ಬೂಕನಕೆರೆ, ಶೀಳನೆರೆ ಹೋಬಳಿ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಶಾಸಕ ಎಚ್.ಟಿ.ಮಂಜು

| Published : Feb 06 2024, 01:34 AM IST

ಬೂಕನಕೆರೆ, ಶೀಳನೆರೆ ಹೋಬಳಿ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ಹಂತದ 46 ಕೆರೆಗಳನ್ನು ತುಂಬಿಸಲು ಸುಮಾರು 300 ಎಂ.ಸಿ.ಎಫ್.ಟಿ ಪ್ರಮಾಣದ ನೀರಿನ ಅಗತ್ಯವಿದೆ. ಕೆರೆ ತುಂಬಿಸಲು ನೀರಿನ ಕೊರತೆ ಎದುರಾದರೆ ಗೊರೂರಿನ ಹೇಮಾವತಿ ಜಲಾಶಯದಿಂದ ಅಲ್ಪ ಪ್ರಮಾಣದ ನೀರನ್ನು ಬಿಡಿಸಿಕೊಳ್ಳಬೇಕಾಗುತ್ತದೆ. 46 ಕೆರೆಗಳನ್ನು ತುಂಬಿಸಲು 24 ಕಿಮೀ ನೀರನ್ನು ಸಾಗಿಸಬೇಕಾಗಿರುವುದರಿಂದ ಪ್ರಾಯೋಗಿಕವಾಗಿ ನೀರನ್ನು ಸಮೀಪದ ಕೆರೆಗಳಿಗೆ ಪೈಪುಗಳಿಂದ ಹರಿಸಿ ಪರೀಕ್ಷೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಮೂಲಕ 46 ಕೆರೆಗಳನ್ನು ತುಂಬಿಸುವ ಕಾರ್ಯ ಆರಂಭಗೊಂಡಿದ್ದು, ಬೂಕನಕೆರೆ ಮತ್ತು ಶೀಳನೆರೆ ಹೋಬಳಿಯ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಶಾಸಕ ಎಚ್.ಟಿ. ಮಂಜು ಸಂತಸ ವ್ಯಕ್ತಪಡಿಸಿದರು.

ಪ್ರಾಯೋಗಿಕವಾಗಿ ಸೋಮವಾರ ಬಳ್ಳೇಕೆರೆ ಕೆರೆಗೆ ಹೇಮಾವತಿ ನದಿಯಿಂದ ನೀರನ್ನು ಹರಿಸುವ ವೇಳೆ ವೀಕ್ಷಿಸಿ ಮಾತನಾಡಿ, ಈ ಭಾಗದ ಕೆರೆಗಳು ತುಂಬುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಲಿದೆ. ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಸಹಕಾರಿಯಾಗಲಿದೆ ಎಂದರು.

ಮೊದಲ ಹಂತದ 46 ಕೆರೆಗಳನ್ನು ತುಂಬಿಸಲು ಸುಮಾರು 300 ಎಂ.ಸಿ.ಎಫ್.ಟಿ ಪ್ರಮಾಣದ ನೀರಿನ ಅಗತ್ಯವಿದೆ. ಕೆರೆ ತುಂಬಿಸಲು ನೀರಿನ ಕೊರತೆ ಎದುರಾದರೆ ಗೊರೂರಿನ ಹೇಮಾವತಿ ಜಲಾಶಯದಿಂದ ಅಲ್ಪ ಪ್ರಮಾಣದ ನೀರನ್ನು ಬಿಡಿಸಿಕೊಳ್ಳಬೇಕಾಗುತ್ತದೆ ಎಂದರು.

46 ಕೆರೆಗಳನ್ನು ತುಂಬಿಸಲು 24 ಕಿಮೀ ನೀರನ್ನು ಸಾಗಿಸಬೇಕಾಗಿರುವುದರಿಂದ ಪ್ರಾಯೋಗಿಕವಾಗಿ ನೀರನ್ನು ಸಮೀಪದ ಕೆರೆಗಳಿಗೆ ಪೈಪುಗಳಿಂದ ಹರಿಸಿ ಪರೀಕ್ಷೆ ಮಾಡಬೇಕು. ಲೀಕೇಜ್ ಮತ್ತು ಕಸಕಡ್ಡಿಗಳು ಸಂಗ್ರಹವಾಗಿರುವ ಸಾಧ್ಯತೆಗಳು ಇರುವುದರಿಂದ ಹಾಗೂ ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ ಅವುಗಳನ್ನು ತುರ್ತಾಗಿ ಸರಿಪಡಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಒಂದೊಂದೆ ಕೆರೆಗಳಿಗೆ ನೀರು ತುಂಬಿಸಿ ಪರೀಕ್ಷೆ ಮಾಡಿದ ನಂತರ ಪೂರ್ಣಪ್ರಮಾಣದಲ್ಲಿ ನೀರನ್ನು ಹರಿಸಲಾಗುವುದು. ಶೀಘ್ರದಲ್ಲಿಯೇ ದಿನಾಂಕ ನಿಗಧಿ ಪಡಿಸಿ ಕಟ್ಟಹಳ್ಳಿ ಏತ ನೀರಾವರಿ ಮೊದಲ ಹಂತದ ಯೋಜನೆ ಲೋಕಾರ್ಪಣೆಗೊಳಿಸುವುದಾಗಿ ತಿಳಿಸಿದರು.