ಸಾರಾಂಶ
ಕೊಪ್ಪಳ:
ಈ ಹಿಂದೆ ಎಂಎಸ್‌ಪಿಎಲ್ ಮತ್ತು ಆರೆಸ್ಸ ಕಂಪನಿಗೆ ಸ್ವಾಧೀನ ಮಾಡಿಕೊಂಡಿರುವ ಭೂಮಿಯಲ್ಲಿಯೇ ಈಗ ಹೆಸರು ಬದಲಾಯಿಸಿ, ಬಿಎಸ್‌ಪಿಎಲ್ ಕಾರ್ಖಾನೆ ಪ್ರಾರಂಭಿಸಲಾಗುತ್ತಿದೆ. ಇದಕ್ಕೆ ಸರ್ಕಾರದ ಅನುಮತಿಯೂ ನಮಗೆ ದೊರೆತಿದೆ. ಅನುಮತಿ ಇಲ್ಲದೆ ಕಾಮಗಾರಿ ಆರಂಭಿಸಲು ಆಗುತ್ತದೆಯೇ? ಎಂದು ಬಿಎಸ್‌ಪಿಎಲ್ ಕಂಪನಿಯ ಎಜಿಎಂ ಪ್ರವೀಣಕುಮಾರ ಹೇಳಿದ್ದಾರೆ. ಸಾರ್ವಜನಿಕರ ಅಹವಾಲು ಸಹ ಆಲಿಸಿದ್ದೇವೆ ಎಂದು ಅವರು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.ಬಿಎಸ್‌ಪಿಎಲ್ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿದ್ದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ ಬುಧವಾರದಿಂದ ಕಾಮಗಾರಿ ನಿಲ್ಲಿಸಲಾಗಿದೆ. ಆದರೆ, ಈಗ ಬಿಎಸ್‌ಪಿಎಲ್ ಎಂದು ನಾಮಕರಣ ಮಾಡಿದ್ದರೂ ಸಹ ಈ ಹಿಂದೆಯೇ ಎಂಎಸ್‌ಪಿಎಲ್ ಹಾಗೂ ಆರೆಸ್ಸ್ ಕಂಪನಿಯ ಹೆಸರಿನಲ್ಲಿ ಅನುಮತಿ ಪಡೆಯುವುದು, ಸಾರ್ವಜನಿಕ ಅಹವಾಲು ಆಲಿಸುವುದು ಸೇರಿದಂತೆ ನಿಯಮಾನುಸಾರ ಎಲ್ಲ ಪ್ರಕ್ರಿಯೇ ಪೂರ್ಣಗೊಳಿಸಲಾಗಿದೆ ಎಂದರು.
ಸಾರ್ವಜನಿಕ ಅಹವಾಲು ಆಲಿಸಿದ್ದು ಯಾವಾಗ ಮತ್ತು ಅದಕ್ಕೆ ಯಾರ್‍ಯಾರು? ಹಾಜರಾಗಿದ್ದರೂ ಎನ್ನುವ ಮಾಹಿತಿ ಕೇಳಿದಾಗ, ನನ್ನ ಬಳಿ ಈಗ ಮಾಹಿತಿ ಇಲ್ಲ. ಇದು ನಾನು, ಈ ಕಂಪನಿಗೆ ಬರುವುದಕ್ಕೂ ಮೊದಲೇ ಆಗಿರುವ ಪ್ರಕ್ರಿಯೇ ಎಂದಿದ್ದಾರೆ.ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆಗೆ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಅದಕ್ಕಿಂತ ಮೊದಲೇ ಹೇಗೆ ಪರವಾನಗಿ ಪಡೆಯಲಾಯಿತು ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರ ಇರಲಿಲ್ಲ. ಈ ಹಿಂದೆ ಎಂಎಸ್‌ಪಿಎಲ್ ಕಾರ್ಖಾನೆ ಆರಂಭಕ್ಕೆ ಸಾರ್ವಜನಿಕ ಅಹವಾಲು ಕರೆದಾಗ ನಿಮ್ಮ ಕಾರ್ಖಾನೆಯ ಸಾಮರ್ಥ್ಯ ಎಷ್ಟಿತ್ತು, ಅದನ್ನು ವಿಸ್ತರಿಸಲು ಪುನಃ ಸಾರ್ವಜನಿಕ ಅಹವಾಲು ಅಲಿಸಬೇಕಲ್ಲ ಎಂಬ ಪ್ರಶ್ನೆಗೆ, ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾನು ಈಗಲೇ ಉತ್ತರಿಸಲು ಆಗುವುದಿಲ್ಲ. ಸಮಯ ಬಂದಾಗ, ಸೂಕ್ತ ಸಂದರ್ಭದಲ್ಲಿ ಹಿರಿಯರು ಉತ್ತರಿಸುತ್ತಾರೆ ಎಂದರು.
ಬಸಾಪುರ ಕೆರೆಯನ್ನು ಸಹ ನಾವು ಪಡೆದಿದ್ದೇವೆ. ಹೈಕೋರ್ಟ್ ಸುಪ್ರೀಂ ಕೋರ್ಟ್‌ನಲ್ಲಿ ಇಡೀ ಭೂಸ್ವಾಧೀನ ಪ್ರಕ್ರಿಯೆ ನಮ್ಮ ಪರವಾಗಿ ಆಗಿದೆ. ಹೀಗಾಗಿ, ಕೆರೆಯೂ ನಮಗೆ ಬಂದಿದೆ. ಕೆರೆಯನ್ನು ಇದ್ದ ಹಾಗೆ ಅಲ್ಲ, ಇನ್ನಷ್ಟು ವಿಸ್ತಾರವಾಗಿ ನಮ್ಮ ಜಾಗೆಯಲ್ಲಿ ನಿರ್ಮಿಸಿಕೊಳ್ಳುತ್ತೇವೆ ಎಂದರು.