Paper) ಹಾಗೂ ಮತಪೆಟ್ಟಿಗೆಯ (Ballot Box) ಮೂಲಕ ಚುನಾವಣೆ ನಡೆಯಲಿದೆ. ಈ ಪ್ರಕ್ರಿಯೆಯು ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿದ್ದು, ಸಿಬ್ಬಂದಿ ಇದರ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು. ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಸಿದ್ಧತೆಗಳ ಭಾಗವಾಗಿ ಚುನಾವಣಾ ಕರ್ತವ್ಯದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು ಎಂದರು.ತರಬೇತಿಯ ಹಂತಗಳು: ಮೊದಲ ಹಂತದ ತರಬೇತಿ ಇದು ಪ್ರಾಥಮಿಕ ತರಬೇತಿಯಾಗಿದ್ದು, ಕೇವಲ ಪ್ರಿಸೈಡಿಂಗ್ ಆಫೀಸರ್ (Polling Officer / Presiding Officer) ಮಟ್ಟದ ಅಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಎರಡನೇ ಹಂತದ ತರಬೇತಿ (ಎಕ್ಸಾಸ್ಟಿವ್ ಟ್ರೈನಿಂಗ್) ಇದು ತಂಡವಾರು ನಡೆಯುವ ತರಬೇತಿಯಾಗಿದ್ದು, ಪ್ರಿಸೈಡಿಂಗ್ ಆಫೀಸರ್ ಸೇರಿದಂತೆ ಪೋಲಿಂಗ್ ಅಧಿಕಾರಿಗಳ ಸಂಪೂರ್ಣ ತಂಡವು ಒಟ್ಟಾಗಿ ಪಾಲ್ಗೊಳ್ಳಬೇಕು. ಈ ದಿನ ಕಾನೂನುಬದ್ಧ ದಾಖಲೆಗಳು, ಸ್ಟ್ಯಾಚುಟರಿ ಮತ್ತು ನಾನ್-ಸ್ಟ್ಯಾಚುಟರಿ ಕವರ್ಗಳು ಹಾಗೂ ಇತರೆ ಸಾಮಗ್ರಿಗಳ ಕುರಿತು ಸಮಗ್ರವಾಗಿ ತಿಳಿಸಿಕೊಡಲಾಗುತ್ತದೆ ಎಂದರು.
ಚುನಾವಣಾ ಕರ್ತವ್ಯದಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿಯೂ ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮತದಾನದ ದಿನದಂದು ಬೆಳಗ್ಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮತಗಟ್ಟೆಗೆ ತಲುಪಿ, ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಚುನಾವಣಾ ಪ್ರಕ್ರಿಯೆಯು ಯಶಸ್ವಿಯಾಗಲು 1+3 ಮಾದರಿಯ ಸಿಬ್ಬಂದಿ ತಂಡಗಳ (ಒಬ್ಬ ಪ್ರಿಸೈಡಿಂಗ್ ಅಧಿಕಾರಿ ಮತ್ತು ಮೂವರು ಪೋಲಿಂಗ್ ಅಧಿಕಾರಿಗಳು) ಪರಸ್ಪರ ಸಹಕಾರ ಹಾಗೂ ಸಮನ್ವಯತೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.ಚುನಾವಣಾ ಪ್ರಕ್ರಿಯೆ, ಮತದಾನದ ದಿನದ ನಿರ್ವಹಣೆ ಹಾಗೂ ಅಧಿಕಾರಿಗಳ ಜವಾಬ್ದಾರಿಗಳ ಕುರಿತು ವಿಸ್ತೃತವಾಗಿ ಮಾರ್ಗದರ್ಶನ ನೀಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಆಹಾರ ಇಲಾಖೆಯ ಉಪ ನಿರ್ದೇಶಕ ಎಸ್.ಡಿ. ಪಾಟೀಲ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.