ಹೊಸ ಬಡಾವಣೆಗೆ ನಿಯಮ ಮೀರಿ ಅನುಮತಿ?

| Published : May 13 2024, 12:01 AM IST

ಸಾರಾಂಶ

ಯಲಬುರ್ಗಾ ಪಟ್ಟಣದಲ್ಲಿ ಕೆಲವು ಬಡಾವಣೆಗಳು ಅಭಿವೃದ್ಧಿಯಾಗದಿದ್ದರೂ ಸರ್ಕಾರದ ಆದೇಶ ಉಲ್ಲಂಘಿಸಿ ಪಪಂ ಫಾರ್ಮ್‌ ನಂ. 3 ನೀಡಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಪಪಂ ಸದಸ್ಯರೇ ಆಗ್ರಹಿಸಿದ್ದಾರೆ.

ಶಿವಮೂರ್ತಿ ಇಟಗಿ

ಯಲಬುರ್ಗಾ: ಪಟ್ಟಣದಲ್ಲಿ ಕೆಲವು ಬಡಾವಣೆಗಳು ಅಭಿವೃದ್ಧಿಯಾಗದಿದ್ದರೂ ಸರ್ಕಾರದ ಆದೇಶ ಉಲ್ಲಂಘಿಸಿ ಪಪಂ ಫಾರ್ಮ್‌ ನಂ. 3 ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ (ಎನ್)ಗೆ ಸಂಬಂಧಿಸಿದ ನಿಯಮ ಮತ್ತು ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಅಭಿವೃದ್ಧಿಗೊಳ್ಳದ ಬಡಾವಣೆಗಳ ಮಾಲೀಕರಿಗೆ ನಿವೇಶನಗಳ ಮಾರಾಟಕ್ಕೆ ಆನ್‌ಲೈನ್ ದಾಖಲೆ (ಫಾರ್ಮ್ ನಂ. ೩) ಅಕ್ರಮವಾಗಿ ನೀಡಲಾಗಿದೆ ಎಂದು ಪಪಂ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿಯಮಗಳ ಪ್ರಕಾರ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಹೊಂದಿದ ಬಡಾವಣೆ ಅಭಿವೃದ್ಧಿಪಡಿಸುವ ಉದ್ದೇಶಕ್ಕೆ ಬಡಾವಣೆ ಮಾಲೀಕರಿಗೆ ಪ್ರಾರಂಭದಲ್ಲಿ ಶೇ. ೪೪ರಷ್ಟು ನಿವೇಶನಗಳನ್ನು ಮಾತ್ರ ಮಾರಾಟ ಮಾಡುವುದಕ್ಕೆ ಅನುಮತಿ ನೀಡಬೇಕಾಗುತ್ತದೆ. ಉಳಿದ ಶೇ. ೫೬ರಷ್ಟು ನಿವೇಶನಗಳನ್ನು ಮಾರಾಟ ಮಾಡಬೇಕಾದರೆ ಸಂಬಂಧಿಸಿದ ಬಡಾವಣೆಯಲ್ಲಿ ಮೂಲ ಸೌಲಭ್ಯಗಳಾದ ಡಾಂಬರ್, ಕಾಂಕ್ರೀಟ್ ರಸ್ತೆ ಮತ್ತು ಚರಂಡಿ, ವಿದ್ಯುತ್ ವ್ಯವಸ್ಥೆ, ಅರಣ್ಯೀಕರಣ, ಕುಡಿಯುವ ನೀರು ಹೀಗೆ ಅಗತ್ಯ ಮೂಲಸೌಲಭ್ಯಗಳನ್ನು ಕೈಗೊಳ್ಳುವುದು ಕಡ್ಡಾಯ.

ಮೂಲ ಸೌಲಭ್ಯಗಳನ್ನು ಕಲ್ಪಿಸಿದ್ದನ್ನು ಖಚಿತಪಡಿಸಿಕೊಂಡ ಆನಂತರವಷ್ಟೇ ಉಳಿದ ನಿವೇಶನಗಳ ಮಾರಾಟಕ್ಕೆ ಪಟ್ಟಣ ಪಂಚಾಯಿತಿ ನಮೂನೆ ೩ರ ಮೂಲಕ ಅನುಮತಿ ನೀಡಬೇಕು. ಇಲ್ಲದಿದ್ದರೆ ಪೂರ್ಣಪ್ರಮಾಣದ ಅಭಿವೃದ್ಧಿಯಾಗುವ ವರೆಗೂ ನಿವೇಶನಗಳ ಮಾರಾಟಕ್ಕೆ ಅನುಮತಿ ನೀಡುವುದನ್ನು ತಡೆಹಿಡಿಯಬೇಕು ಎಂಬುದು ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿದೆ.

ಆದೇಶ ಗಾಳಿ ತೂರಿದ್ದಾರೆ: ಆದರೆ, ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಕೆಲವು ಜನಪ್ರತಿನಿಧಿಗಳು ಮತ್ತು ಸಿಬ್ಬಂದಿ, ಬಡಾವಣೆಗಳ ಮಾಲೀಕರೊಂದಿಗೆ ಒಳಒಪ್ಪಂದ ಮಾಡಿಕೊಂಡು ಆದೇಶಕ್ಕೆ ವಿರುದ್ಧವಾಗಿ ದಾಖಲೆಗಳನ್ನು ನೀಡಿದ್ದಾರೆ ಎಂದು ಪಟ್ಟಣದ ನಿವಾಸಿಗಳು ಹೇಳುತ್ತಾರೆ.

