ಸಾರಾಂಶ
- ಪೂರ್ವಭಾವಿ ಸಭೆಯಲ್ಲಿ ಅಪರ ಡಿಸಿ ಪಿ.ಎನ್.ಲೋಕೇಶ್ ಸೂಚನೆ । ವಿಷಯವಾರು ವೇಳಾಪಟ್ಟಿ ಪ್ರಕಟ
- - - ಕನ್ನಡಪ್ರಭ ವಾರ್ತೆ ದಾವಣಗೆರೆದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ 20 ರವರೆಗೆ ನಡೆಯುತ್ತದೆ. ಪರೀಕ್ಷಾ ಕಾರ್ಯದಲ್ಲಿ ಲೋಪವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪರೀಕ್ಷೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಶ್ರಮವಹಿಸಬೇಕು. ಬಹಳ ಎಚ್ಚರಿಕೆಯಿಂದ ಜಿಲ್ಲೆಗೆ ಉತ್ತಮ ಹಾಗೂ ಉತ್ತಮ ಫಲಿತಾಂಶ ತರುವಲ್ಲಿ ತಮ್ಮಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಪರೀಕ್ಷಾ ಕಾರ್ಯನಿರ್ವಹಿಸುವಲ್ಲಿ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಬೇಡ. ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಹೊಣೆ ಮಾಡಲಾಗುವುದು ಎಂದ ಅವರು, ಜಿಲ್ಲೆಯ ಆರು ತಾಲೂಕುಗಳಲ್ಲಿ ಸಿದ್ಧತೆ ಮಾಡಿಕೊಂಡ ಬಗ್ಗೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಶಾಲಾ ಶಿಕ್ಷಣ ಪದವಿಪೂರ್ವ ಇಲಾಖೆ ಉಪನಿರ್ದೇಶಕ ಜಿ.ಕರಿಸಿದ್ದಪ್ಪ ಮಾತನಾಡಿ, ದಾವಣಗೆರೆ ತಾಲೂಕಿನಲ್ಲಿ 20 ಕೇಂದ್ರಗಳು, ಹರಿಹರದಲ್ಲಿ 4, ಜಗಳೂರಿನಲ್ಲಿ 3, ಚನ್ನಗಿರಿಯ 5, ಹೊನ್ನಾಳಿಯ 3 ಕೇಂದ್ರಗಳು ಸೇರಿದಂತೆ ಒಟ್ಟು 35 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಕೇಂದ್ರಗಳಲ್ಲಿ 21,153 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದೊಳಗೆ ಕರ್ತವ್ಯನಿರತ ಸಿಬ್ಬಂದಿ ಹೊರತುಪಡಿಸಿ, ಇತರೆ ಯಾರಿಗೂ ಪ್ರವೇಶ ಇರುವುದಿಲ್ಲ. ವೆಬ್ ಕ್ಯಾಮೆರಾ ಮತ್ತು ಸಿಸಿ ಟಿ.ವಿ.ಗಳ ಬಗ್ಗೆ ಪರೀಕ್ಷೆ ಕೇಂದ್ರದ ಮುಖ್ಯ ನಿರೀಕ್ಷಕರು ಗಮನ ಹರಿಸಬೇಕೆಂದು ತಿಳಿಸಿದರು.35 ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಅಗತ್ಯ ಕ್ರಮ ವಹಿಸಲಾಗುವುದು. ಪ್ರಶ್ನೆ ಪತ್ರಿಕೆ ಸ್ವೀಕರಿಸಿ, ಪರೀಕ್ಷಾ ಕೇಂದ್ರಗಳಿಗೆ ವಿತರಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು ನೇಮಿಸಲಾಗುವುದು ಎಂದರು.
ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮೊಬೈಲ್ ಸೇರಿದಂತೆ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ತರುವಂತಿಲ್ಲ. ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು ಎಂದರು.ಡಿಡಿಪಿಐ ಕೊಟ್ರೇಶ್, ಡಯಟ್ ಉಪನಿರ್ದೇಶಕರಾದ ಗೀತಾ, ಖಜಾನೆ ಇಲಾಖೆ ಉಪನಿರ್ದೇಶಕಿ ಪ್ರಭಾವತಿ, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಪ್ಪಾವತಿ, ದಾವಣಗೆರೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಇದ್ದರು.
- - -ಬಾಕ್ಸ್ * ಪರೀಕ್ಷಾ ವೇಳಾಪಟ್ಟಿ
ಮಾ.1 ರಂದು ಕನ್ನಡ, ಅರೇಬಿಕ್. ಮಾ.3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ. ಮಾ. 4-ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್. ಮಾ.5- ರಾಜ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ. ಮಾ.7-ಇತಿಹಾಸ, ಭೌತಶಾಸ್ತ್ರ. ಮಾ.10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ. ಮಾ. 12-ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲ ಗಣಿತ. ಮಾ. 13-ಅರ್ಥ ಶಾಸ್ತ್ರ. ಮಾ. 15-ಇಂಗ್ಲೀಷ್. ಮಾ. 17-ಭೂಗೋಳ ಶಾಸ್ತ್ರ, ಮಾ.18-ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ. ಮಾ.19- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್. ಮಾ.20- ಹಿಂದಿ.
- - - -20ಕೆಡಿವಿಜಿ33.ಜೆಪಿಜಿ:ದಾವಣಗೆರೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ ಅಧ್ಯಕ್ಷತೆಯಲ್ಲಿ ದ್ವಿತೀಯ ಪರೀಕ್ಷೆ ಕುರಿತ ಪೂರ್ವಭಾವಿ ಸಭೆ ನಡೆಯಿತು.