ಪಟಾಕಿ ಮಾರಾಟಕ್ಕೆ ಅನುಮತಿ ಕಡ್ಡಾಯ

| Published : Oct 28 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ದೀಪಾವಳಿ ಪ್ರಯುಕ್ತ ನಗರದ ಕೆಲವು ಕಡೆ ತಾತ್ಕಾಲಿಕ ಹಾಗೂ ಖಾಯಂ ವ್ಯಾಪಾರಸ್ಥರು ಪಟಾಕಿ ಮಾರಾಟ ಮಾಡಲು ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಸೋಮವಾರದೊಳಗೆ ದಾಖಲಾತಿಗಳನ್ನು ಸಲ್ಲಿಸಿ ಪರವಾನಿಗೆ ಪಡೆಯುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದೀಪಾವಳಿ ಪ್ರಯುಕ್ತ ನಗರದ ಕೆಲವು ಕಡೆ ತಾತ್ಕಾಲಿಕ ಹಾಗೂ ಖಾಯಂ ವ್ಯಾಪಾರಸ್ಥರು ಪಟಾಕಿ ಮಾರಾಟ ಮಾಡಲು ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಸೋಮವಾರದೊಳಗೆ ದಾಖಲಾತಿಗಳನ್ನು ಸಲ್ಲಿಸಿ ಪರವಾನಿಗೆ ಪಡೆಯುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೀಪಾವಳಿ ಪ್ರಯುಕ್ತ ನಡೆದ ಜಿಲ್ಲೆಯ ಪಟಾಕಿ ವ್ಯಾಪಾರಸ್ಥರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ತಾಲೂಕಾ ಮಟ್ಟದಲ್ಲಿ ತಹಸೀಲ್ದಾರ್‌ ಪರವಾನಿಗೆಗೆ ಶಿಫಾರಸು ಮಾಡಬೇಕು. ವ್ಯಾಪಾರಸ್ಥರು ಪಟಾಕಿಗಳನ್ನು ಮಾರಾಟ ಮಾಡಲು ತಾತ್ಕಾಲಿಕ ಮಳಿಗೆ ಹಾಕಲು ಪ್ರತ್ಯೇಕ ಜಾಗ ಗುರುತಿಸಬೇಕು. ಎಲ್ಲ ವ್ಯಾಪಾರಸ್ಥರು ಸುರಕ್ಷಿತ ವಿಧಾನಗಳನ್ನು ಅಳವಡಿಕೆ ಖಾತ್ರಿಪಡಿಸಿಕೊಂಡು ಪರವಾನಗಿಗೆ ಶಿಫಾರಸ್ಸು ಮಾಡಬೇಕು. ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಈ ಬಗ್ಗೆ ನಾಳೆಯೇ ಎಲ್ಲಾ ತಾಲೂಕಿನಲ್ಲಿ ತಹಸೀಲ್ದಾರ್‌ ನೇತೃತ್ವದಲ್ಲಿ ಸಮಿತಿ ರಚಿಸಿ ಸಭೆ ನಡೆಸಿ ಬೆಂಕಿ-ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಅಗತ್ಯ ಸೂಚನೆಗಳನ್ನು ನೀಡುವಂತೆ ಸೂಚಿಸಿದರು.

ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಪರವಾನಿಗೆ ನೀಡಲಾಗುವುದು. ಅಂಗಡಿಗಳಲ್ಲಿ ಅಗತ್ಯಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಪಟಾಕಿಗಳ ಸಂಗ್ರಹಣೆ ಮಾಡಕೂಡದು. ಬೆಂಕಿ ಅವಘಡ ಸಂಭವಿಸದಂತೆ, ಮರಳು, ನೀರು, ಅಗ್ನಿ ನಿರೋಧಕ ಮುಂಜಾಗೃತ ಕ್ರಮಗಳನ್ನು ಅಳವಡಿಸಿದ ಕುರಿತು ಪರಿಶೀಲನೆ ನಂತರವೇ ತಹಸೀಲ್ದಾರ್‌ರು ಪರವಾನಗಿಗೆ ಶಿಫಾರಸ್ಸು ಮಾಡಬೇಕು ಎಂದು ಹೇಳಿದರು.ಗ್ರಾಪಂ, ಪಪಂ, ನಗರ ಪ್ರದೇಶಗಳಲ್ಲಿ ಗುರುತಿಸಿದ ಪ್ರದೇಶಗಳಲ್ಲಿ ಅಂಗಡಿಗಳ ನಡುವೆ ಸಾಕಷ್ಟು ಅಂತರ ಇರಬೇಕು, ಸಂತೆ, ಶಾಲೆ, ಹೆಚ್ಚು ಜನಸಂದಣಿ ಪ್ರದೇಶಗಳಲ್ಲಿ ಪಟಾಕಿ ಅಂಗಡಿ ಹಾಕದಂತೆ ನೋಡಿಕೊಳ್ಳಬೇಕು. ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಹಸಿರು ಪಟಾಕಿ ಸಿಡಿಸಲು ಅವಕಾಶ ಇದ್ದು, ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಸಭೆಯಲ್ಲಿ ಎಸ್ಪಿ ಪ್ರಸನ್ನ ದೇಸಾಯಿ, ವಿಜಯಪುರ ಎಸಿ ಗುರುನಾಥ ದಡ್ಡೆ, ಇಂಡಿ ಎಸಿ ಅಬೀದ್‌ ಗದ್ಯಾಳ ಸೇರಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.