ನಿವೇಶನಗಳು ಮಾರಾಟ: ಆರೋಪ ಕೇಳಿ ಬಂದ ಹಿನ್ನೆಲೆ ಕಳೆದ ೬ ತಿಂಗಳ ಹಿಂದೆ ನಿವೇಶನಕ್ಕೆ ಸಂಬಂಧಪಟ್ಟ ವಿಷಯಕ್ಕೆ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಯಾವುದೇ ಉತ್ತರ ಬಂದಿಲ್ಲ. ೨೦೧೯ರ ಫೆಬ್ರುವರಿಯಿಂದ ಇಲ್ಲಿಯ ವರೆಗೆ ಅಭಿವೃದ್ಧಿಗೊಳ್ಳದ ಹೊಸ ಬಡಾವಣೆಗಳಲ್ಲಿನ ನೂರಾರು ನಿವೇಶನಗಳ ಮಾರಾಟಕ್ಕೆ ಅನುಮತಿ ನೀಡಿದ್ದಾರೆ ಎಂದು ನಿವಾಸಿಗಳು ಹೇಳುತ್ತಾರೆ.

ಅನಧಿಕೃತ ಲೇಔಟ್‌ಗಳು: ಪಟ್ಟಣದ ಸಾಯಿಬಾಬಾ ದೇವಸ್ಥಾನ ಹತ್ತಿರ ಪುಟ್ಟರಾಜ್ ಲೇಔಟ್, ಸರ್ವಮಂಗಳಾ, ಮುಧೋಳ ರಸ್ತೆಯ ಲೇಔಟ್ ಹಾಗೂ ಮಾರನಾಳ ರಸ್ತೆ, ಮಲಕಸಮುದ್ರ ರಸ್ತೆಗೆ ಹೊಂದಿಕೊಂಡಿರುವ ಲೇಔಟ್‌ಗಳಲ್ಲಿ ಉದ್ಯಾನ ಮತ್ತು ಸಾರ್ವಜನಿಕ ಬಳಕೆ ಪ್ರದೇಶಗಳನ್ನು ಹೊರತುಪಡಿಸಿ ಒಟ್ಟು ೫೨ ಅನಧಿಕೃತ ಲೇಔಟ್‌ಗಳು ಇದ್ದು, ಅವುಗಳ ಅನುಮತಿ ಕುರಿತು ಸೂಕ್ತ ತನಿಖೆ ಮಾಡಿಸಿ ಎಂದು ಜಿಲ್ಲಾಧಿಕಾರಿಗೆ ಯಲಬುರ್ಗಾ ಪಟ್ಟಣ ಪಂಚಾಯಿತಿಯ ಸದಸ್ಯರು ಪತ್ರ ಬರೆದಿದ್ದಾರೆ. ೫ ತಿಂಗಳ ಹಿಂದೆ ತನಿಖೆ ಮಾಡುವ ನೆಪ ಮಾಡಿ, ಕೈ ತೊಳೆದುಕೊಂಡು ಹೋದವರು ಮತ್ತೆ ಲೇಔಟ್ ಸ್ಥಳಕ್ಕೆ ಬಂದಿಲ್ಲ ಎಂದು ಸದಸ್ಯ ಹನುಮಂತಪ್ಪ ಭಜಂತ್ರಿ ಗಂಭೀರ ಆರೋಪ ಮಾಡಿದ್ದಾರೆ.ಯಲಬುರ್ಗಾ ಪಟ್ಟಣದ ಸುಮಾರು ೫೨ ಅನಧಿಕೃತ ಲೇಔಟ್‌ಗಳಲ್ಲಿ ಸರ್ಕಾರದ ನಿಯಮ ಹಾಗೂ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಪಪಂ ಅಧಿಕಾರಿಗಳು ನಿವೇಶನಗಳ ಮಾರಾಟಕ್ಕೆ ಆನ್‌ಲೈನ್ ದಾಖಲೆ (ಫಾರ್ಮ್ ನಂ ೩) ನೀಡಿದ್ದಾರೆ. ತನಿಖೆ ಮಾಡುವಂತೆ ಜಿಲ್ಲಾಧಿಕಾರಿಗೆ ನಾನು ಹಾಗೂ ಕೆಲವು ಪಪಂ ಸದಸ್ಯರು ಸೇರಿ ಪತ್ರ ಬರೆದಿದ್ದೇವೆ. ಕೂಡಲೇ ತನಿಖೆಗೆ ಜಿಲ್ಲಾಧಿಕಾರಿ ಆದೇಶಿಸಬೇಕು. ಇದರಲ್ಲಿ ಲೋಪ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಯಲಬರ್ಗಾ ಪಟ್ಟಣ ಪಂಚಾಯಿತಿ ಸದಸ್ಯ ಹನುಮಂತಪ್ಪ ಭಜಂತ್ರಿ ಹೇಳುತ್ತಾರೆ.