ಆಯುರ್ವೇದವು ಭಾರತೀಯ ಸಂಸ್ಕೃತಿಯ ಅತ್ಯಂತ ಪುರಾತನ ವೈದ್ಯಕೀಯ ಪದ್ಧತಿಯಾಗಿದೆ. ಅಲೋಪತಿ ಚಿಕಿತ್ಸಾ ಪದ್ಧತಿ ಬರುವುದಕ್ಕಿಂತ ಮುಂಚೆ, ವೇದಗಳು ಮತ್ತು ಪುರಾಣಗಳ ಕಾಲದಿಂದಲೂ ಭಾರತದಲ್ಲಿ ಆಯುರ್ವೇದ ಪದ್ಧತಿಯನ್ನೇ ಜನರು ರೋಗ ನಿವಾರಣೆಗೆ ಅವಲಂಬಿಸಿದ್ದರು.
ಕಾರವಾರ: ಆಯುರ್ವೇದ ಚಿಕಿತ್ಸೆಯಲ್ಲಿ ನೈಸರ್ಗಿಕ ಗಿಡಮೂಲಿಕೆಗಳ ಔಷಧೀಯ ಸತ್ವಗಳಿರುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿರುವುದಿಲ್ಲ. ಇದು ಆರೋಗ್ಯ ರಕ್ಷಣೆಯಲ್ಲಿ ಶಾಶ್ವತ ಮತ್ತು ನೈಸರ್ಗಿಕ ಪರಿಹಾರ ಒದಗಿಸುತ್ತದೆ ಎಂದು ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ ಡಾ. ಶಂಕರ್ ರಾವ್ ಹೇಳಿದರು.ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ಕಾರವಾರ ಆಯುಷ್ ವೈದಾಧಿಕಾರಿಗಳ ಸಂಘ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಆಯುರ್ವೇದವು ಭಾರತೀಯ ಸಂಸ್ಕೃತಿಯ ಅತ್ಯಂತ ಪುರಾತನ ವೈದ್ಯಕೀಯ ಪದ್ಧತಿಯಾಗಿದೆ. ಅಲೋಪತಿ ಚಿಕಿತ್ಸಾ ಪದ್ಧತಿ ಬರುವುದಕ್ಕಿಂತ ಮುಂಚೆ, ವೇದಗಳು ಮತ್ತು ಪುರಾಣಗಳ ಕಾಲದಿಂದಲೂ ಭಾರತದಲ್ಲಿ ಆಯುರ್ವೇದ ಪದ್ಧತಿಯನ್ನೇ ಜನರು ರೋಗ ನಿವಾರಣೆಗೆ ಅವಲಂಬಿಸಿದ್ದರು.
ನಮ್ಮಲ್ಲೇ ಇರುವ ಈ ಅತ್ಯುತ್ತಮ ವೈದ್ಯಕೀಯ ಪದ್ಧತಿಯನ್ನು ಕಡೆಗಣಿಸುವ ಹಿತ್ತಲ ಗಿಡ ಮದ್ದಲ್ಲ ಎಂಬ ಪರಿಸ್ಥಿತಿಯನ್ನು ಬದಲಾಯಿಸಿ, ಇತ್ತೀಚಿನ ದಿನಗಳಲ್ಲಿ ಸರ್ಕಾರವು ಆಯುಷ್ ಮತ್ತು ಆರೋಗ್ಯ ಇಲಾಖೆಗಳ ಸಮನ್ವಯದೊಂದಿಗೆ ಆಯುರ್ವೇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಉತ್ತೇಜನ ನೀಡುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನದಂತೆ ರಾಷ್ಟ್ರೀಯ ಆಯುರ್ವೇದ ದಿನವನ್ನು ವ್ಯಾಪಕವಾಗಿ ಆಚರಿಸಲಾಗುತ್ತಿದ್ದು, ಸಾರ್ವಜನಿಕರು ಆಯುರ್ವೇದ ಚಿಕಿತ್ಸೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಗದೀಶ ಯಾಜಿ, 30 ವರ್ಷ ಮೇಲ್ಪಟ್ಟ ಜನರಲ್ಲಿ ಶೇ. 38ರಷ್ಟು ಮಂದಿ ಅಸಾಂಕ್ರಾಮಿಕ ರೋಗಗಳಿಂದ(ಅಧಿಕ ರಕ್ತದೊತ್ತಡ, ಮಧುಮೇಹ, ಕೀಲುನೋವು, ಸೋರಿಯಾಸಿಸ್ ಇತ್ಯಾದಿ) ಬಳಲುತ್ತಿರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಹಿಂದಿನ ಕಾಲದಲ್ಲಿ ಕೃಷಿ ಕೆಲಸ ಹಾಗೂ ದೈಹಿಕ ಶ್ರಮದಿಂದ ಜನರು ಸದೃಢರಾಗಿದ್ದರು. ಆದರೆ ಇಂದಿನ ದಿನಗಳಲ್ಲಿ ಮಕ್ಕಳು ಮೈದಾನದ ಆಟಗಳನ್ನು ಬಿಟ್ಟು ಮೊಬೈಲ್ ಗೀಳು, ಜಂಕ್ ಫುಡ್‌ಗಳಿಗೆ ಮಾರುಹೋಗುತ್ತಿದ್ದಾರೆ. ಇದರಿಂದಾಗಿ ಯುವತಿಯರಲ್ಲಿ ಪಿಸಿಒಡಿ, ಥೈರಾಯ್ಡ್ ಮುಂತಾದ ಸಮಸ್ಯೆಗಳು ವ್ಯಾಪಕವಾಗಿ ಕಂಡುಬರುತ್ತಿವೆ. