ಸಾರಾಂಶ
ವಿಜಯಪುರ : ಜಿಲ್ಲೆಯಲ್ಲಿನ ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರ ನೇಮಕಾತಿಗಾಗಿ ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಗುರುವಾರ ಜಿಪಂ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜುಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು, ಅವರೊಂದಿಗೆ ಸಂಯೋಜನೆ ಮಾಡಿ, ವೈದ್ಯರ ಹಾಗೂ ಇತರ ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣವನ್ನು ತಗ್ಗಿಸಲು ಅಗತ್ಯ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆಗಳಲ್ಲಿರುವ ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸೌಜನ್ಯದಿಂದ ಮಾನವೀಯತೆಯಿಂದ ವರ್ತಿಸಬೇಕು. ಜಿಲ್ಲೆಯಲ್ಲಿ ಭ್ರೂಣ ಹತ್ಯೆ ತಡೆಗೆ ಸೂಕ್ತ ಜಾಗೃತಿ ಹಾಗೂ ತಿಳಿವಳಿಕೆ ಮೂಡಿಸಬೇಕು. ಭ್ರೂಣ ಹತ್ಯೆ ತಡೆಗೆ ತಳಮಟ್ಟದಿಂದ ಯೋಜನೆ ರೂಪಿಸಿ, ಭ್ರೂಣ ಹತ್ಯೆಯ ಮಾಹಿತಿ ನೀಡುವವರಿಗೆ ಬಹುಮಾನವನ್ನು ಘೋಷಿಸುವ ಮೂಲಕ ಮಾಹಿತಿ ಪಡೆದುಕೊಂಡು ಮುಂಜಾಗ್ರತೆ ಕ್ರಮ ಕೈಗೊಂಡು ಭ್ರೂಣ ಹತ್ಯೆ ತಡೆಯಲು ಕ್ರಮ ವಹಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡೆಂಘೀ ಹರಡದಂತೆ ಕ್ರಮ ವಹಿಸಿ:
ಮಳೆಗಾಲ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಮುದಾಯದ ಸಹಭಾಗಿತ್ವದಲ್ಲಿ ನೀರು ಪರಿಕರಗಳನ್ನು ಸ್ವಚ್ಛಗೊಳಿಸುವ ಕಾರ್ಯ ಹಮ್ಮಿಕೊಂಡು ಡೆಂಘೀ ಹರಡದಂತೆ ಕ್ರಮ ವಹಿಸಬೇಕು. ಮನೆಗಳಲ್ಲಿ ಅನವಶ್ಯಕ ಪಾತ್ರಗಳಲ್ಲಿ ಹೆಚ್ಚು ನೀರು ಸಂಗ್ರಹಣೆ ಆಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಮನೆಗಳ ಸುತ್ತ-ಮುತ್ತ ಅನವಶ್ಯಕವಾಗಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.
ಮಕ್ಕಳ ಆರೋಗ್ಯದ ಮೇಲೆ ನಿಗಾರ ಇರಲಿ:
ಸಾರ್ವಜನಿಕರಿಗೆ ಆರೋಗ್ಯ ಸಲಹೆಗಳನ್ನು ಕಾಲಕಾಲಕ್ಕೆ ನೀಡಬೇಕು. ತೀವ್ರ ರಕ್ತ ಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಐರನ್ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ಬಳಸುವಂತೆ ತಿಳಿವಳಿಕೆ ನೀಡಬೇಕು. ಪ್ರತಿ ಗ್ರಾಮ ಮಟ್ಟದಲ್ಲಿ ಈ ಕಾರ್ಯಕ್ಕೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಜಾಗೃತಿ ತೀವ್ರ ಜಾಗೃತಿ ಮೂಡಿಸಬೇಕು. ಅಂಗನವಾಡಿಗಳಲ್ಲಿನ ಮಕ್ಕಳ ಆರೋಗ್ಯ ತಪಾಸಣೆಗೆ ತೀವ್ರ ನಿಗಾ ವಹಿಸಬೇಕು. ಮಕ್ಕಳಿಗೆ ಹೆಚ್ಚು ಪೌಷ್ಟಿಕ ಆಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.
ಇ-ಸಂಜೀವಿನಿ ಕುರಿತು ಮಾಹಿತಿ ನೀಡಿ:
ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿ ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ರಾಜ್ಯದಲ್ಲಿ ಡೆಂಘೀ ಜ್ವರ ಹೆಚ್ಚುತ್ತಿರುವ ಕಾರಣ ಮುಂಜಾಗ್ರತೆ ಕ್ರಮ ವಹಿಸಿಬೇಕು. ಪ್ರತಿ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತರು ಮನೆ ಮನೆ ತೆರಳಿ ಡೆಂಘೀ ಕುರಿತು ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ತಿಳಿಸಿದರು. ರಕ್ತದೊತ್ತಡ ಹಾಗೂ ಮಧುಮೇಹಗಳಂತಹ ರೋಗಗಳನ್ನು ತಡೆಗಟ್ಟಲು ಯೋಗ ಅಭ್ಯಾಸ ಮಾಡುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು. ಈ ಕುರಿತು ಆಯುಷ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಯೋಗ ಮಾಡುವಂತೆ ಸಾರ್ವಜನಿಕರಿಗೆ ಪ್ರೇರೇಪಿಸಬೇಕು. ಇ-ಸಂಜೀವಿನಿ ಕುರಿತು ವ್ಯಾಪಕವಾಗಿ ಮಾಹಿತಿ ಒದಗಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷೆ ಕಾಂತಾ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್, ಅಭಿಯಾನ ನಿರ್ದೇಶಕ ನವೀನ್ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಶ್ರೀನಿವಾಸ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಸವರಾಜ ಹುಬ್ಬಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ ಸೇರಿದಂತೆ ಆರೋಗ್ಯ ಇಲಾಖೆ ತಾಲೂಕಾ ವೈದ್ಯಾಧಿಕಾರಿಗಳು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದಿದ್ರೆ ಕ್ರಮ
ಜಿಲ್ಲೆಯಲ್ಲಿನ ಆರೋಗ್ಯ ಇಲಾಖೆ ಸಿಬ್ಬಂದಿ ನಿಗದಿತ ಅವಧಿಗೆ ಕರ್ತವ್ಯಕ್ಕೆ ಹಾಜರಾಗಬೇಕು. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ರೇಟ್ ಬೋರ್ಡ್ ಪ್ರದರ್ಶನ ಮಾಡಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಮುತುವರ್ಜಿ ವಹಿಸಿ ಹೆಚ್ಚಿನ ನಿಗಾ ವಹಿಸುವಂತೆ ಸಚಿವರು ಸೂಚಿಸಿದರು.