ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ: ಗ್ರಾಮಸ್ಥರ ವಿರೋಧ

| Published : Dec 06 2024, 08:55 AM IST

ಸಾರಾಂಶ

ಮಕ್ಕಳಗುಡಿ ಬೆಟ್ಟದ ಸಮೀಪದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಕಿರಗಂದೂರು, ತಾಕೇರಿ, ಬಿಳಿಗೇರಿ ಗ್ರಾಮದ ಅನೇಕರು ಕಿರಗಂದೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ವಿರೋಧ ವ್ಯಕ್ತಪಡಿಸಿ, ಕೂಡಲೆ ಪಂಚಾಯಿತಿ ಎನ್‌ಒಸಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಮಕ್ಕಳಗುಡಿ ಬೆಟ್ಟದ ಸಮೀಪದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಕಿರಗಂದೂರು, ತಾಕೇರಿ, ಬಿಳಿಗೇರಿ ಗ್ರಾಮದ ಅನೇಕರು ಕಿರಗಂದೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ವಿರೋಧ ವ್ಯಕ್ತಪಡಿಸಿ, ಕೂಡಲೆ ಪಂಚಾಯಿತಿ ಎನ್‌ಒಸಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪಂಚಾಯಿತಿ ಅಧ್ಯಕ್ಷೆ ತಾರಾ ಸುದೀರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ರೆಸಾರ್ಟ್ ನಿರ್ಮಾಣದಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಶಿವಕುಮಾರ್, ರೋಷನ್ ಮತ್ತಿತರರು ಹೇಳಿದರು.

೨೦೧೮ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ಮಕ್ಕಳಗುಡಿಬೆಟ್ಟ ಕುಸಿದಿತ್ತು. ಈಗ ಪಕ್ಕದಲ್ಲೇ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ನೂರಾರು ಮರಗಳನ್ನು ಕಡಿದಿದ್ದಾರೆ. ಬೆಟ್ಟ ಕುಸಿದರೆ ಅನೇಕ ಮನೆಗಳು ಭೂಸಮಾಧಿಯಾಗಲಿವೆ ಎಂದು ಎಚ್ಚರಿಕೆ ನೀಡಿದರು. ಚರ್ಚೆಯ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು ಎಂದು ಅಧ್ಯಕ್ಷೆ ಸಭೆಗೆ ಭರವಸೆ ನೀಡಿದರು.

ಕಿರಗಂದೂರು, ತಾಕೇರಿ, ಬಿಳಿಗೇರಿ ಗ್ರಾಮದಲ್ಲಿ ಕಾಫಿ ತೋಟದೊಳಗೆ ವಿದ್ಯುತ್ ಮಾರ್ಗ ಹಾದುಹೋಗಿದ್ದು, ಮಳೆಗಾಲದಲ್ಲಿ ಮರಬಿದ್ದರೆ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ. ವಿದ್ಯುತ್ ಮಾರ್ಗವನ್ನು ಮುಖ್ಯರಸ್ತೆ ಬದಿಯಲ್ಲಿ ಹಾಕಬೇಕು ಎಂದು ತಾಕೇರಿ ಗ್ರಾಮದ ಕುಟ್ಟಪ್ಪ ಬೇಡಿಕೆಯಿಟ್ಟರು.

ವಿದ್ಯುತ್ ಮಾರ್ಗ ಬದಲಾವಣೆಗೆ ೮ ಕೋಟಿ ರು. ಬಿಡುಗಡೆ ಹಂತದಲ್ಲಿದ್ದು, ಹಣ ಬಿಡುಗಡೆಯ ನಂತರ ವಿದ್ಯುತ್ ಮಾರ್ಗ ಸರಿಪಡಿಸಲಾಗುವುದು ಎಂದು ಜೆಇ ಲೋಕೇಶ್ ಭರವಸೆ ನೀಡಿದರು.

ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿಲ್ಲ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕೂಡಲೆ ಕಿರಗಂದೂರು, ತಾಕೇರಿ, ಬಿಳಿಗೇರಿ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಪೊನ್ನಪ್ಪ ಆಗ್ರಹಿಸಿದರು.

ನೋಡೆಲ್‌ ಅಧಿಕಾರಿ ಕೆ.ಪಿ.ವೀರಣ್ಣ, ಪಂಚಾಯಿತಿ ಉಪಾಧ್ಯಕ್ಷ ಎಂ.ಎಂ.ಬೆಳ್ಳಿಯಪ್ಪ, ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಬಿ.ಸತೀಶ್, ಪಂಚಾಯಿತಿ ಸದಸ್ಯರಾದ ಎಸ್.ಕೆ.ರಘು, ಎಂ.ಪಿ.ತಿಮ್ಮಯ್ಯ, ಶುಭರಾಣಿ ಸುನಿಲ್, ಎಚ್.ಕೆ.ಸುದೇವ, ಡಿ.ಆರ್.ರುದ್ರಪ್ಪ, ಶ್ಯಾಮಲಾ ಶಿವಕುಮಾರ್, ಕುಸುಮಾ ಸೋಮಪ್ಪ ಇದ್ದರು.