ಪ್ರಾಣದ ಹಂಗು ತೊರೆದು ಸರ್ಕಾರಿ ನೌಕರರ ಕಾರ್ಯನಿರ್ವಹಣೆ: ಡಾ. ಅಜ್ಜಯ್ಯ

| Published : Jul 22 2024, 01:20 AM IST

ಸಾರಾಂಶ

ಸರ್ಕಾರದ ಪ್ರತಿನಿಧಿಯಾಗಿ ನೌಕರರು ಕೆಲಸ ಮಾಡಬೇಕಾಗುತ್ತದೆ. ಸರ್ಕಾರದ ಕೆಲಸ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ದೇವರ ಕೆಲಸ ಎಂದು ಮಾಡಬೇಕು.

ಶಿರಸಿ: ಸಂಕಷ್ಟದ ದಿನದಲ್ಲೂ ಜನರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಾಣದ ಹಂಗು ತೊರೆದು ಸರ್ಕಾರಿ ನೌಕರರು ಸದಾ ಕಾರ್ಯ ಮಾಡುತ್ತಿರುತ್ತಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಜಿ.ಆರ್. ಅಜ್ಜಯ್ಯ ತಿಳಿಸಿದರು.

ಭಾನುವಾರ ನಗರದ ಅಂಬೇಡ್ಕರ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಶಾಖೆ ಶಿರಸಿ ಹಮ್ಮಿಕೊಂಡ ರಾಜ್ಯ ಹಾಗೂ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ, ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಪ್ರತಿನಿಧಿಯಾಗಿ ನೌಕರರು ಕೆಲಸ ಮಾಡಬೇಕಾಗುತ್ತದೆ. ಸರ್ಕಾರದ ಕೆಲಸ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ದೇವರ ಕೆಲಸ ಎಂದು ಮಾಡಬೇಕು. ಸರ್ಕಾರಿ ನೌಕರರು ಕ್ಲಿಷ್ಟಕರ ಸನ್ನಿವೇಶದಲ್ಲಿ ಕೆಲಸ ಮಾಡಬೇಕಾಗುತ್ತದೆ. ದೇಶದ, ರಾಜ್ಯದ ಅಭಿವೃದ್ಧಿಗೆ ಮುಂದೆ ಇದ್ದೇವೆ. ಸರ್ಕಾರದ ಯೋಜನೆ ರೈತರಿಗೆ, ಬಡವರಿಗೆ, ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿರುತ್ತಾರೆ. ಮಾನವೀಯ ದೃಷ್ಟಿಯಿಂದ ಕೂಡ ಕೆಲಸ ಮಾಡಬೇಕಾಗುತ್ತದೆ ಎಂದರು.

ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಪಿ. ಬಸವರಾಜ ಮಾತನಾಡಿ, ಎಲ್ಲರೂ ಸೇರಿ ಅಭಿವೃದ್ದಿಗೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಎಲ್ಲರೂ ಕೆಲಸ ಮಾಡಲಾಗುತ್ತದೆ. ಸರ್ಕಾರ ನೀತಿ, ನಿರೂಪಣೆ ಮಾಡಿದಾಗ ಅದು ಜಾರಿಗೆ ಬರುವುದು ಸರ್ಕಾರಿ ನೌಕರರ ಮೂಲಕ ಅಗುತ್ತದೆ. ಸರ್ಕಾರದ ಯಶಸ್ವಿಗೆ ನೌಕರರ ಪಾಲೂ ಇದೆ. ನಮಗೆ ಲಭ್ಯ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸೇವಾ ಮನೋಭಾವನೆಯ ವರ್ಗ ಇರುವ ತನಕ ಬೇಡಿಕೆ ಇದ್ದೇ ಇರುತ್ತದೆ. ಆಡಳಿತ ಅದನ್ನು ಪೂರೈಸಿದಾಗ ನೌಕರರ ದಕ್ಷತೆ ಹೆಚ್ಚುತ್ತದೆ. ಕೊರತೆ ತುಂಬಿದಾಗ ಕೆಲಸ ಹೆಚ್ಚುತ್ತದೆ ಎಂದರು.

ಜಿಲ್ಲಾ ಸಂಘದ ಅಧ್ಯಕ್ಷ ಕಿರಣಕುಮಾರ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಏಳನೆ ವೇತನ ಆಯೋಗ ಯಥಾವತ್ ಅನುಷ್ಠಾನ ಆಗಿದೆ. ಇದು ಇತಿಹಾಸದಲ್ಲಿ ಮೊದಲು. ಪಾರದರ್ಶಕ ವ್ಯವಸ್ಥೆಯಿಂದ ಇದು ಸಾಧ್ಯವಾಗುತ್ತದೆ. ನಾವು ಒಡೆಯುವ ಕೂಲಿಗೆ ತಕ್ಕಂತೆ ಕೆಲಸ ಮಾಡಿದರೆ ಪುಣ್ಯ ಬರುತ್ತದೆ ಎಂದರು.

ನಗರ ಯೋಜನಾ ಅಭಿವೃದ್ದಿ ಸಂಘದ ಅಧ್ಯಕ್ಷ ಜಗದೀಶ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಉಪನ್ಯಾಸಕರ ಸಂಘದ ಅಧ್ಯಕ್ಷ ದಿವಾಕರ ನಾಯ್ಕ, ಪ್ರೌಢಶಾಲಾ ಶಿಕ್ಷಕರ ಸಂಘದ ಎಸ್.ಜಿ. ಹೆಗಡೆ, ನಟರಾಜ, ಸಂತೋಷ ಸಾಳುಂಕೆ, ಪ್ರಶಾಂತ ನಾಯಕ, ಸುರೇಶ ನಾಯಕ, ಪ್ರಕಾಶ ನಾಯಕ, ದಯಾನಂದ ನಾಯ್ಕ, ಸುರೇಶ ಪಟಗಾರ, ಕೆ.ಎನ್. ಹೊಸ್ಮನಿ, ಫರ್ನಾಂಡೀಸ್ ಜುಜೆ, ಎನ್.ಎಸ್. ಭಾಗವತ, ಅಶೋಕ ಪಡುವಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಮುಖ್ಯಮಂತ್ರಿ ಪದಕ ಪಡೆದ ಡಿಆರ್‌ಎಫ್‌ಒ ವಿ.ಟಿ. ನಾಯ್ಕ, ಧನ್ಯಾ ನಾಯ್ಕ, ತುಳಸಿ ಹೆಗಡೆ, ಅದ್ವೈತ ಕಿರಣಕುಮಾರ ಅವರನ್ನು ಸನ್ಮಾನಿವಿಸಲಾಯಿತು. ಅಲ್ಲದೇ, ೧೬೯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.