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸರಿಯಾದ ಆಹಾರ ಪದ್ಧತಿ, ವಿಹಾರ, ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ಪ್ರಾರ್ಥನೆಯಂತಹ ಜೀವನಶೈಲಿಯನ್ನು ರೂಢಿಸಬೇಕು.ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು, ತಂಬಾಕು, ಧೂಮಪಾನ ಹಾಗೂ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ (ಶ್ವಾಸಕೋಶ, ಯಕೃತ್ತಿಗೆ ಆಗುವ ಹಾನಿ) ಆಯುಷ್ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ ಶೆಟ್ಟಿ ಹಾಗೂ ಶಿರಸಿ ಆಯುರ್ವೇದ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸುಜಾತಾ ನಾಯ್ಕ ಮತ್ತು ಬೈರುಂಬೆ ಆಯುರ್ವೇದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪುಷ್ಪಾ ಮುಕ್ರಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಶಿರಸ್ತೇದಾರ ಪ್ರಮೋದ ನಾಯ್ಕ ಉಪಸ್ಥಿತರಿದ್ದರು. ಸ್ವಾಸ್ಥ್ಯ ಸಂರಕ್ಷಣೆಯಲ್ಲಿ ಆಯುರ್ವೇದದ ಪಾತ್ರದ ಕುರಿತು ಹಿರೇಬೈಲ್ ಆಯುಷ್ಮಾನ್ ಆರೋಗ್ಯ ಮಂದಿರದ ಡಾ. ಭಾರತಿ ಪಿ.ಬಿ. ಮತ್ತು ಆರೋಗ್ಯಕರ ಭವಿಷ್ಯಕ್ಕಾಗಿ ಯೋಗ ಬೈರುಂಬೆ ಆಯುಷ್ಮಾನ ಆರೋಗ್ಯ ಮಂದಿರದ ಡಾ. ಪೂರ್ಣಿಮಾ ಎಸ್.ಬಿ. ಉಪನ್ಯಾಸ ನೀಡಿದರು.ಕುಮಟಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಡಾ. ಪ್ರವೀಣ ಜಿ.ಎನ್. ಮತ್ತು ಜಾಲಿ ಆಯುಷ್ಮಾನ ಆರೋಗ್ಯ ಮಂದಿರದ ಡಾ.ಪ್ರಸನ್ನ ಔಷಧಿ ಸಸ್ಯಗಳ ಮಹತ್ವದ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಆಯುಷ್ ಇಲಾಖೆ ಆಡಳಿತಾಧಿಕಾರಿ ಸಂಜೀವಕುಮಾರ್ ಸ್ವಾಗತಿಸಿದರು. ವನಿತಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಮುಂಡಗೋಡ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಯೋಗೇಶ ಮಡಗಾಂಕರ್ ಕಾರ್ಯಕ್ರಮ ನಿರೂಪಿಸಿದರು. ಉಮ್ಮಚಗಿ ಆಯುಷ್ಮಾನ ಆರೋಗ್ಯ ಮಂದಿರದ ಡಾ. ಸಂಜೀವ ಗಲಗಲಿ ವಂದಿಸಿದರು.ಜಿಲ್ಲಾ ಆಯುಷ್ ಇಲಾಖೆ ಆಡಳಿತಾಧಿಕಾರಿ ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಂಜೀವ ಕುಮಾರ ನಾಯಕ, ವೈದ್ಯಾಧಿಕಾರಿಗಳಾದ ಡಾ. ಪೂರ್ಣಿಮಾ ಎಸ್.ಬಿ., ಡಾ. ಭಾರತಿ ಪಿ.ಬಿ ಮತ್ತಿತರರು ಉಪಸ್ಥಿತರಿದ್ದರು. ಮುಂಡಗೋಡ ತಾಲೂಕು ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಯೊಗೇಶ್ ಮಡಗಾಂವರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.