ಬಳ್ಳಿಗಾವಿಯಲ್ಲಿ ಅಲ್ಲಮ ಪ್ರಭು ಅನುಭವ ಶಿಲಾ ಮಂಟಪ ನಿರ್ಮಾಣಕ್ಕೆ ಅನುಮತಿ

| Published : Jan 20 2024, 02:02 AM IST

ಬಳ್ಳಿಗಾವಿಯಲ್ಲಿ ಅಲ್ಲಮ ಪ್ರಭು ಅನುಭವ ಶಿಲಾ ಮಂಟಪ ನಿರ್ಮಾಣಕ್ಕೆ ಅನುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಮ ವೈರಾಗ್ಯಮೂರ್ತಿ ಅಲ್ಲಮ ಪ್ರಭು ಜನ್ಮಸ್ಥಳ ಶಿರಾಳಕೊಪ್ಪ ಸಮೀಪದ ಬಳ್ಳಿಗಾವಿಯಲ್ಲಿ ಅವರು ಜನ್ಮತಾಳಿದ ಮನೆ ಬಿದ್ದುಹೋದ ಅವಶೇಷದ ಸಮೀಪ ಅಲ್ಲಮಪ್ರಭು ಅನುಭವ ಶಿಲಾ ಮಂಟಪ ನಿರ್ಮಾಣ ಮಾಡಲು ಪುರಾತತ್ವ ಇಲಾಖೆಯಿಂದ ಅನುಮತಿ ದೊರಕಿದೆ ಎಂದು ಬಳ್ಳಿಗಾವಿ ಅಲ್ಲಮಪ್ರಭು ಅನುಭವ ಪೀಠದ ಶಿವಲಿಂಗೇಶ್ವರ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ

ಪರಮ ವೈರಾಗ್ಯಮೂರ್ತಿ ಅಲ್ಲಮ ಪ್ರಭು ಜನ್ಮಸ್ಥಳ ಬಳ್ಳಿಗಾವಿಯಲ್ಲಿ ಅವರು ಜನ್ಮತಾಳಿದ ಮನೆ ಬಿದ್ದುಹೋದ ಅವಶೇಷದ ಸಮೀಪ ಅಲ್ಲಮಪ್ರಭು ಅನುಭವ ಶಿಲಾ ಮಂಟಪ ನಿರ್ಮಾಣ ಮಾಡಲು ಪುರಾತತ್ವ ಇಲಾಖೆಯಿಂದ ಅನುಮತಿ ದೊರಕಿದೆ.

ಬಳ್ಳಿಗಾವಿ ಅಲ್ಲಮಪ್ರಭು ಅನುಭವ ಪೀಠದ ಶಿವಲಿಂಗೇಶ್ವರ ಮಹಾಸ್ವಾಮೀಜಿ ಅವರು ಶಿರಾಳಕೊಪ್ಪದಲ್ಲಿ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ್ದು, ಜಗತ್ತಿನ ಪ್ರಥಮ ಪಾಲಿರ್ಮೆಂಟ್ ಅನುಭವ ಮಂಟಪದ ಶೂನ್ಯಪೀಠಕ್ಕೆ ಅಲ್ಲಮ ಪ್ರಭು ಪ್ರಥಮ ಅಧ್ಯಕ್ಷರಾಗಿದ್ದರು. ತಂದೆ ನಿರಂಕಾರ ಮತ್ತು ತಾಯಿ ಸುಜ್ಞಾನಿ ಅವರ ಸಮಾಧಿಗಳಿರುವ ಈ ಜಾಗದ ಬಳಿ ಅನುಭವ ಮಂಟಪ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಕಳೆದ 4 ವರ್ಷಗಳ ಹಿಂದೆ ಜಿಲ್ಲೆಯ ಸಂಸದ ಬಿ.ವೈ.ರಾಘವೇಂದ್ರ ಅಧ್ಯಕ್ಷತೆಯಲ್ಲಿ ಆನಂದಪುರ ಡಾ.ಮುರಘರಾಜೇಂದ್ರ ಸ್ವಾಮಿಗಳು ಸೇರಿದಂತೆ ಜಿಲ್ಲೆಯ ಅನೇಕ ಪೂಜ್ಯರ ಮಾಗರ್ದರ್ಶನದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ₹5 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ₹2 ಕೋಟಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಾಗಿತ್ತು. ಆದರೆ, ಆಗ ಸಂಸದ ಬಿ.ವೈ. ರಾಘವೇಂದ್ರರ ವಿಶೇಷ ಕಾಳಜಿಯಿಂದ ₹2 ಕೋಟಿ ಅನುದಾನವನ್ನು ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಮಾಡಿಸಿದ್ದರು ಎಂದು ತಿಳಿಸಿದ್ದಾರೆ.

ಅನುಭವ ಮಂಟಪದ ಕೆಲಸ ಪ್ರಾರಂಭಿಸಲು ಮುಜರಾಯಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯುವುದು ಅವಶ್ಯವಿತ್ತು. ಈಗ ಸಂಸದ ರಾಘವೇಂದ್ರ ಅವರ ವಿಶೇಷ ಕಾಳಜಿಯಿಂದ ಕರ್ನಾಟಕ ಮತ್ತು ದೆಹಲಿಯ ಪುರಾತತ್ವ ಇಲಾಖೆಯೊಡನೆ ಸತತ ಪತ್ರ ವ್ಯವಹಾರ ನಡೆಸಿ, ಅನುಭವ ಶಿಲಾ ಮಂಟಪವು ಇದೇ ಜಾಗದಲ್ಲಿ ನಿರ್ಮಿಸಲು ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದು, ಕಾಮಗಾರಿ ಪ್ರಾರಂಭಿಸಲು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದಿದ್ದಾರೆ.

ಈ ಕಾರ್ಯಕ್ಕೆ ನಿರಂತರ ಕೈ ಜೋಡಿಸಿ ಸಹಕಾರ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರಿಗೆ ಅಭಿನಂದನೆ ತಿಳಿಸುವುದಾಗಿಯೂ ಶ್ರೀಗಳು ಹೇಳಿದ್ದಾರೆ.