ಹಿಂದೆ ರಸ್ತೆಯ ಸ್ಥಿತಿ ಹದಗೆಟ್ಟಿದ್ದ ಹಿನ್ನೆಲೆ ಜಿಲ್ಲಾಧಿಕಾರಿಗಳು ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ, ರಸ್ತೆ ದುರಸ್ತಿ ಮಾಡುವಂತೆ ಎನ್ಪಿಸಿಐಎಲ್ಗೆ ಸೂಚಿಸಿದ್ದರು.
ಕಾರವಾರ: ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಗೆ ಅಗತ್ಯವಾದ ನಿರ್ಮಾಣ ಸಾಮಗ್ರಿಗಳ ಸಾಗಣೆಗೆ ಅನುಕೂಲವಾಗುವಂತೆ ಕೈಗಾ- ಕಾರವಾರ ರಾಜ್ಯ ಹೆದ್ದಾರಿ 06ರಲ್ಲಿ ಭಾರಿ ವಾಹನಗಳ ಸಂಚಾರದ ಮೇಲಿದ್ದ ನಿರ್ಬಂಧವನ್ನು ಜಿಲ್ಲಾಧಿಕಾರಿಗಳು ತೆರವುಗೊಳಿಸಿದ್ದಾರೆ.
ಆದರೆ, ಪ್ರತಿ ಆಕ್ಸಲ್ಗೆ ಗರಿಷ್ಠ 15 ಮೆಟ್ರಿಕ್ ಟನ್ ಭಾರ ಸಾಗಿಸುವ ಷರತ್ತು ವಿಧಿಸಲಾಗಿದ್ದು, ಇದನ್ನು ಪಾಲಿಸುವ ಜವಾಬ್ದಾರಿಯನ್ನು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ವಹಿಸಿಕೊಂಡಿದೆ.ರಾಷ್ಟ್ರೀಯ ಪ್ರಾಮುಖ್ಯತೆಯ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಯನ್ನು 2031- 32ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆ ಯೋಜನೆಗೆ ಅಗತ್ಯವಾದ ನಿರ್ಮಾಣ ಸಾಮಗ್ರಿ ಹಾಗೂ ಇತರ ಸರಕುಗಳ ಸಾಗಣೆಗೆ ಕೈಗಾ- ಕಾರವಾರ ರಾಜ್ಯ ಹೆದ್ದಾರಿ ಪ್ರಮುಖ ಸಂಪರ್ಕ ಮಾರ್ಗವಾಗಿದೆ.ಹಿಂದೆ ರಸ್ತೆಯ ಸ್ಥಿತಿ ಹದಗೆಟ್ಟಿದ್ದ ಹಿನ್ನೆಲೆ ಜಿಲ್ಲಾಧಿಕಾರಿಗಳು ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ, ರಸ್ತೆ ದುರಸ್ತಿ ಮಾಡುವಂತೆ ಎನ್ಪಿಸಿಐಎಲ್ಗೆ ಸೂಚಿಸಿದ್ದರು. ಅದರಂತೆ ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆ ಪರಿಶೀಲನೆ ನಡೆಸಿದ್ದರು. ಬಳಿಕ ಅ. 16ರಂದು ಜಿಲ್ಲಾಧಿಕಾರಿಗಳು ಸಂಚಾರ ನಿರ್ಬಂಧವನ್ನು ತೆರವುಗೊಳಿಸಿದ್ದಾರೆ.ಹೆದ್ದಾರಿಯ ಕೆರವಡಿ- ಮಲ್ಲಾಪುರ ನಡುವಿನ ರಸ್ತೆ ಪುನರ್ನಿರ್ಮಾಣ ಮತ್ತು ವಿಸ್ತರಣಾ ಕಾಮಗಾರಿಯನ್ನು ಎನ್ಪಿಸಿಐಎಲ್ ಗುತ್ತಿಗೆ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳು ವಿಧಿಸಿರುವ ಷರತ್ತುಗಳಂತೆ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನಗಳಲ್ಲಿ ಪ್ರತಿ ಆಕ್ಸಲ್ಗೆ 15 ಮೆಟ್ರಿಕ್ ಟನ್ ಮಿತಿಯನ್ನು ಮೀರದಂತೆ ಸಂಸ್ಥೆ ಕ್ರಮ ಕೈಗೊಂಡಿದೆ.ಮುಂದಿನ ದಿನಗಳಲ್ಲಿ ರಸ್ತೆಗೆ ಮತ್ತೆ ದುರಸ್ತಿ ಅಗತ್ಯವಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಎನ್ಪಿಸಿಐಎಲ್ ಪ್ರಕಟಣೆ ತಿಳಿಸಿದೆ.