ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಸೊರಬ, ಆನವಟ್ಟಿ ಮತ್ತು ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಸುಮಾರು 351 ಗ್ರಾಮಗಳನ್ನು ಬಹುಗ್ರಾಮ ಯೋಜನೆಗೊಳಪಡಿಸಿ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದಲ್ಲಿ ನಿರ್ಮಾಣ ಆಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ನಂತರ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು.ಪಕ್ಕದ ಸಾಗರ ತಾಲೂಕಿನಲ್ಲಿ ಹರಿಯುವ ಶರಾವತಿ ನದಿಯಿಂದ ಪೈಪ್ ಲೈನ್ ಮೂಲಕ ಕುಡಿಯುವ ನೀರನ್ನು ಒದಗಿಸುವ ಈ ಯೋಜನೆಯನ್ನು 3 ವರ್ಷಗಳ ಅವಧಿಯೊಳಗೆ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಈಗಾಗಲೇ ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಅನುಮೋದನೆ ದೊರೆಯಲಿದೆ. ಈ ಯೋಜನೆಯಿಂದ ಸೊರಬ ತಾಲೂಕಿನ ಮತ್ತು ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸೇರಿದಂತೆ ಸುಮಾರು 351 ಗ್ರಾಮಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಅನುಕೂಲ ಆಗುವಂತೆ ಒಂದೇ ಸೂರಿನಡಿ ಎಲ್ಲ ಕಚೇರಿಗಳನ್ನು ಸೇರಿಸುವ ಯೋಜನೆಯನ್ನು ಪಟ್ಟಣದ ಹತ್ತಿರದ ಖಾಲಿ ನಿವೇಶನದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಪಟ್ಟಣದಲ್ಲಿ ಬಹಳಷ್ಟು ಖಾಲಿ ನಿವೇಶನವಿದ್ದು, ಈ ಬಗ್ಗೆ ಮುಂಜಾಗೃತಾ ಕ್ರಮವಾಗಿ ಕಚೇರಿಗಳ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಸದಾಗಿ ನಡೆಯುವ ಸಂತೆ ಮಾರುಕಟ್ಟೆ ಕಾಮಗಾರಿಯನ್ನು ಹಾಗೂ ಉಗ್ರಾಣ ಮಳಿಗೆಗಳನ್ನು ಮುಂದುವರಿಸಿ, ಬಿಸಿಲು ಮತ್ತು ಮಳೆಗೆ ಅನುಕೂಲ ಆಗುವಂತೆ ಸಂತೆ ಮಾರುಕಟ್ಟೆ ಶೆಡ್‌ಗಳು ಹಾಗೂ ಇದೇ ಸ್ಥಳದಲ್ಲಿ ಮೀನು ಮತ್ತು ಮಾಂಸದ ಮಾರುಕಟ್ಟೆ ನಿರ್ಮಿಸುವಂತೆ ಸಂಬಂಧಪಟ್ಟ ಅಭಿಯಂತರರಿಗೆ ಸೂಚಿಸಿದರು.ಕೈಗಾರಿಕಾ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಅನುಕೂಲ ಆಗುವಂತೆ ಪ್ರತ್ಯೇಕ ವಿದ್ಯುತ್ ಗ್ರಿಡ್ ಸ್ಥಾಪಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಮೂಲಸೌಕರ್ಯಗಳನ್ನು ಹಾಗೂ ಅಭಿವೃದ್ಧಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಪಟ್ಟಣದಲ್ಲಿರುವ ಖಾಲಿ ಜಾಗಗಳು ಬೇರೆಯವರ ಪಾಲಾಗದಂತೆ ಕೂಡಲೇ ಜಾಗೃತರಾಗಿ, ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳ ಕಟ್ಟಡಗಳಿಗೆ ಮೀಸಲಿಟ್ಟು, ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲು ಮುಂದಾಗುವಂತೆ ಸಾಗರ ಉಪವಿಭಾಗಾಧಿಕಾರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಟ್ಟಣದಲ್ಲಿನ ಹಳೆಯ ಬಿಇಒ ಕಚೇರಿ, ಕೆಎಸ್‌ಆರ್‌ಟಿಸಿ ಡಿಪೋ ಜಾಗ, ಎಸ್. ಬಂಗಾರಪ್ಪ ಕ್ರೀಡಾಂಗಣ, ಜಿ+2 ಆಶ್ರಯ ಮನೆಗಳ ನಿರ್ಮಾಣದ ಕಾಮಗಾರಿ, ಇಂಡಸ್ಟ್ರಿಯಲ್ ಏರಿಯಾ, ಸಂತೆ ಮಾರುಕಟ್ಟೆ ಕಾಮಗಾರಿ, ಹಿಂದೂ ರುದ್ರಭೂಮಿ ಹಾಗೂ ಗಾಂಧಿ ಪಾರ್ಕ್ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಹುಸೇನ್ ಸರಕಾವಸ್, ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ಡಾ. ಪ್ರದೀಪ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಪುರಸಭಾ ಸದಸ್ಯರಾದ ಮಧುರಾಯ ಜಿ. ಶೇಟ್, ಪ್ರೇಮಾ ಟೋಕಪ್ಪ, ಅನ್ಸರ್ ಅಹ್ಮದ್, ಆಫ್ರಿನಾ ಬೇಗಂ, ಸುಲ್ತಾನಾ ಬೇಗಂ, ಯು. ನಟರಾಜ, ಜಯಲಕ್ಷ್ಮೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ.ಅಣ್ಣಪ್ಪ, ಪ್ರಮುಖರಾದ ಎಚ್.ಗಣಪತಿ, ಪ್ರಶಾಂತ್ ಮೇಸ್ತ್ರಿ, ಪರಶುರಾಮ ಸಣ್ಣಬೈಲ್ ಮೊದಲಾದವರು ಹಾಜರಿದ್ದರು.
- - - (** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)-29ಕೆಪಿಸೊರಬ01:ಸೊರಬ ಪಟ್ಟಣದಲ್ಲಿ ನಿರ್ಮಾಣ ಆಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವ ಮಧು ಬಂಗಾರಪ್ಪ ಪರಿಶೀಲಿಸಿ, ಅನಂತರ ಅಧಿಕಾರಿಗಳೊಂದಿಗೆ ಚರ್ಚಿಸಿದರು.